
ಕುಂದಗೋಳ: ‘ತಾಲ್ಲೂಕಿನ ಹಿರೇಗುಂಜಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹೈಟೆಕ್ ಶೌಚಾಲಯ ಹಾಗೂ ಆಟದ ಮೈದಾನ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ‘ ಎಂದು ಶಾಲಾ ಸುಧಾರಣಾ ಸಮಿತಿಯವರು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.
ಸಮಿತಿಯುವರು ಶನಿವಾರ ಶಾಲೆಯಲ್ಲಿ ಸಭೆ ನಡೆಸಿ, ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಚನ್ನವೀರಗೌಡ ಪಾಟೀಲ ಮಾತನಾಡಿ, ‘ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಹೈಟೆಕ್ ಶೌಚಾಲಯ ನಿರ್ಮಾಣಕ್ಕಾಗಿ ₹4 ರಿಂದ ₹5 ಲಕ್ಷ. ಕೊಕ್ಕೊ ಆಟದ ಮೈದಾನ ನಿರ್ಮಾಣಕ್ಕಾಗಿ ₹3 ಲಕ್ಷ ವೆಚ್ಚವನ್ನು ಎನ್ಆರ್‌ಜಿಯಲ್ಲಿ ಖರ್ಚು ಹಾಕಿದ್ದಾರೆ.
ಶೌಚಾಲಯ ನಿರ್ಮಾಣ ಕಾರ್ಯ ಮೂರು ವರ್ಷಗಳಿಂದ ಅರ್ಧಕ್ಕೆ ನಿಂತಿದೆ. ಆಟದ ಮೈದಾನ ಕಾಮಗಾರಿಯೂ ನಡೆದಿಲ್ಲ. ಶಾಲೆಯ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿದೆ‘ ಎಂದು ಆರೋಪಿಸಿದರು.
ಎಸ್‌ಡಿಎಂಸಿ ಸದಸ್ಯ ಮಂಜುನಾಥ ಕಮಡೊಳ್ಳಿ ಅವರು, ‘ಶಾಲೆಯ ಮುಖ್ಯ ಶಿಕ್ಷಕರ ಹಾಗೂ ಸಮಿತಿಯವರಿಗೆ ಮಾಹಿತಿ ನೀಡದೇ ಹಣ ತೆಗೆಯಲಾಗಿದೆ’ ಎಂದು ದೂರಿದರು.
‘ಶಾಲೆಯಲ್ಲಿ 90ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದೇವೆ. ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಆಟದ ಮೈದಾನ ಸೇರಿದಂತೆ ಮೂಲಸೌಕರ್ಯಗಳ ಕೊರತೆಯಿದೆ’ ಎಂದು ವಿದ್ಯಾರ್ಥಿನಿಯೊಬ್ಬರು ದೂರಿದರು.
‘ಜ.20 ರೊಳಗೆ ಎಲ್ಲಾ ಕಾಮಗಾರಿಗಳನ್ನು ಆರಂಭಿಸಿ, ಬೇಗನೆ ಪೂರ್ಣಗೊಳಿಸಬೇಕು. ನಿರ್ಲಕ್ಷಿಸಿದರೆ ಹಿರೇಗುಂಜಳ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು’ ಎಂದು ಇಒ ಜಗದೀಶ ಕಮ್ಮಾರ ಅವರಿಗೆ ಎಸ್‌ಡಿಎಂಸಿಯವರು ಮನವಿ ಸಲ್ಲಿಸಿದರು.
ಸುಭಾಸಚಂದ್ರ ಪೂಜಾರ , ಮಹೇಶ ಪುಗಶೆಟ್ಟಿ , ಧರ್ಮಣ್ಣ , ಜಗದೀಶ ಅಂಗಡಿ , ಈಶ್ವರ ದೊಡ್ಡೂರ , ಮಂಜುನಾಥ ದೊಡ್ಡಮನಿ, ಮಾದೇವಪ್ಪ ಮೇಟಿ , ನಿಂಗನಗೌಡ್ರ ಹಾಲಪ್ಪಗೌಡ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.