ADVERTISEMENT

ಹುಬ್ಬಳ್ಳಿ: ಮಹಿಳಾ ಸ್ನೇಹಿ ಆಗಲಿವೆ ಶೌಚಾಲಯಗಳು

ನಗರದ 35 ಶೌಚಾಲಯಗಳಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ ಯಂತ್ರ ಅಳವಡಿಕೆ ಯೋಜನೆ

ಹಿತೇಶ ವೈ.
Published 12 ಡಿಸೆಂಬರ್ 2021, 5:32 IST
Last Updated 12 ಡಿಸೆಂಬರ್ 2021, 5:32 IST
ಸ್ಯಾನಿಟರಿ ಪ್ಯಾಡ್‌ ಸುಡುವ ಯಂತ್ರ (ಸಾಂದರ್ಭಿಕ ಚಿತ್ರ)
ಸ್ಯಾನಿಟರಿ ಪ್ಯಾಡ್‌ ಸುಡುವ ಯಂತ್ರ (ಸಾಂದರ್ಭಿಕ ಚಿತ್ರ)   

ಹುಬ್ಬಳ್ಳಿ: ಸ್ವಚ್ಛತೆ ಕೊರತೆಯಿಂದಾಗಿ ನಗರದ ಸಾರ್ವಜನಿಕ ಶೌಚಾಲಯಗಳ ಬಳಕೆ ಜನರಿಗೆ ಮೊದಲಿನಿಂದಲೂ ಸವಾಲಾಗಿದೆ. ಅದರಲ್ಲೂ ಮಹಿಳೆಯರಿಗೆ ಋತುಚಕ್ರದ ಸಂದರ್ಭದಲ್ಲಿ ಅನೈರ್ಮಲ್ಯ ಸಮಸ್ಯೆ, ಸ್ಯಾನಿಟರಿ ಪ್ಯಾಡ್‌ ಖರೀದಿಸುವುದು ಮತ್ತು ಅದನ್ನು ವಿಲೇವಾರಿ ಮಾಡುವುದು ಅತ್ಯಂತ ಸಂಕಷ್ಟದ ಸ್ಥಿತಿ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಹುಬ್ಬಳ್ಳಿ– ಧಾರವಾಡ ಪಾಲಿಕೆ ಮುಂದಾಗಿದೆ.

ಹುಬ್ಬಳ್ಳಿ–ಧಾರವಾಡ ಪಾಲಿಕೆ ವ್ಯಾಪ್ತಿಯ ಆಯ್ದ 35 ಸಮುದಾಯ ಶೌಚಾಲಯ ಹಾಗೂ ಸಾರ್ವಜನಿಕ ಮಹಿಳಾ ಶೌಚಾಲಯಗಳಲ್ಲಿ ಸ್ಯಾನಿಟರಿ ಪ್ಯಾಡ್‌ (ಇರುವ) ವೆಂಡಿಂಗ್‌ ಯಂತ್ರ, ಸ್ಯಾನಿಟರಿ ಪ್ಯಾಡ್‌ ಸುಡುವ ಯಂತ್ರ ಮತ್ತು ಜನಾಭಿಪ್ರಾಯ ಯಂತ್ರ ಅಳವಡಿಸಲು ಪಾಲಿಕೆ ಮುಂದಾಗಿದೆ.

ಪಾಲಿಕೆಯು 2020–21ನೇ ಸಾಲಿನ ಸ್ವಚ್ಛ ಸರ್ವೇಕ್ಷಣದಲ್ಲಿ ಉತ್ತಮ ರ್‍ಯಾಂಕ್‌ ಗಳಿಸಿದೆ. 2021–22ನೇ ಸಾಲಿನಲ್ಲೂ ಉತ್ತಮ ರ್‍ಯಾಂಕ್‌ ಗಳಿಸುವ ನಿಟ್ಟಿನಲ್ಲಿ ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಶೌಚಾಲಯಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ.

ADVERTISEMENT

ಅಂದಾಜು ₹16.25 ಲಕ್ಷ ವೆಚ್ಚ: 15ನೇ ಹಣಕಾಸಿನ ಯೋಜನೆಯಡಿ ನೀಡುವ ಅನುದಾನದಲ್ಲಿ ಈ ಯೋಜನೆ
ಯನ್ನು ಅನುಷ್ಠಾನ ಮಾಡಲಾಗುತ್ತಿದೆ. 35 ‌ಸ್ಯಾನಿಟರಿ ಪ್ಯಾಡ್‌ ಸುಡುವ ಯಂತ್ರಕ್ಕೆ ₹5.75 ಲಕ್ಷ, ಸ್ಯಾನಿಟರಿ ಪ್ಯಾಡ್‌ ವೆಂಡಿಂಗ್‌ ಯಂತ್ರಕ್ಕೆ ₹3.50 ಲಕ್ಷ ಹಾಗೂ ಜನಾಭಿಪ್ರಾಯ ಸಂಗ್ರಹ ಯಂತ್ರ ಅಳವಡಿಸಲು ₹7 ಲಕ್ಷ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಜನಾಭಿಪ್ರಾಯ (ಫೀಡ್‌ ಬ್ಯಾಕ್‌) ಯಂತ್ರ: 35 ಶೌಚಾಲಯಗಳಲ್ಲಿ ಫೀಡ್‌ ಬ್ಯಾಕ್‌ ಯಂತ್ರಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಶೌಚಾಲಯದ ಸ್ವಚ್ಛತೆ ಯಾವ ರೀತಿ ಇದೆ ಎನ್ನುವುದು ಜನ ನೀಡುವ ಅಭಿಪ್ರಾಯದ ಆಧಾರದ ಮೇಲೆ ತಿಳಿಯಲಿದೆ. ಸಾರ್ವಜನಿಕ ಮಹಿಳಾ ಶೌಚಾಲಯಗಳಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ನೀಡಬೇಕೇ ಅಥವಾ ಕನಿಷ್ಠ ದರ ನಿಗದಿ ಮಾಡಬೇಕೇ ಎನ್ನುವ ಬಗ್ಗೆ ಇನ್ನಷ್ಟೇ ಅಂತಿಮವಾಗಬೇಕಿದೆ.

‘ಸ್ಯಾನಿಟರಿ ಪ್ಯಾಡ್‌ ಉಚಿತವಾಗಿ ನೀಡಲು ಯಾವುದಾದರು ಸಂಸ್ಥೆ ಸಿಎಸ್‌ಆರ್ ಫಂಡ್ (ಕಂಪನಿಯ ಸಾಮಾಜಿಕ ಹೊಣೆಗಾರಿಕೆ ನಿಧಿ) ಅಡಿ ಮುಂದೆ ಬಂದರೆ, ಸಾರ್ವಜನಿಕರಿಗೆ ಉಚಿತವಾಗಿ ನೀಡಬಹುದು. ಇಲ್ಲದಿದ್ದರೆ ಕನಿಷ್ಠ ದರ ನಿಗದಿ ಮಾಡುತ್ತೇವೆ’ ಎಂದು ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ ಯರಂಗಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ಆಯ್ದ 35 ಶೌಚಾಲಯಗಳ ವಿವರ

ಸಾರ್ವಜನಿಕ ಶೌಚಾಲಯ: ಹೊಸ ಆನಂದ ನಗರ ಚರ್ಚ್‌ಗೇಟ್, ರಮೇಶ (ಹೋಟೆಲ್‌) ಭವನ ಎದುರು, ಟಂಕಬಂದ ರಸ್ತೆ, ಭಾರತ ಸರ್ಕಲ್‌ ಕಮರಿಪೇಟ, ನ್ಯೂ ಇಂಗ್ಲಿಷ್‌ ಸ್ಕೂಲ್‌, ಕೋಳಿಪೇಟೆ ಮರಾಠ ಗಲ್ಲಿ, ಕೆಶ್ವಾಪುರ ಸರ್ಕಲ್‌ ಅಥವಾ ಸರ್ವೋದಯ ಸರ್ಕಲ್‌, ನೆಹರೂ ಕ್ರೀಡಾಂಗಣ (ವಿಐಪಿ ಗೇಟ್‌), ಬೆಂ‌ಗೇರಿ ಕಾಂಪ್ಯಾಕ್ಟರ್ ಸ್ಟೇಷನ್‌ ಸಮೀಪ, ರಮೇಶ ಭವನ (ಕೆಶ್ವಾಪುರ), ನವನಗರ ಮಾರುಕಟ್ಟೆ, ಉಣಕಲ್‌ ಕೆರೆ, ಯುಪಿಎಸ್‌ ಶಾಲೆ ಧಾರವಾಡ, ಮಾರ್ಕೆಟ್ ಟ್ಯಾಂಕ್‌ ಬ್ಯಾಂಡ ರಸ್ತೆ, ಕೆ.ಸಿ ಪಾರ್ಕ್‌, ಮಾರ್ಕೆಟ್‌ ಮಿಸ್ಕಿನ್‌, ಕಲಾಭವನ, ಬಿಆರ್‌ಟಿಸಿ ಬಸ್‌ ನಿಲ್ದಾಣ, ಕಕ್ಕಯ್ಯಾ ನಗರ ಕಲಘಟಗಿ ರೋಡ್‌, ನೂರಾನಿ ಮಾರ್ಕೆಟ್‌, ಎಂ.ಜಿ ಮಾರ್ಕೆಟ್‌, ಹೊಸ ಆನಂದ ನಗರ ಚರ್ಚ್‌ ಗೇಟ್‌, ಗೌಳಿ ಗಲ್ಲಿ, ಜ್ಯೋತಿ ಪೆಟ್ರೋಲ್‌ ಪಂಪ್‌ ಲ್ಯಾಮಿಂಗ್ಟನ್‌ ರೋಡ್‌, ಮನಿಕಿಲ್ಲಾ ಫ್ಲ್ಯಾಶ್‌, ಸಿಬಿಟಿ ಬಸ್‌ ನಿಲ್ದಾಣ.

ಸಮುದಾಯ ಶೌಚಾಲಯ: ದೇವಾಂಗಪೇಟೆಯಲ್ಲಿ ಎರಡು ಶೌಚಾಲಯ, ಸಾಧನಕೇರಿಯ ಎರಡು, ಬಿಂದರಗಿ ಓಣಿ, ಮಂಟೂರು ರಸ್ತೆ, ರಾಮಲಿಂಗೇಶ್ವರ ನಗರ, ನವನಗರ ಬಂಜಾರ್ ಪೇಟೆ, ಜನತ್‌ ನಗರ.

*
ನಗರದ ಶೌಚಾಲಯಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ನಂತರ ಉಳಿದ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು.
-ಸಂತೋಷ ಯರಂಗಳಿ, ಪಾಲಿಕೆ ಘನತ್ಯಾಜ್ಯ ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.