
ಹುಬ್ಬಳ್ಳಿ: ಸೌದಿ ಅರೆಬಿಯಾದ ಮಕ್ಕಾ–ಮದೀನಾ ರಸ್ತೆಯಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಹುಬ್ಬಳ್ಳಿಯ ಗಣೇಶಪೇಟೆಯ ಸಣ್ಣ ಮಸೀದಿ ಸಮೀಪದ ಅಬ್ದುಲ್ ಗನಿ ಶಿರಹಟ್ಟಿ (52) ಎಂಬುವರು ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ದೃಢಪಡಿಸಿವೆ.
ಅಬ್ದುಲ್ ಗನಿ ಅವರು 20 ವರ್ಷಗಳಿಂದ ದುಬೈನಲ್ಲಿರುವ ಅಬುದಾಬಿ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ಚಾಲಕರಾಗಿದ್ದರು. ಅಲ್ಲಿಯೇ ನೆಲಸಿದ್ದ ಅವರು, ನವೆಂಬರ್ 9ರಂದು ದುಬೈನಿಂದ ಮಕ್ಕಾ–ಮದೀನಾಕ್ಕೆ ಹೈದರಾಬಾದ್‌ನ ಸ್ನೇಹಿತರ ಜೊತೆ ಸೇರಿ ಪ್ರಯಾಣ ಕೈಗೊಂಡಿದ್ದರು. ಅವರಿಗೆ ಪತ್ನಿ, ಪುತ್ರ ಮತ್ತು ಮೂವರು ಪುತ್ರಿಯರು ಇದ್ದಾರೆ.
‘ಅಬ್ದುಲ್ ಅವರು ಭಾನುವಾರ ತಡರಾತ್ರಿ 3 ಗಂಟೆಗೆ ವಿಡಿಯೊ ಕಾಲ್ ಮಾಡಿ, ಪತ್ನಿ ಮತ್ತು ಮಕ್ಕಳ ಜೊತೆ ಮಾತನಾಡಿದ್ದರು. ಉಮ್ರಾ ಯಾತ್ರೆಯ ವಿಡಿಯೊ ಕೂಡ ಕಳುಹಿಸಿದ್ದರು. ಪ್ರವಾಸ ಮುಗಿಸಿ ಹುಬ್ಬಳ್ಳಿಗೆ ಬರುವುದಾಗಿ ತಿಳಿಸಿದ್ದರು’ ಎಂದು ಸಹೋದರ ರುಕ್ ಶಿರಹಟ್ಟಿ ಹೇಳಿದರು.
ಶಾಸಕ ಪ್ರಸಾದ ಅಬ್ಬಯ್ಯ, ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮತ್ತು ಇತರರು ಅಬ್ದುಲ್ ಅವರ ನಿವಾಸಕ್ಕೆ ತೆರಳಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.
‘ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿರುವೆ. ಮೃತರ ಶವ ಗುರುತಿಸುವ ಕಾರ್ಯ ನಡೆಯಲಿದೆ. ಕಾನೂನು ಸಮಸ್ಯೆಗಳು ಎದುರಾದರೆ, ಸರ್ಕಾರದ ಮಟ್ಟದಲ್ಲಿ ಪರಿಹರಿಸಲು ಯತ್ನಿಸಲಾಗುತ್ತದೆ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಅಬ್ದುಲ್ ಗನಿ ಅವರ ಕುರಿತು ಜಿಲ್ಲಾಡಳಿತಕ್ಕೆ ಈವರೆಗೆ ಅಧಿಕೃತ ಮಾಹಿತಿ ಬಂದಿಲ್ಲ. ಕುಟುಂಬ ಮತ್ತು ರಾಯಭಾರಿ ಕಚೇರಿ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇವೆ.– ದಿವ್ಯಪ್ರಭು, ಜಿಲ್ಲಾಧಿಕಾರಿ
ಕುಟುಂಬದ ಮೂವರು ಸದಸ್ಯರಿಗೆ ಮೃತರ ಅಂತಿಮ ದರ್ಶನಕ್ಕೆ ತೆರಳಲು ಹುಬ್ಬಳ್ಳಿಯಿಂದ ಬೆಂಗಳೂರಿಗೆ ವಾಹನ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಸಚಿವ ಜಮೀರ್ ಅಹಮದ್ ಅವರು ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ–ಪ್ರಸಾದ ಅಬ್ಬಯ್ಯ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.