ADVERTISEMENT

ನವದೆಹಲಿಗೆ ಸಿದ್ದರಾಮಯ್ಯ | ಎಐಸಿಸಿ ತಂತ್ರ: ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 4:15 IST
Last Updated 7 ಜುಲೈ 2025, 4:15 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ‘ಸಿದ್ದರಾಮಯ್ಯ ಅವರಿಗೆ ಇಲ್ಲಿಯೇ ಸಂಭಾಳಿಸಲು ಸಾಧ್ಯವಾಗುತ್ತಿಲ್ಲ. ಅವರಿಗೆ ದಿಢೀರ್‌ನೇ ಎಐಸಿಸಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿಯ ನೇತೃತ್ವ ವಹಿಸಲಾಗಿದೆ. ಅವರನ್ನು ನವದೆಹಲಿಗೆ ಕರೆಸಿಕೊಳ್ಳುವ ತಂತ್ರ ಅವರ ಪಕ್ಷದ ಹೈಕಮಾಂಡ್ ನಡೆಸಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಸಲಹಾ ಮಂಡಳಿ ನೇತೃತ್ವ ವಹಿಸಿರುವ ಬಗ್ಗೆ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆಸಿಕೊಳ್ಳುವ ನೆಪದಲ್ಲಿ ಇಲ್ಲಿ ಜಾಗ ಖಾಲಿ ಮಾಡಿ ಎಂಬ ಸಂದೇಶವನ್ನು ಆ ಪಕ್ಷದ ಹೈಕಮಾಂಡ್ ರವಾನಿಸಿದೆ’ ಎಂದರು.  

‘ಮುಂದಿನ ಮುಖ್ಯಮಂತ್ರಿ ತಾವೇ ಎಂದು ಪಕ್ಷದ ಆಂತರಿಕ ವಲಯದಲ್ಲಿ ಡಿ.ಕೆ.ಶಿವಕುಮಾರ್‌ ಹೇಳಿದರೆ, ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಕಾಂಗ್ರೆಸ್ ಅಧಿಕಾರದಲ್ಲಿರುವ ಯಾವ ರಾಜ್ಯಗಳಲ್ಲೂ ಅಲ್ಲಿನ ಮುಖ್ಯಮಂತ್ರಿಗಳು ಈ ರೀತಿ ಹೇಳುತ್ತಿಲ್ಲ’ ಎಂದರು.

ADVERTISEMENT

‘ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ಕಾಂಗ್ರೆಸ್ ಸರ್ಕಾರ ರಚಿಸಿದ ತಜ್ಞರ ಸಮಿತಿ ಹೇಳಿದೆ. ಹೀಗಾಗಿ ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಿರಬಹುದು ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶದ ವಿಜ್ಞಾನಿಗಳ ಕ್ಷಮೆ ಕೇಳಬೇಕು’ ಎಂದರು.

‘ದೇಶದಲ್ಲಿ ಮೊದಲ‌ ಕೋವಿಡ್ ಪ್ರಕರಣ ಪತ್ತೆಯಾದಾಗ ಮೋದಿ ಅವರು ಲಸಿಕೆ ತಯಾರಿಸಲು ಸೂಚಿಸಿ, ಅಗತ್ಯ ಅನುದಾನ ನೀಡಿದರು.‌ ಸಿದ್ದರಾಮಯ್ಯ ಅವರೂ ದೇಶದ ಲಸಿಕೆ ಪಡೆದಿದ್ದಾರೆ ಹೊರತು ವಿದೇಶದ್ದಲ್ಲ. ತಜ್ಞರ ಸಮಿತಿ ವರದಿಯನ್ನು ಮುಖ್ಯಮಂತ್ರಿ ಈ ವರದಿಯನ್ನು ಒಪ್ಪುವುದಿಲ್ಲವೆ’ ಎಂದು ಪ್ರಶ್ನಿಸಿದರು.

Cut-off box - ಸಿದ್ದರಾಮಯ್ಯಗೆ ಪ್ರೊಮೋಷನ್ ಹೆಸರಲ್ಲಿ ಡಿಮೋಷನ್: ಬೆಲ್ಲದ ಹುಬ್ಬಳ್ಳಿ:‘ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ಹೈಕಮಾಂಡ್ ತಂತ್ರ ಹೆಣೆದಿದ್ದು ಅದಕ್ಕೆಂದೇ ಅವರನ್ನು ಎಐಸಿಸಿ ಅಹಿಂದ್ ಸಲಹಾ ಸಮಿತಿ ಸದಸ್ಯರನ್ನಾಗಿ ಮಾಡಲಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು. ‘ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆಸಿಕೊಂಡು ಸಿಎಂ ಕುರ್ಚಿಯಿಂದ ಕೆಳಗಿಳಿಸುವ ಯೋಜನೆಯಿದೆ. ಪ್ರೊಮೋಷನ್ ನೀಡಿ ಡಿಮೋಷನ್ ಮಾಡುವ ತಂತ್ರಗಾರಿಕೆ ಇದು’ ಎಂದು ಅವರು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.