ADVERTISEMENT

ಸಂಘಟನೆಗಳ ನಿಷೇಧ ಹೇಳಿಕೆ: ಸಿದ್ದರಾಮಯ್ಯರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ - ಜೋಶಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2022, 9:49 IST
Last Updated 23 ಏಪ್ರಿಲ್ 2022, 9:49 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ಸರ್ಕಾರಕ್ಕೆ ದಮ್‌ ಇದ್ದರೆ ಸಂಘಟನೆಗಳನ್ನು ನಿಷೇಧಿಸಲಿ ಎಂದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ‘ಇದು ಸಿದ್ದರಾಮಯ್ಯನವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ’ ಎಂದು ಹರಿಹಾಯ್ದರು.

ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ತುಷ್ಠೀಕರಣ ರಾಜಕಾರಣಕ್ಕಾಗಿ ಸಿದ್ದರಾಮಯ್ಯ ಸಂಘಟನೆಗಳನ್ನು ನಿಷೇಧಿಸಲಿ ಎನ್ನುತ್ತಿದ್ದಾರೆ. ಎಸ್‌ಡಿಪಿಐ ಹೆಸರು ಮಾತ್ರ ಹೇಳಿದರೆ ಮುಸ್ಲಿಮರ ಮತಗಳನ್ನು ಕಳೆದುಕೊಳ್ಳುವ ಭೀತಿಯಿಂದಾಗಿ ಆರ್‌ಎಸ್‌ಎಸ್‌ ಹೆಸರನ್ನೂ ಸೇರಿಸಿದ್ದಾರೆ’ ಎಂದರು.

ರಾಜಕಾರಣ ಬೇಡ: ಪಿಎಸ್‌ಐ ನೇಮಕಾತಿ ವಿವಾದದಲ್ಲಿ ಯಾವುದೇ ರಾಜಕೀಯ ಪಕ್ಷಗಳ ನಾಯಕರು ಭಾಗಿಯಾಗಿದ್ದರೂ ‌ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್ ಎನ್ನುವುದು ಮುಖ್ಯವಲ್ಲ ಎನ್ನುವುದು ಎಂದರು.

ADVERTISEMENT

ಮಠ ಹಾಗೂ ಮಂದಿರಗಳಿಗೆ ಕಮಿಷನ್‌ ಕುರಿತು ಉಳಿದ ಮಠಾಧೀಶರು ‘ನಾವು ಕಮಿಷನ್‌ ಕೊಟ್ಟಿಲ್ಲ’ ಎಂದಿದ್ದಾರೆ. ಅವರ ಬಗ್ಗೆಯೂ ಸಿದ್ದರಾಮಯ್ಯ ಮಾತನಾಡಲಿ ಎಂದು ಸವಾಲು ಹಾಕಿದರು.

ಕುಮ್ಮಕ್ಕು: ಹಿಜಾಬ್‌ ಕಾರಣಕ್ಕಾಗಿ ಇಬ್ಬರು ವಿದ್ಯಾರ್ಥಿನಿಯರು ಪರೀಕ್ಷೆಯಿಂದ ದೂರ ಉಳಿದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ‘ವಿದ್ಯಾರ್ಥಿಗಳಿಗೆ ಮತಾಂಧ ಶಕ್ತಿಗಳು ಕುಮ್ಮಕ್ಕು ನೀಡುತ್ತಿವೆ’ ಎಂದು ಆರೋಪಿಸಿದರು.

‘ಜನರ ಹಾದಿ ತಪ್ಪಿಸಿ ಕುಮ್ಮಕ್ಕು ನೀಡುವ ಶಕ್ತಿಗಳು ಕಾಶ್ಮೀರದಲ್ಲಿಯೂ ವಿದ್ಯಾರ್ಥಿಗಳ ಮೂಲಕ ಕಲ್ಲು ಹೊಡೆಯಿಸಿವೆ. ಹೀಗೆ ಕಲ್ಲು ಎಸೆಯಲು ಪ್ರೇರೇಪಿಸಿದವರೇ ಈಗ ತಮ್ಮ ಮಕ್ಕಳನ್ನು ವಿದೇಶಗಳಲ್ಲಿ ಓದಿಸುತ್ತಿದ್ದಾರೆ ಎನ್ನುವುದು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಯಾರ ಮಾತನ್ನೊ ಕೇಳಿ ವಿದ್ಯಾರ್ಥಿಗಳು ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬಾರದು. ಇದರಿಂದ ಏನೂ ಉಪಯೋಗವಿಲ್ಲ’ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.