ADVERTISEMENT

ಹುಬ್ಬಳ್ಳಿ: ಹೊರಗಷ್ಟೇ ಥಳುಕು, ಒಳಗೆ ಹುಳುಕು

ನಾಗರಾಜ್ ಬಿ.ಎನ್‌.
Published 6 ಜನವರಿ 2025, 5:36 IST
Last Updated 6 ಜನವರಿ 2025, 5:36 IST
<div class="paragraphs"><p>ಹುಬ್ಬಳ್ಳಿ ವಿದ್ಯಾನಗರದ ಬನಶಂಕರಿ ಬಡಾವಣೆಯ ಎರಡನೇ ಮುಖ್ಯರಸ್ತೆ ಬಳಿ ಏಳು–ಎಂಟು ವರ್ಷಗಳಿಂದ ವಾರಸ್ದಾರರಿಲ್ಲದೆ ನಿಂತಿರುವ ವಾಹನಗಳು </p></div>

ಹುಬ್ಬಳ್ಳಿ ವಿದ್ಯಾನಗರದ ಬನಶಂಕರಿ ಬಡಾವಣೆಯ ಎರಡನೇ ಮುಖ್ಯರಸ್ತೆ ಬಳಿ ಏಳು–ಎಂಟು ವರ್ಷಗಳಿಂದ ವಾರಸ್ದಾರರಿಲ್ಲದೆ ನಿಂತಿರುವ ವಾಹನಗಳು

   

–ಪ್ರಜಾವಣಿ ಚಿತ್ರ: ಗೋವಿಂದರಾಜ ಜವಳಿ

ಹುಬ್ಬಳ್ಳಿ: ರಾಜ್ಯಕ್ಕೇ ಮಾದರಿ ಎನ್ನುವಂಥ ₹42 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಇಲ್ಲಿಯ ವಿದ್ಯಾನಗರದ ಟೆಂಡರ್‌ ಶ್ಯೂರ್‌ ರಸ್ತೆಯ ಅಕ್ಕಪಕ್ಕ ಹಾಗೂ ಸುತ್ತಲಿನ ಬಡಾವಣೆಗಳಲ್ಲಿ ಸಮಸ್ಯೆಗಳೇ ತುಂಬಿಕೊಂಡಿವೆ. ಪಾರ್ಕಿಂಗ್‌ ವ್ಯವಸ್ಥೆಯಿಲ್ಲ ಎನ್ನುವುದರ ಜೊತೆಗೆ, ಸ್ವಚ್ಛತೆ, ಸರಿಯಾದ ರಸ್ತೆ, ಗಟಾರಗಳು ಸಹ ಮರೀಚಿಕೆಯಾಗಿದೆ. ಇದು ಸುತ್ತಲಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ADVERTISEMENT

ವಾಣಿಜ್ಯನಗರಿಯ ‘ಹೈಫೈ ಏರಿಯಾ’ ಎನ್ನುವ ಖ್ಯಾತಿ ಪಡೆದಿರುವ ಈ ಟೆಂಡರ್‌ ಶ್ಯೂರ್‌ ರಸ್ತೆ ನೋಡಲಷ್ಟೇ ಥಳುಕು–ಬಳುಕು. ಸುತ್ತಮುತ್ತಲಿನ ಸಿದ್ದೇಶ್ವರ ಪಾರ್ಕ್‌, ಕಾಳಿದಾಸನಗರ, ಬನಶಂಕರಿ ಬಡಾವಣೆ, ಶಿರೂರು ಪಾರ್ಕ್‌, ಅಕ್ಷಯ ಕಾಲೊನಿ, ಶ್ರೇಯಾ ನಗರ ಬಡಾವಣೆಗಳೆಲ್ಲ ಹುಳುಕುಗಳನ್ನು ತುಂಬಿಕೊಂಡಿವೆ. ಈ ಎಲ್ಲ ಬಡಾವಣೆಗಳಲ್ಲಿನ ಖಾಲಿ ನಿವೇಶನಗಳಲ್ಲಿ ಹಾಗೂ ಒಳರಸ್ತೆಗಳಲ್ಲಿ ಕಸ ಹಾಗೂ ತ್ಯಾಜ್ಯಗಳೇ ತುಂಬಿಕೊಂಡಿವೆ. ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ಹಂದಿ, ನಾಯಿ, ಹಾವು, ಚೇಳು, ಹುಳು–ಹುಪ್ಪಡಿಗಳ ಆವಾಸ ಸ್ಥಾನವಾಗಿವೆ. ಕೆಲವು ಕಡೆ ಗಟಾರು ಇಲ್ಲದೆ ರಸ್ತೆಗಳನ್ನು ನಿರ್ಮಿಸಿರುವುದರಿಂದ ಸುತ್ತಮುತ್ತಲಿನ ಮನೆಗಳ ಹೊಸಲು ನೀರು ರಸ್ತೆ ಮೇಲೆಯೇ ಹರಿಯುತ್ತದೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿವೆ ಎನ್ನುವುದು ಸ್ಥಳೀಯರ ಆರೋಪ.

‘ಇತ್ತೀಚಿಗೆ ಟೆಂಡರ್‌ ಶ್ಯೂರ್‌ ರಸ್ತೆ ಅಕ್ಕಪಕ್ಕ ಆಹಾರ ಮಳಿಗೆಗಳು, ವಾಣಿಜ್ಯ ಮಳಿಗೆಗಳು ಹಾಗೂ ಚಿಕ್ಕಪುಟ್ಟ ವ್ಯಾಪಾರದ ಅಂಗಡಿಗಳ ಸಂಖ್ಯೆ ಹೆಚ್ಚಾಗಿವೆ. ವ್ಯಾಪಾರ ವಹಿವಾಟು ಮುಗಿದ ನಂತರ ರಾತ್ರಿ ವೇಳೆ ನಿರುಪಯುಕ್ತ ವಸ್ತುಗಳನ್ನು ಈ ಮೊದಲು ರಸ್ತೆಪಕ್ಕ ಇಟ್ಟಿರುತ್ತಿದ್ದ ಕಸದ ಡಬ್ಬಿಯಲ್ಲಿ ಹಾಕುತ್ತಿದ್ದರು. ಅವುಗಳಲ್ಲಿ ಇರುವ ಅಳಿದುಳಿದ ಆಹಾರ ಪದಾರ್ಥಗಳು ತಿನ್ನುವಾಗ ನಾಯಿ ಮತ್ತು ಹಂದಿಗಳು, ಕಸವನ್ನು ಎಲ್ಲೆಂದರಲ್ಲಿ ಚಲ್ಲಾಪಿಲ್ಲಿ ಮಾಡುತ್ತಿದ್ದವು. ಪಾಲಿಕೆ ಸಿಬ್ಬಂದಿ ಕಸದ ಡಬ್ಬಿಗಳನ್ನು ತೆರವು ಮಾಡಿ, ‘ಇಲ್ಲಿ ಯಾರೂ ಕಸ ಚೆಲ್ಲಬಾರದು, ದಂಡ ವಿಧಿಸಲಾಗುವುದು’ ಎಂದು ಫಲಕ ಅಳವಡಿಸಿದ್ದಾರೆ. ಪರಿಣಾಮ ಸುತ್ತಮುತ್ತಲಿನ ಖಾಲಿ ನಿವೇಶನದಲ್ಲಿ ಕಸ, ತ್ಯಾಜ್ಯಗಳು ರಾಶಿ ಬೀಳುತ್ತಿವೆ’ ಎಂದು ಶ್ರೇಯಾನಗರ ನಿವಾಸಿ ಲಕ್ಷ್ಮಣ ಪಡವರ್ಧನ ಹೇಳುತ್ತಾರೆ.

‘ಸಿದ್ಧೇಶ್ವರ ಪಾರ್ಕ್‌ ವೃತ್ತದಿಂದ ಉಣಕಲ್‌ ಕೆರೆಗೆ ಸಂಪರ್ಕಿಸುವ ರಸ್ತೆಯನ್ನು ಹೊಸದಾಗಿ ನಿರ್ಮಿಸಲಾಗಿದೆ. ಆದರೆ, ರಸ್ತೆಯ ಮಧ್ಯ ಅಳವಡಿಸಿರುವ ಪೇವರ್ಸ್‌ ಅಪಘಾತಗಳಿಗೆ ಕಾರಣವಾಗುತ್ತಿದ್ದು, ಪಾಲಿಕೆ ಅವೈಜ್ಞಾನಿಕ ಕಾಮಗಾರಿ ನಡೆಸಿ ಜನರ ಪ್ರಾಣಕ್ಕೆ ಎರವಾಗುತ್ತಿದೆ’ ಎಂದು ಅಲ್ಲಿಯದೇ ನಿವಾಸಿ ಗುರುಲಿಂಗಪ್ಪ ಸುಂಕದ ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ರಸ್ತೆಯನ್ನೇನೂ ಉತ್ತಮವಾಗಿ ನಿರ್ಮಿಸಿದ್ದಾರೆ. ಆದರೆ, ಮಧ್ಯ ಅಳವಡಿಸಿರುವ ಪೇವರ್ಸ್‌ ಅಕ್ಕಪಕ್ಕದ ರಸ್ತೆಗಿಂತ ಎತ್ತರವಾಗಿದೆ. ವಾಹನಗಳ ಸಂಚಾರ ಹೆಚ್ಚಾದಾಗ ಅಥವಾ ರಾತ್ರಿವೇಳೆ ದ್ವಿಚಕ್ರ ವಾಹನ ಸವಾರರು ಪೇವರ್ಸ್‌ ಮೇಲೆ ವಾಹನ ಹತ್ತಿಸಿ ನಿಯಂತ್ರಣ ತಪ್ಪಿ ಬಿದ್ದ ಸಾಕಷ್ಟು ಉದಾಹರಣೆಗಳಿವೆ. ಕೆಲವರು ಗಾಯಗೊಂಡು ಆಸ್ಪತ್ರೆಗೂ ದಾಖಲಾಗಿದ್ದಾರೆ. ಪೇವರ್ಸ್‌ ಸರಿಪಡಿಸಿ ಎಂದು ಸಾಕಷ್ಟು ಬಾರಿ ಪಾಲಿಕೆ ಅಧಿಕಾರಿಗಳಿಗೆ ವಿನಂತಿಸಿದರೂ ಪರಿಹಾರ ಸಿಕ್ಕಿಲ್ಲ’ ಎಂದು ಆರೋಪಿಸಿದರು.

ಹುಬ್ಬಳ್ಳಿ ವಿದ್ಯಾನಗರದ ಟೆಂಡರ್‌ ಶ್ಯೂರ್‌ ರಸ್ತೆಯ ಚೇತನಾ ಕಾಲೇಜು ಬಳಿಯ ಖಾಳಿ ನಿವೇಶನದಲ್ಲಿ ತ್ಯಾಜ್ಯ ರಾಶಿ ಬಿದ್ದಿದೆ

ಕ್ರಮ ಕೈಗೊಳ್ಳುತ್ತೇವೆ: ‘ಖಾಲಿ ನಿವೇಶನ ಶುಚಿಗೊಳಿಸುವ ಕುರಿತು ಈಗಾಗಲೇ ಎರಡು ಬಾರಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಕೆಲವರಿಗೆ ನೋಟಿಸ್‌ ನೀಡಿದರೂ ಶುಚಿಗೊಳಿಸಿಲ್ಲ. ಟೆಂಡರ್ ಶ್ಯೂರ್‌ ರಸ್ತೆ ಅಕ್ಕಪಕ್ಕದ ಖಾಲಿ ನಿವೇಶನಗಳಲ್ಲಿ ಸಾರ್ವಜನಿಕರು ಮತ್ತು ವಾಣಿಜ್ಯಮಳಿಗೆಯವರು ತ್ಯಾಜ್ಯ ತಂದು ಸುರಿಯುತ್ತಿದ್ದಾರೆ. ಈ ಕುರಿತು ಅಧಿಕಾರಿಗಳಿಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು’ ಎಂದು ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಹೇಳಿದರು.

ವಾರಸ್ದಾರರಿಲ್ಲದ ಬಸ್‌, ಲಾರಿ..!

‘ಬನಶಂಕರಿ ಬಡಾವಣೆಯ ರಸ್ತೆಗಳೆಲ್ಲ ಹದಗೆಟ್ಟು ಹೋಗಿವೆ. ತ್ಯಾಜ್ಯ ಸಂಗ್ರಹ ವಾಹನ ವಾರಕ್ಕೊಮ್ಮೆ ಬರುವುದರಿಂದ ಸುತ್ತಮುತ್ತಲಿನ ನಿವಾಸಿಗಳು ರಸ್ತೆ ಪಕ್ಕದಲ್ಲಿಯೇ ತ್ಯಾಜ್ಯ ಸುರಿಯುತ್ತಾರೆ. ಮುಖ್ಯ ರಸ್ತೆಗೆ ಹೊಂದಿಕೊಂಡು ಮೇ ಕ್ಲೀನರ್‌ ಕಾರ್‌ ವಾಶ್‌ ಕೇಂದ್ರದವರು ವಾಹನಗಳನ್ನು ಶುಚಿಗೊಳಿಸಿದ ನೀರನ್ನು ಹಿಂಬದಿಯಿರುವ ಖಾಲಿ ನಿವೇಶನಕ್ಕೆ ಪೈಪ್‌ ಮೂಲಕ ನೇರವಾಗಿ ಬಿಡುತ್ತಾರೆ. ಆ ನೀರು ಅಲ್ಲಿರುವ ಅಪಾರ್ಟ್‌ಮೆಂಟ್‌ಗಳ ಆವರಣಕ್ಕೆ ನುಗ್ಗಿ ಹೊಲಸು ಎಬ್ಬಿಸುತ್ತಿದೆ. ಅಲ್ಲಿಯೇ ಇರುವ ಎರಡನೇ ಅಡ್ಡರಸ್ತೆಯ ವೃತ್ತದಲ್ಲಿ ವಾಹನ ಚಾಲನಾ ತರಬೇತಿ ನೀಡುವ ಬಸ್‌ ಮತ್ತು ಲಾರಿಯನ್ನು ನಿಲ್ಲಿಸಿ ಏಳು–ಎಂಟು ವರ್ಷಗಳಾಗಿವೆ.

ಖಾಲಿ ನಿವೇಶನದಲ್ಲಿ ಅವುಗಳನ್ನು ನಿಲ್ಲಿಸಿರುವುದರಿಂದ, ಅಕ್ಕಪಕ್ಕದ ಜಾಗ ಸಾರ್ವಜನಿಕ ಮೂತ್ರ ವಿಸರ್ಜನಾ ಸ್ಥಳವಾಗಿ ಮಾರ್ಪಟ್ಟಿದೆ. ರಾತ್ರಿ ವೇಳೆ ಕೆಲವರು ಮದ್ಯದ ಬಾಟಲಿಗಳನ್ನು ಬಡಾವಣೆಗಳಲ್ಲಿನ ಮನೆಯಂಗಳಕ್ಕೆ ಎಸೆದು ಹೋಗುತ್ತಾರೆ’ ಎಂದು ಗುರುಶಾಂತಪ್ಪ ಮಳಲಿ ಅಸಮಾಧಾನ ವ್ಯಕ್ತಪಡಿಸಿದರು.

ಕಾರ್‌ ವಾಶ್‌ ಸೆಂಟರ್‌ನಲ್ಲಿ ವಾಹನಗಳನ್ನು ಶುಚಿಗೊಳಿಸಿದ ನೀರು ಅಪಾರ್ಟ್‌ಮೆಂಟ್‌ನ ಆವರಣದೊಳಗೆ ನುಗ್ಗುತ್ತವೆ. ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ
ಮಹೇಶ ಭಟ್‌ ಬನಶಂಕರಿ ಬಡಾವಣೆ ನಿವಾಸಿ
ಕಾರ್‌ ವಾಶ್‌ ಮಾಡಿದ ನೀರು ಸರಿಯಾಗಿ ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಮಾಲೀಕರಿಗೆ ಈಗಾಗಲೇ ಸೂಚನೆ ನೀಡಿ ಎಚ್ಚರಿಕೆ ನೀಡಲಾಗಿದೆ. ಗುರುವಾರ ಭೇಟಿ ನೀಡಿ ಶಾಶ್ವತ ಪರಿಹಾರ ಒದಗಿಸಲಾಗುವುದು
ಸುರೇಶ ರಾಥೊಡ್ ಆರೋಗ್ಯ ನಿರೀಕ್ಷಕ ಹು–ಧಾ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.