ADVERTISEMENT

ಪ್ರಧಾನಿ ನಂಬಿಕೆ ಉಳಿಸಿಕೊಂಡ ವಿಜ್ಞಾನಿಗಳು

ಭಾರತೀಯ ರಸಾಯನವಿಜ್ಞಾನಿಗಳ ಮಂಡಳಿಯ ಸಮ್ಮೇಳನ ಉದ್ಘಾಟಿಸಿದ ಸಚಿವ ಜೋಶಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 2:59 IST
Last Updated 23 ಡಿಸೆಂಬರ್ 2025, 2:59 IST
ಹುಬ್ಬಳ್ಳಿಯ ಬಿವಿಬಿ ಕ್ಯಾಂಪಸ್‌ನ ಕೆಎಲ್ಇ ಟೆಕ್ ಸಭಾಂಗಣದಲ್ಲಿ ಸೋಮವಾರ ನಡೆದ ಸಮ್ಮೇಳನದಲ್ಲಿ ರಸಾಯನ ವಿಜ್ಞಾನಿ ತೇಜರಾಜ್ ಎಂ. ಅಮ್ಮಿನಭಾವಿ ಅವರಿಗೆ ಐಸಿಸಿ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು
ಹುಬ್ಬಳ್ಳಿಯ ಬಿವಿಬಿ ಕ್ಯಾಂಪಸ್‌ನ ಕೆಎಲ್ಇ ಟೆಕ್ ಸಭಾಂಗಣದಲ್ಲಿ ಸೋಮವಾರ ನಡೆದ ಸಮ್ಮೇಳನದಲ್ಲಿ ರಸಾಯನ ವಿಜ್ಞಾನಿ ತೇಜರಾಜ್ ಎಂ. ಅಮ್ಮಿನಭಾವಿ ಅವರಿಗೆ ಐಸಿಸಿ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಹುಬ್ಬಳ್ಳಿ: ‘ಕೋವಿಡ್ ಸಂದರ್ಭದಲ್ಲಿ ವಿಶ್ವವೇ ಸ್ತಬ್ಧಗೊಂಡಾಗ ಭಾರತವು ಲಸಿಕೆಯೊಂದಿಗೆ ಎದ್ದುನಿಂತಿತು. ಇದು ವಿಜ್ಞಾನಿಗಳ ಮೇಲೆ ನಮ್ಮ ಪ್ರಧಾನಿ ಇರಿಸಿದ ನಂಬಿಕೆಯ ಫಲವಾಗಿತ್ತು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದ ಬಿವಿಬಿ ಕ್ಯಾಂಪಸ್‌ನ ಕೆಎಲ್ಇ ಟೆಕ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಭಾರತೀಯ ರಸಾಯನವಿಜ್ಞಾನಿಗಳ ಮಂಡಳಿಯ (ಐಸಿಸಿ) 44ನೇ ರಾಷ್ಟ್ರೀಯ ಸಮ್ಮೇಳನದ ಮೂರು ದಿನಗಳ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತದ ಸಂಶೋಧನಾ ಕ್ಷೇತ್ರ ತೀವ್ರಗತಿಯಲ್ಲಿ ಪ್ರಗತಿ ಕಾಣುತ್ತಿದೆ. ಆಹಾರ ಮತ್ತು ನವೀಕರಿಸಬಲ್ಲ ಇಂಧನ ಕ್ಷೇತ್ರದಲ್ಲಿ ರಸಾಯನ ವಿಜ್ಞಾನದ ಪಾತ್ರ ಪ್ರಮುಖವಾಗಿದೆ’ ಎಂದು ನವೀಕರಿಸಬಲ್ಲ ಇಂಧನ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಅವರು ತಿಳಿಸಿದರು.

ADVERTISEMENT

‘ದೇಶದಲ್ಲಿ ಪಳೆಯುಳಿಕೆ ಇಂಧನದ ಬಳಕೆಯನ್ನು ಶೇ 50ರಷ್ಟು ತಗ್ಗಿಸುವ ಗುರಿಯನ್ನು ನಿಗದಿಗಿಂತ ಐದು ವರ್ಷ ಮೊದಲೇ ಸಾಧಿಸಲಾಗಿದೆ. ರೈಲ್ವೆಯನ್ನು ಸಂಪೂರ್ಣ ವಿದ್ಯುದೀಕರಣ ಮಾಡುವ ಹಂತದಲ್ಲಿದ್ದೇವೆ. ಈಗ ನಮ್ಮೆದುರು ಇರುವ ಮುಖ್ಯ ಸಮಸ್ಯೆ, ಉತ್ಪಾದನೆ ಆಗುತ್ತಿರುವ ಸುಸ್ಥಿರ ಇಂಧನದ ಸಮರ್ಪಕ ಶೇಖರಣೆ. ಇದಕ್ಕಾಗಿ ಗ್ರಿಡ್ ಸ್ಥಿರತೆ ಅಗತ್ಯ. ಈ ಸಮಸ್ಯೆ ಪರಿಹಾರಕ್ಕಾಗಿ ನಾನು ವಿಜ್ಞಾನಿಗಳ ಮೊರೆ ಹೋಗಿದ್ದೇನೆ’ ಎಂದು ಹೇಳಿದರು.

ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಅಧ್ಯಕ್ಷ ಅಶುತೋಶ್ ಶರ್ಮಾ ಮಾತನಾಡಿ, ‘ನೀರು, ಇಂಧನ, ಆಹಾರ ಹೀಗೆ ಜೀವನಮಟ್ಟವನ್ನು ಉನ್ನತೀಕರಿಸುವ ಎಲ್ಲ ಕ್ಷೇತ್ರಗಳಲ್ಲಿನ ಸಂಶೋಧನೆಗೆ ರಸಾಯನ ವಿಜ್ಞಾನ ಅತ್ಯಗತ್ಯ. ಇದು ಜಗತ್ತಿನ ಶ್ರೇಷ್ಠ ವಿಜ್ಞಾನಗಳಲ್ಲೊಂದು’ ಎಂದರು.

‘ಇಂದು ಯಾವ ಶಸ್ತ್ರಚಿಕಿತ್ಸೆಯೂ ಆ್ಯಂಟಿ ಬಯೊಟಿಕ್ (ಪ್ರತಿಜೀವಗಳು) ಹೊರತಾಗಿ ಯಶಸ್ವಿಯಾಗದು. ಮನುಷ್ಯನಲ್ಲಿ ಆ್ಯಂಟಿ ಬಯೊಟಿಕ್ ಪ್ರತಿರೋಧಕ ಹೆಚ್ಚುತ್ತಿದೆ. ಈ ಸವಾಲನ್ನು ಎದುರಿಸುವ ನಿಟ್ಟಿನಲ್ಲಿ ರಸಾಯನ ವಿಜ್ಞಾನ ಕೆಲಸ ಮಾಡುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರಕಾಶ್ ತೇವರಿ, ಸಮ ಕುಲಪತಿ ಅಶೋಕ ಶೆಟ್ಟರ್, ಸ್ಕೂಲ್ ಆಫ್ ಅಡ್ವಾನ್ಸ್ಡ್ ಸೈನ್ಸ್‌ನ ಬೋಧಕ ನಾಗರಾಜ ಶೆಟ್ಟಿ, ರಾಜಸ್ಥಾನದ ಮಹಾರಾಜ ಸೂರಜ್‌ಮಲ್ ಬೃಜ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ರಾಜೇಶ್ ಡಾಖರೆ, ಉತ್ತರಪ್ರದೇಶದ ಮೀರಠ್ ಕಾಲೇಜಿನ ಪ್ರಾಂಶುಪಾಲ ಮನೋಜ್ ಮುಕಾರ್ ರಾವತ್ ಇದ್ದರು.

ವಿವಿಧ ಪ್ರಶಸ್ತಿ ಪ್ರದಾನ

ಐಸಿಸಿ ಕೊಡಮಾಡುವ 2025ನೇ ಸಾಲಿನ ವಿವಿಧ ಸ್ಮಾರಕ ಪ್ರಶಸ್ತಿಗಳನ್ನು ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಐಸಿಸಿ ಜೀವಮಾನ ಸಾಧನೆ ಪ್ರಶಸ್ತಿಗೆ ರಸಾಯನ ವಿಜ್ಞಾನಿ ತೇಜರಾಜ್ ಎಂ. ಅಮ್ಮಿನಭಾವಿ ಪಾತ್ರರಾದರು. ಪ್ರಗ್ನೇಶ್ ಎನ್. ದವೆ ಅವರಿಗೆ ಡಾ. ಪಿ.ಎನ್. ಶರ್ಮಾ ಪ್ರಶಸ್ತಿ ಅರವಿಂದ್ ಸಿಂಗ್ ನೇಗಿ ಅವರಿಗೆ ಡಾ. ಎಸ್ಎಮ್‌ಎಲ್ ಗುಪ್ತಾ ಪ್ರಶಸ್ತಿ ರಾಜೇಶ್ ಕೆ. ವತ್ಸ ಅವರಿಗೆ ಎಸ್.ಟಿ. ನಂದಿಬೇವೂರ ಪ್ರಶಸ್ತಿ ಯೋಗೇಶ್ ಚಂದ್ರ ಶರ್ಮಾ ಅವರಿಗೆ ಎಸ್.ಪಿ. ಹಿರೇಮಠ ಪ್ರಶಸ್ತಿ ಶೇಶನಾಥ ವಿಶ್ವನಾಥ ಭೋಸ್ಲೆ ಅವರಿಗೆ ಡಬ್ಲು.ವಿ. ಮಲಿಕ್ ಪ್ರಶಸ್ತಿ ಹಾಗೂ ಮಹಿಳಾ ವಿಜ್ಞಾನಿಗೆ ನೀಡಲಾಗುವ ಕಾಜಾ ಸೋಮಶೇಖರ ರಾವ್ ಪ್ರಶಸ್ತಿಯನ್ನು ಸಾಯಿಕಾ ಇಕ್ರಮ್ ಅವರಿಗೆ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.