ಧಾರವಾಡ: ‘ಛತ್ರಪತಿ ಶಿವಾಜಿ ಅವರು ಮುಸ್ಲಿಂ ವಿರೋಧಿಯಾಗಿರಲಿಲ್ಲ. ಧರ್ಮದ ಪ್ರಕಾರ ನಡೆಯದವರನ್ನು ವಿರೋಧಿಸುತ್ತಿದ್ದರು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಇಲ್ಲಿನ ಮರಾಠಾ ಮಂಡಳದ ಆವರಣದಲ್ಲಿ ಶನಿವಾರ ನಡೆದ ಮರಾಠಾ ವಿದ್ಯಾಪ್ರಸಾರಕ ಮಂಡಳದ ವೆಬ್‍ಸೈಟ್ ಉದ್ಘಾಟನೆ, ಆಡಳಿತ ಕಚೇರಿ ಹಾಗೂ ವಿಜ್ಞಾನ ಪಿಯು ಕಾಲೇಕು ಕಟ್ಟಡ ಕಾಮಗಾರಿಗೆ ಭೂಮಿಪೂಜೆ ಸಮಾರಂಭದಲ್ಲಿ ಮಾತನಾಡಿದರು.
‘ಕೆಲವರು ಶಿವಾಜಿಯನ್ನು ಮುಸ್ಲಿಂ ವಿರೋಧಿ ಎಂಬುದಾಗಿ ಬಿಂಬಿಸುತ್ತಿರುವುದು ದುರದೃಷ್ಟಕರ ಸಂಗತಿ. ಅವರ ಸಲಹೆಗಾರರಲ್ಲಿ ಮುಸ್ಲಿಮರು ಸಹ ಇದ್ದರು. ರುಸ್ತುಂ ಎ ಜಮಾಲ್ ಎಂಬ ಸೈನಿಕ ಶಿವಾಜಿಗೆ ಹುಲಿಯ ಉಗುರು ನೀಡಿದ್ದರು. ಅವು ಈಗಲೂ ಲಂಡನ್ ವಸ್ತುಸಂಗ್ರಹಾಲಯದಲ್ಲಿವೆ’ ಎಂದರು.
‘ಯುವಜನರು ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಬೇಕು. ಸುಳ್ಳು ಹೇಳಿ ದಾರಿ ತಪ್ಪಿಸುವವರನ್ನು ನಂಬಬಾರದು. ಸಮಾಜವನ್ನು ಬಲಿಷ್ಠವಾಗಿ ಕಟ್ಟಬೇಕು. ಇಂದಿನ ರಾಜಕೀಯ ಸ್ಥಿತಿ ತಿಳಿದುಕೊಳ್ಳಬೇಕು. ಎಲ್ಲ ಜಾತಿ ಮತ್ತು ಧರ್ಮೀಯರ ರಕ್ಷಣೆಗೆ ಹೋರಾಡಿದ ಛತ್ರಪತಿ ಶಿವಾಜಿ ಅವರನ್ನು ಒಂದು ಸಮಾಜಕ್ಕೆ ಸಿಮೀತಗೊಳಿಸಬಾರದು’ ಎಂದು ಹೇಳಿದರು.
ಮಂಡಳದ ಅಧ್ಯಕ್ಷ ಎಂ.ಎನ್. ಮೋರೆ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಜ್ಯೋತಿ ಪಾಟೀಲ, ಉಪಮೇಯರ್ ಸಂತೋಷ ಚವ್ಹಾಣ್, ಹು–ಧಾ ಮಹಾನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಮಂಡಳದ ಕಾರ್ಯಾಧ್ಯಕ್ಷ ಸುಭಾಷ ಶಿಂಧೆ, ಗೌರವ ಕಾರ್ಯದರ್ಶಿ ರಾಜು ಬಿರಜೆನವರ, ಸಹ ಕಾರ್ಯದರ್ಶಿ ಮಲ್ಲೇಶಪ್ಪ ಶಿಂಧೆ, ಪದವಿ ಕಾಲೇಜಿನ ಪ್ರಾಚಾರ್ಯ ಎಂ.ಎಸ್. ಗಾಣಿಗೇರ, ಎಸ್.ಎಂ.ಸಂಕೋಜಿ ಇದ್ದರು.
ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು. ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕುದಿವ್ಯಪ್ರಭು ಜಿಲ್ಲಾಧಿಕಾರಿ
‘ಬಡ ವಿದ್ಯಾರ್ಥಿಗಳಿಗೆ ನೆರವಾಗಿ’:
‘ಮರಾಠಾ ಮಂಡಳದ ಸಂಸ್ಥಾಪಕರ ದಿನಾಚರಣೆ ನಡೆಸಬೇಕು. ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿಜ್ಞಾನ ಕಾಲೇಜುಗಳನ್ನು ಸ್ಥಾಪಿಸಬೇಕು. ಸಮಾಜದ ಬಡ ಕುಟುಂಬದ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ತರಬೇತಿ ಕೇಂದ್ರ ತೆರೆಯಬೇಕು’ ಎಂದು ದ.ರಾ.ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಸರಜೂ ಕಾಟ್ಕರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.