ಸಂತೋಷ ಲಾಡ್
ಹುಬ್ಬಳ್ಳಿ: ‘ದೇಶದ ಸಂಪತ್ತನ್ನು ಬಿಜೆಪಿ ಹನ್ನೊಂದು ವರ್ಷದಿಂದ ಕೊಳ್ಳೆ ಹೊಡೆಯುತ್ತಿದೆ. ತಾನು ನಡೆಸಿದ ಕರ್ಮಕಾಂಡ ಹಾಗೂ ದುರಾಡಳಿತ ಜನತೆಗೆ ತಿಳಿಯಬಾರದು ಎಂದು, ಸ್ಥಳೀಯವಾಗಿರುವ ಸಮಸ್ಯೆಗಳನ್ನು ದೊಡ್ಡದಾಗಿ ಬಿಂಬಿಸುವ ಯತ್ನ ಮಾಡುತ್ತಿದೆ’ ಎಂದು ಸಚಿವ ಸಂತೋಷ ಲಾಡ್ ಆರೋಪಿಸಿದರು.
ಸೋಮವಾರ ಮಾಧ್ಯದವರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಉತ್ತಮ ಆಡಳಿತ ನೀಡಿದೆ. ಮುಖ್ಯಮಂತ್ರಿ ಖುರ್ಚಿಗೆ ಕಚ್ಚಾಡುತ್ತಿದ್ದಾರೆ ಎನ್ನುವ ವಿಷಯ ಅವರಿಗೆ ಸಂಬಂಧಿಸಿದ್ದಲ್ಲ. ನಾವು ಏನು ಬೇಕಾದರೂ ಮಾಡುತ್ತೇವೆ. ಆಡಳಿತದಲ್ಲಿ ಎಲ್ಲಿಯಾದರೂ ತಪ್ಪಾಗಿದ್ದರೆ ಪ್ರಶ್ನಿಸಲಿ’ ಎಂದು ಹೇಳಿದರು.
‘ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆದಾಗ, ಅದನ್ನು ತಾನೇ ನಿಲ್ಲಿಸಿದ್ದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ತಾರು ಬಾರಿ ಹೇಳಿಕೆ ನೀಡಿ ಭಾರತಕ್ಕೆ ಅವಮಾನ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು 90 ದೇಶಗಳನ್ನು ಸುತ್ತಾಡಿ ಸ್ನೇಹ ಸಂಪಾದಿಸಿದರೂ, 83 ದೇಶಗಳು ಪಾಕಿಸ್ತಾನಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಗುಜರಾತಿನಲ್ಲಿ ಎರಟು ಕೋಟಿ ಮಕ್ಕಳು ಶಾಲೆಗೆ ಹೋಗದೆ ಹೊರಗುಳಿದಿದ್ದಾರೆ. ಮುಟ್ಟಿನ ದಿನಗಳಲ್ಲಿ ರಜೆ ಮಾಡಿದರೆ ಕೂಲಿ ಸಿಗುವುದಿಲ್ಲ ಎಂದು ಮಹಾರಾಷ್ಟ್ರದಲ್ಲಿ 800ಕ್ಕೂ ಹೆಚ್ಚು ಮಹಿಳೆಯರು ಗರ್ಭಕೋಶ ತೆಗೆಸಿಕೊಂಡಿದ್ದಾರೆ. ಇದನ್ನು ಚರ್ಚೆಗೆ ತಂದರೆ ಮುಜುಗರವಾಗುತ್ತದೆ ಎಂದು ಬಿಜೆಪಿ ನಾಯಕರು, ನಮ್ಮ ಪಕ್ಷದ ಆಂತರಿಕ ವಿಷಯದ ಕುರಿತು ಹೇಳಿಕೆ ನೀಡುತ್ತಾರೆ’ ಎಂದು ಹರಿಹಾಯ್ದರು.
‘ಮುನಿರಾಬಾದ್ ಬಂದರಿನಲ್ಲಿ ದೊರೆತ ಮಾದಕ ವಸ್ತುಗಳು ಪಹಲ್ಗಾಮ್ ದಾಳಿ ನಡೆಸಿದ ಉಗ್ರರ ಚಟುವಟಿಕೆಯಲ್ಲಿ ಬಳಕೆಯಾಗಿದೆ. ₹1.14 ಸಾವಿರ ಕೋಟಿ ಮೌಲ್ಯದ ನಕಲಿ ನೋಟುಗಳು ಹಾಗೂ ವಾಪಸ್ ಪಡೆದ ₹2,000 ಮುಖಬೆಲೆಯ ನೋಟಗಳು ಈಗಲೂ ಚಲಾವಣೆಯಾಗುತ್ತಿದೆ ಎಂದು ಆರ್‌ಬಿಐ ಹೇಳಿದೆ. ಈ ಕುರಿತು ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಂಡಿದೆ? ಇದನ್ನು ಸಹ ಪ್ರಶ್ನಿಸಬಾರದೆ? ಅವರು ಬೇಕಾದರೆ ಮಹಾತ್ಮ ಗಾಂಧೀಜಿ ಅವರನ್ನು ಬಯ್ಯಬಹುದು, ನಾವು ಮಾತ್ರ ಅವರನ್ನು ಪ್ರಶ್ನಿಸಬಾರದು ಎಂದರೆ ಏನರ್ಥ’ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.