ADVERTISEMENT

ಮೂರು ಸಾವಿರ ಪೊಲೀಸರ ನಿಯೋಜನೆ

ಅಮಿತ್‌ ಶಾ ಕಾರ್ಯಕ್ರಮಕ್ಕೆ ಸಿದ್ಧತೆ; ನೆಹರೂ ಕ್ರೀಡಾಂಗಣದಲ್ಲಿ ಸರ್ಪಗಾವಲು

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 10:26 IST
Last Updated 17 ಜನವರಿ 2020, 10:26 IST
ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಗುರುವಾರ ವೇದಿಕೆ ಸಿದ್ಧಗೊಳಿಸುತ್ತಿದ್ದ ಚಿತ್ರಣ
ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಗುರುವಾರ ವೇದಿಕೆ ಸಿದ್ಧಗೊಳಿಸುತ್ತಿದ್ದ ಚಿತ್ರಣ   

ಹುಬ್ಬಳ್ಳಿ: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಬಗ್ಗೆ ಜನಜಾಗೃತಿ ಮೂಡಿಸಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶನಿವಾರ ನಗರಕ್ಕೆ ಬರಲಿರುವ ಹಿನ್ನೆಲೆಯಲ್ಲಿ, ಕಾರ್ಯಕ್ರಮ ನಡೆಯುವ ನೆಹರೂ ಕ್ರೀಡಾಂಗಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಭದ್ರತೆಗಾಗಿ ಹಿರಿಯ ಅಧಿಕಾರಿಗಳು ಸೇರಿದಂತೆ ಒಟ್ಟು ಮೂರು ಸಾವಿರ ಪೊಲೀಸರನ್ನು ಕಾರ್ಯಕ್ರಮಕ್ಕೆ ‌ನಿಯೋಜಿಸಲಾಗಿದೆ. ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಆರ್‌. ದಿಲೀಪ್‌ ಗುರುವಾರ ಮೈದಾನಕ್ಕೆ ಭೇಟಿ ನೀಡಿ ಭದ್ರತಾ ಸೌಲಭ್ಯಗಳನ್ನು ಪರಿಶೀಲಿಸಿದರು. ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಸಿಬ್ಬಂದಿ ಕೂಡ ಭದ್ರತೆ ಕಾರ್ಯ ವೀಕ್ಷಿಸಿದರು.

ಗಣ್ಯರು ಪ್ರವೇಶಿಸುವ ದ್ವಾರದಲ್ಲಿ ಗುರುವಾರದಿಂದಲೇ ಪೊಲೀಸರನ್ನು ನಿಯೋಜಿಸಲಾಗಿದ್ದು, ಮೈದಾನದ ಮುಖ್ಯದ್ವಾರವನ್ನು ಬಂದ್‌ ಮಾಡಲಾಗಿದೆ. ಆದ್ದರಿಂದ ಸಾರ್ವಜನಿಕರು ಮೈದಾನದತ್ತ ಸುಳಿಯುತ್ತಿಲ್ಲ. ನಿರಂತರ ಕ್ರೀಡಾ ಚಟುವಟಿಕೆ ಹಾಗೂ ಸದಾ ಒಂದಿಲ್ಲೊಂದು ಕಾರ್ಯಕ್ರಮದಿಂದ ಗಿಜಿಗುಡುತ್ತಿದ್ದ ನೆಹರೂ ಮೈದಾನ ಗುರುವಾರ ಖಾಲಿಖಾಲಿಯಾಗಿತ್ತು.

ADVERTISEMENT

ಎಂಟು ಎಲ್‌ಇಡಿ ವಾಲ್:ಕಾರ್ಯಕ್ರಮವನ್ನು 50 ಸಾವಿರ ಜನ ಕುಳಿತು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದ್ದು, ಎಂಟು ಕಡೆ ಎಲ್‌ಇಡಿ ವಾಲ್‌ಗಳನ್ನು ಅಳವಡಿಸಲಾಗುತ್ತಿದೆ. ಗುರುವಾರ ರಾತ್ರಿ ಕೂಡ ಸಿದ್ಧತಾ ಕಾರ್ಯ ನಡೆಯುತ್ತಿದ್ದ ಚಿತ್ರಣ ಕಂಡುಬಂತು.

‘ವೇದಿಕೆ ನಿರ್ಮಾಣವಾಗಿದ್ದು, ಆಸನ ವ್ಯವಸ್ಥೆ ಸೇರಿದಂತೆ ಕೆಲ ಕೆಲಸಗಳು ಬಾಕಿ ಉಳಿದಿವೆ. ಶುಕ್ರವಾರದ ಸಂಜೆ ವೇಳೆಗೆ ಸಿದ್ಧತೆ ಪೂರ್ಣಗೊಳ್ಳಲಿದೆ’ ಎಂದು ವೇದಿಕೆ ಸಿದ್ಧಪಡಿಸುತ್ತಿದ್ದ ತಂಡದ ಮ್ಯಾನೇಜರ್‌ ಕಿರಣ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಚಾರ ಜೋರು: ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಲು ಹಾಗೂ ಹೆಚ್ಚು ಜನ ಸೇರುವಂತೆ ಮಾಡಲು ಬಿಜೆಪಿ ಸಾಕಷ್ಟು ಪ್ರಚಾರ ಮಾಡುತ್ತಿದೆ.

ನಗರದಲ್ಲಿ ಅಲ್ಲಲ್ಲಿ ಫ್ಲೆಕ್ಸ್‌ಗಳನ್ನು ಹಾಕಲಾಗಿದ್ದು, ಸಾಮಾಜಿಕ ಮಾಧ್ಯಮಗಳ ಮೂಲಕವೂ ಪ್ರಚಾರ ಮಾಡುತ್ತಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಜಗದೀಶ ಶೆಟ್ಟರ್‌ ಸೇರಿದಂತೆ ಎಲ್ಲ ಬಿಜೆಪಿ ಮುಖಂಡರು ವಿವಿಧ ಕಾರ್ಯಕ್ರಮಗಳಿಗೆ ಹೋದಲೆಲ್ಲ ‘ಅಮಿತ್‌ ಶಾ ಕಾರ್ಯಕ್ರಮಕ್ಕೆ ತಪ್ಪದೇ ಬನ್ನಿ’ ಎಂದು ಹೇಳುತ್ತಿದ್ದಾರೆ.

ಫೇಸ್‌ಬುಕ್‌ನಲ್ಲಿ ಜೋಶಿ ‘ಅಮಿತ್‌ ಶಾ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದು ಆ ಸಭೆಗೆ ಎಲ್ಲರೂ ಬರಬೇಕು. ದೇಶದಲ್ಲಿ ಕೆಲ ಶಕ್ತಿಗಳು ಅಶಾಂತಿಯ ವಾತಾವರಣ ನಿರ್ಮಾಣ ಮಾಡುತ್ತಿದ್ದು, ಇದರ ಬಗ್ಗೆ ಎಚ್ಚರವಾಗಿ ಇರುವಂತೆ ಮತ್ತು ದೇಶದ ಆಗು ಹೋಗುಗಳ ಬಗ್ಗೆ ಶಾ ಅವರು ಮಾತನಾಡಲಿದ್ದಾರೆ’ ಎಂದು ವೈಯಕ್ತಿಕ ಆಹ್ವಾನ ನೀಡಿದ್ದಾರೆ.

ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಮನವಿ

ಅಮಿತ್‌ ಶಾ ಕಾರ್ಯಕ್ರಮಕ್ಕೆ ಅನುಮತಿ ಕೊಡಬಾರದು ಎಂದು ಆಗ್ರಹಿಸಿ ಸಂವಿಧಾನ ಸಂರಕ್ಷಣಾ ಸಮಿತಿ ಪದಾಧಿಕಾರಿಗಳು ಗುರುವಾರ ಕಮಿಷನರ್ ಕಚೇರಿಯ ಅಧಿಕಾರಿಗೆ ಮನವಿ ಸಲ್ಲಿಸಿದರು.

‘ಸಿಎಎ ಒಂದು ಅಲ್ಪಸಂಖ್ಯಾತ ಸಮುದಾಯವನ್ನು ಹೊರಗಿಟ್ಟು ಸಂವಿಧಾನದ ಆಶಯಗಳನ್ನು ಧಿಕ್ಕರಿಸಿ ರೂಪಿಸಲಾಗಿದೆ. ಇದರ ವಿರುದ್ಧ ದೇಶಾದ್ಯಂತ ಜನ ಹೋರಾಟ ಮಾಡುತ್ತಿದ್ದಾರೆ. ಆದ್ದರಿಂದ ಕಾರ್ಯಕ್ರಮಕ್ಕೆ ಅನುಮತಿ ಕೊಡಬಾರದು’ ಎಂದರು.

‘ಅವಳಿ ನಗರದಲ್ಲಿ ಹಿಂದೆ ಬೇರೆ, ಬೇರೆ ಸಂಘಟನೆಗಳು ಹೋರಾಟಕ್ಕೆ ಮುಂದಾದಾಗ ಮೊದಲು ಅನುಮತಿ ನೀಡಿ, ಬಳಿಕ ವಾಪಸ್‌ ಪಡೆಯಲಾಗಿದೆ. ಈ ಕಾರ್ಯಕ್ರಮ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿ ಮಾಡಿದ್ದು, ಸುರಕ್ಷತೆ ದೃಷ್ಟಿಯಿಂದ ಅನುಮತಿ ನೀಡಬಾರದು’ ಎಂದು ಕೋರಿದ್ದಾರೆ.

ಸಂಘಟನೆಯ ಪ್ರಮುಖರಾದ ಅನ್ವರ ಮುಧೋಳ, ಮಹೇಶ ಪತ್ತಾರ, ಅಮೃತ ಇಜಾರಿ, ಅಸರಫ್ ಅಲಿ ಬಿ.ಎ., ವಿಜಯ ಗುಂಟ್ರಾಳ, ದೇವಾನಂದ ಜಗಾಪೂರ, ಸಿದ್ದು ತೇಜಿ, ಬಿ.ಎ.ಮುಧೋಳ, ಅಯೂಬ್ ಸವಣೂರ, ಆಶೀಫ್ ಪಾಚಾಪೂರ, ಎನ್.ಎ.ಖಾಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.