ADVERTISEMENT

ಸೇವಾ ಭಾರತಿ ಟ್ರಸ್ಟ್‌ ಕಾರ್ಯ ಶ್ಲಾಘನೀಯ: ಶಿವರುದ್ರ ಸ್ವಾಮೀಜಿ

ಬೆಂಗಳೂರಿನ ಬೇಲಿಮಠದ ಪೀಠಾಧ್ಯಕ್ಷ ಶಿವರುದ್ರ ಸ್ವಾಮೀಜಿ ಪ್ರಶಂಸೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2025, 16:31 IST
Last Updated 5 ಮಾರ್ಚ್ 2025, 16:31 IST
<div class="paragraphs"><p>ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ಸೇವಾ ಭಾರತಿ ಟ್ರಸ್ಟ್‌ನ ರಜತ ಸಂಭ್ರಮದ ಸಮಾರೋಪ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಬೆಂಗಳೂರಿನ ಬೇಲಿಮಠದ ಪೀಠಾಧ್ಯಕ್ಷ ಶಿವರುದ್ರ ಸ್ವಾಮೀಜಿ ಮಾತನಾಡಿದರು. </p></div>

ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ಸೇವಾ ಭಾರತಿ ಟ್ರಸ್ಟ್‌ನ ರಜತ ಸಂಭ್ರಮದ ಸಮಾರೋಪ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಬೆಂಗಳೂರಿನ ಬೇಲಿಮಠದ ಪೀಠಾಧ್ಯಕ್ಷ ಶಿವರುದ್ರ ಸ್ವಾಮೀಜಿ ಮಾತನಾಡಿದರು.

   

ಹುಬ್ಬಳ್ಳಿ: ಶೋಷಣೆಯನ್ನು ಅಸ್ತ್ರವಾಗಿಟ್ಟುಕೊಂಡು ಮಾಡಲಾಗುತ್ತಿದ್ದ ಮತಾಂತರವನ್ನು ತಡೆದು, ಶೋಷಿತರಿಗೆ ಸ್ವಾಭಿಮಾನಿ ಬದುಕು ಕಟ್ಟಿಕೊಟ್ಟ ಸೇವಾ ಭಾರತಿ ಟ್ರಸ್ಟ್‌ ಕಾರ್ಯ ಶ್ಲಾಘನೀಯ ಎಂದು ಬೆಂಗಳೂರಿನ ಬೇಲಿಮಠದ ಪೀಠಾಧ್ಯಕ್ಷ ಶಿವರುದ್ರ ಸ್ವಾಮೀಜಿ ಹೇಳಿದರು.

ನಗರದಲ್ಲಿ ಬುಧವಾರ ನಡೆದ ಸೇವಾ ಭಾರತಿ ಟ್ರಸ್ಟ್‌ನ ರಜತ ಸಂಭ್ರಮದ ಸಮಾರೋಪ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ADVERTISEMENT

ಟ್ರಸ್ಟ್‌ ಕಳೆದ 25 ವರ್ಷಗಳಿಂದ ಮಾಡಿದ ಸೇವಾ ಕಾರ್ಯಗಳ ಸಾಧನೆ ಕಡಿಮೆ ಏನಿಲ್ಲ. ಶೋಷಿತರಿಗೆ ನೆರವಾಗುವುದು, ಅವರಿಗೆ ಸ್ವಾಭಿಮಾನಿ ಬದುಕು ಕಟ್ಟಿಕೊಟ್ಟಿರುವುದು ಅನುಕರಣೀಯ. ಸಂಸ್ಥೆಯ ಇಂತಹ ಕಾರ್ಯಗಳಿಗೆ ನಾವೆಲ್ಲರೂ ಕೈಜೋಡಿಸಬೇಕು. ಆರ್ಥಿಕ ನೆರವಾಗಿರಲಿ ಅಥವಾ ಸಂಸ್ಥೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಾಥ್‌ ನೀಡಬೇಕಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಸಂಘದ ಪ್ರೇರಣೆಯಿಂದ ಸೇವಾ ಭಾರತಿ ಟ್ರಸ್ಟ್‌ ರಚನೆಯಾಯಿತು. ದೀನ ದಲಿತರು, ಶೋಷಿತರಿಗೆ ಸೇವೆ ನೀಡಬೇಕೆನ್ನುವ ಉದ್ದೇಶದಿಂದ ರಚಿಸಲಾಯಿತು. ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಆರಂಭವಾದ ಈ ಟ್ರಸ್ಟ್‌ ಇವತ್ತು ದೇಶದಾದ್ಯಂತ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ’ ಎಂದರು.

‘ಸಾಮಾಜಿಕ ವ್ಯವಸ್ಥೆಯಲ್ಲಿದ್ದ ಏರು–ಪೇರುಗಳನ್ನು ದುರುಪಯೋಗ ಪಡಿಸಿಕೊಂಡು ಮತಾಂತರ ನಡೆಯುತ್ತಿದ್ದವು. ಮತಾಂತರ ಮಾಡಿದ ನಂತರ ಅವರನ್ನು ಕೇಳುವವರೇ ಇರುತ್ತಿರಲಿಲ್ಲ. ಹಿಂದೂ ಸಮಾಜವನ್ನು ಒಗ್ಗೂಡಿಸಬೇಕೆಂಬ ಉದ್ದೇಶದಿಂದ ಸಂಘ ಆರಂಭವಾಯಿತು. ನಂತರದ ದಿನಗಳಲ್ಲಿ ಶೋಷಿತರಿಗೆ ಸೇವೆ ಮಾಡಲು ಹಾಗೂ ಸಮಸಮಾಜ ನಿರ್ಮಾಣ ಮಾಡಲು ಗಮನಹರಿಸಲಾಯಿತು’ ಎಂದು ಹೇಳಿದರು.

‘ಶೋಷಿತರು, ದೀನ ದಲಿತರನ್ನು ಸಶಕ್ತಗೊಳಿಸುವ ಮೂಲಕ ದೇಶದ ಮಾನವ ಸಂಪನ್ಮೂಲ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾಗಿದೆ. ಹೀಗಾದಾಗ ಮಾತ್ರ ಸದೃಢ ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ. ಜಾತಿ–ಮತ ಭೇದ ಭಾವ ಇರದ ಸಮಾಜ ಕಟ್ಟಬೇಕಾಗಿದೆ. ದೀನ ದಲಿತರಲ್ಲಿ, ದರಿದ್ರರಲ್ಲಿ ನಾರಾಯಣನನ್ನು ಕಾಣಬೇಕೆಂದು ಸ್ವಾಮಿ ವಿವೇಕಾನಂದ ಅವರೇ ಕಲ್ಪನೆ ನೀಡಿದ್ದಾರೆ’ ಎಂದು ತಿಳಿಸಿದರು.

‘ಒಂದೆಡೆ ಹಿಂದುಳಿದವರು, ಇನ್ನೊಂದೆಡೆ ಮುಂದುವರಿದ ಜನಾಂಗದವರು ಸಾಗುತ್ತಿದ್ದರೆ ಭಾರತ ವಿಶ್ವದ ನಂ.1 ದೇಶವಾಗಲು ಸಾಧ್ಯವಿಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋದಾಗ ಮಾತ್ರ ದೇಶ ಸದೃಢವಾಗಲು ಸಾಧ್ಯ. 21ನೇ ಶತಮಾನ ಭಾರತದ ಶತಮಾನವಾಗಲು ಸಾಧ್ಯ’ ಎಂದು ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಮಾತನಾಡಿ, ‘ಸೇವೆಗೆ ಸಂವೇದನೆ, ಹೃದಯವಂತಿಕೆ ಬೇಕು. ಸೇವೆಯ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಸೇವೆಗೆ ಪ್ರತಿಯೊಬ್ಬರು ಕೈಜೋಡಿಸಿದರೆ ಆಂದೋಲನ ರೂಪ ಪಡೆಯಲು ಸಾಧ್ಯ’ ಎಂದು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಜತ ಮಹೋತ್ಸವ ಸಮಾರೋಪ ಸಮಿತಿ ಅಧ್ಯಕ್ಷ ಬಸವರಾಜ ದೇಶಮುಖ ಮಾತನಾಡಿ, ‘ದೇಶದ ಹಲವು ಶಿವಶರಣರು ಸೇವೆ ಕೈಗೊಂಡಿದ್ದಾರೆ. ಸೇವಾ ಭಾವನೆ ಎಲ್ಲರಲ್ಲೂ ಬೆಳೆಸಬೇಕು’ ಎಂದರು.

ಖ್ಯಾತ ಹಿಂದೂಸ್ತಾನಿ ಗಾಯಕ ಜಯತೀರ್ಥ ಮೇವುಂಡಿ ಗಾಯನ ಪ್ರಸ್ತುತಪಡಿಸಿದರು.

Quote - ‘ಸೇವೆ ಎನ್ನುವುದು ಭಾರತೀಯರ ಸಂಸ್ಕೃತಿಯಲ್ಲಿ ಅಂತರ್ಗತವಾಗಿದೆ. ಸೇವಾ ಭಾರತಿಯ ಚಟುವಟಿಕೆಗಳು ಮುಂಬರುವ ದಿನಗಳಲ್ಲಿ ಮುಂದುವರಿಯಲಿವೆ. ಸುನೀಲ ಸಪ್ರೆ ರಾಷ್ಟ್ರೀಯ ಸೇವಾ ಭಾರತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.