ADVERTISEMENT

ಸಿದ್ಧಾರೂಢರ ಸನ್ನಿಧಿಯಲ್ಲಿ ನಿತ್ಯ ‘ಆರೋಗ್ಯ ದಾಸೋಹ’

ಬಡವರು, ಭಕ್ತರು, ಯಾತ್ರಾರ್ಥಿಗಳಿಗೆ ಉಚಿತ ಚಿಕಿತ್ಸೆ, ಔಷಧ ಲಭ್ಯ

ಬಸವರಾಜ ಸಂಪಳ್ಳಿ
Published 14 ಡಿಸೆಂಬರ್ 2018, 20:00 IST
Last Updated 14 ಡಿಸೆಂಬರ್ 2018, 20:00 IST
ಹುಬ್ಬಳ್ಳಿಯ ಸಿದ್ಧಾರೂಢಮಠದ ಯಾತ್ರಿ ನಿವಾಸದಲ್ಲಿ ಆರಂಭಿಸಲಾಗಿರುವ ‘ಆರೋಗ್ಯ ದಾಸೋಹ’ ಚಿಕಿತ್ಸಾಲಯದಲ್ಲಿ ರೋಗಿಗಳ ತಪಾಸಣೆ ಮಾಡುತ್ತಿರುವ ವೈದ್ಯ ಡಾ. ಬಸವರಾಜ ಸಂಕನಗೌಡರ  –ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌
ಹುಬ್ಬಳ್ಳಿಯ ಸಿದ್ಧಾರೂಢಮಠದ ಯಾತ್ರಿ ನಿವಾಸದಲ್ಲಿ ಆರಂಭಿಸಲಾಗಿರುವ ‘ಆರೋಗ್ಯ ದಾಸೋಹ’ ಚಿಕಿತ್ಸಾಲಯದಲ್ಲಿ ರೋಗಿಗಳ ತಪಾಸಣೆ ಮಾಡುತ್ತಿರುವ ವೈದ್ಯ ಡಾ. ಬಸವರಾಜ ಸಂಕನಗೌಡರ  –ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌   

ಹುಬ್ಬಳ್ಳಿ: ನಿರಂತರ ಅನ್ನ ದಾಸೋಹ ಮತ್ತು ಜ್ಞಾನ ದಾಸೋಹದಿಂದ ಪ್ರಸಿದ್ಧವಾಗಿರುವ ಸದ್ಗುರು ಶ್ರೀ ಸಿದ್ಧಾರೂಢರ ಸನ್ನಿಧಿಯಲ್ಲಿ ಬಡವರು, ಭಕ್ತರು, ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಇದೀಗ ‘ಆರೋಗ್ಯ ದಾಸೋಹ’ ಆರಂಭಿಸಲಾಗಿದೆ.

ಸಿದ್ಧಾರೂಢರ ‘ಆರೋಗ್ಯ ದಾಸೋಹ’ ಯೋಜನೆಯ ಯಶಸ್ವಿಗೆ ನಗರದ ಪ್ರಮುಖ ವೈದ್ಯರು ಕೈಜೋಡಿಸಿದ್ದಾರೆ. ಅನಾರೋಗ್ಯ ಪೀಡಿತರಿಗೆ ಉಚಿತ ಆರೋಗ್ಯ ಸಲಹೆ, ಚಿಕಿತ್ಸೆ, ಔಷಧವನ್ನು ನೀಡುವ ಜೊತೆಗೆ ಅಗತ್ಯವಿರುವವರಿಗೆ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆಗೂ ನೆರವು ನೀಡುತ್ತಿದ್ದಾರೆ.

‘ಆರೋಗ್ಯ ದಾಸೋಹ’ಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ದಿನಂಪ್ರತಿ 50ಕ್ಕೂ ಹೆಚ್ಚು ಜನರು ಮಠಕ್ಕೆ ಬಂದು, ಉಚಿತ ಚಿಕಿತ್ಸೆ, ಔಷಧ ಪಡೆದುಕೊಳ್ಳುತ್ತಿದ್ದಾರೆ. ಮೇ 3ರಿಂದ ಆರಂಭಗೊಂಡು ಡಿಸೆಂಬರ್‌ 13ರ ವರೆಗೆ 3406 ಜನರು ಉಚಿತ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ADVERTISEMENT

ಲಭ್ಯ ಇರುವ ವೈದ್ಯರು:ಪ್ರತಿ ದಿನ ಬೆಳಿಗ್ಗೆ 8.30ರಿಂದ 11ರ ವರೆಗೆ ಡಾ.ಬಸವರಾಜ ಸಂಕನಗೌಡರ, ಮಧ್ಯಾಹ್ನ 3ರಿಂದ 5ರ ವರೆಗೆ ಡಾ.ಬಿ.ಸಿ.ಮೆಳ್ಳಿಗಟ್ಟಿ, ಸಂಜೆ 5ರಿಂದ 7ರ ವರೆಗೆ ಡಾ.ಜೆ.ಎಸ್‌.ನಾಯ್ಡು ಅವರು ಉಚಿತ ಚಿಕಿತ್ಸೆ ನೀಡುತ್ತಾರೆ.

ಪ್ರತಿ ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12ರ ವರೆಗೆ ಸ್ತ್ರೀರೋಗ ತಜ್ಞರಾದ ಡಾ. ಸವಿತಾ ನಾಡಗೌಡ, ಪ್ರತಿ ಸೋಮವಾರ ಬೆಳಿಗ್ಗೆ 8 ರಿಂದ 10.30ರ ವರೆಗೆ ದಂತವೈದ್ಯರಾದ ಮನೋಜ್‌ ಭಟ್‌, 10.30ರಿಂದ ಮಧ್ಯಾಹ್ನ 12.30ರ ವರಗೆ ಕಿವಿ ಮತ್ತು ಗಂಟಲು ತಜ್ಞರಾದ ಡಾ.ಪ್ರಿಯಾ ಕಟ್ಟಿ ಹಾಗೂ ಸಂಜೆ 4.30ರಿಂದ 6.30ರ ವರೆಗೆ ಮೂಲವ್ಯಾದಿ ತಜ್ಞರಾದ ಡಾ.ಎಸ್‌.ಎ.ಪಾಟೀಲ ಅವರು ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ.

ಪ್ರತಿ ತಿಂಗಳಿಗೊಮ್ಮೆ ಉಚಿತ ಮಧುಮೇಹ ಶಿಬಿರ ನಡೆಸಲಾಗುತ್ತಿದೆ. ಜೊತೆಗೆ ಆರೋಗ್ಯ ಜಾಗೃತಿ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಮಠದ ಆವರಣದಲ್ಲಿ ಒಂದು ವಾರಗಳ ಕಾಲ ಮದ್ಯಮುಕ್ತ ಶಿಬಿರವನ್ನು ನಡೆಸಲಾಗಿದ್ದು, ಈ ಶಿಬಿರದಲ್ಲಿ 125 ಮಂದಿ ಪಾಲ್ಗೊಂಡು, ಮದ್ಯವ್ಯಸನದಿಂದ ಹೊರಬಂದು, ಹೊಸ ಜೀವನ ಆರಂಭಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ‘ಆರೋಗ್ಯ ದಾಸೋಹ’ದ ರೂವಾರಿ ಡಾ. ಬಸವರಾಜ ಸಂಕನಗೌಡರ, ‘ಮೇ 3ರಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣೆ ಕೇಂದ್ರವನ್ನು ಮಠದ ಯಾತ್ರಿ ನಿವಾಸದಲ್ಲಿ ಆರಂಭಿಸಲಾಗಿದೆ’ ಎಂದರು.

‘ಆರೋಗ್ಯ ದಾಸೋಹದ ಮೊದಲ ಹೆಜ್ಜೆಯಾಗಿ ಹೊರರೋಗಿಗಳ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲಾಗಿದೆ. ಜೊತೆಗೆ ತುರ್ತು ಸಂದರ್ಭದಲ್ಲಿ ಅನುಕೂಲಕ್ಕಾಗಿ ನಾಲ್ಕು ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಒಂದು ದಿನದ ಮಟ್ಟಿಗೆ ಉಳಿದುಕೊಳ್ಳಲು ಒಳರೋಗಿಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಹೇಳಿದರು.

ಟ್ರಸ್ಟಿನ ಎಲ್ಲ 17 ಧರ್ಮದರ್ಶಿಗಳು ಆರೋಗ್ಯ ದಾಸೋಹಕ್ಕೆ ಒಮ್ಮತದಿಂದ ಪ್ರೋತ್ಸಾಹ ನೀಡುತ್ತಿದ್ದಾರೆ. ನಯಾಪೈಸೆ ಖರ್ಚಿಲ್ಲದೆ ಉಚಿತ ಆರೋಗ್ಯ ಸೇವೆಯನ್ನು ಭಕ್ತರಿಗೆ ನೀಡಲಾಗುತ್ತಿದೆ ಎಂದು ಹೇಳಿದರು.

ಕೈಜೋಡಿಸಬಹುದು:ಮಹತ್ವಾಕಾಂಕ್ಷಿ ಆರೋಗ್ಯ ದಾಸೋಹಕ್ಕೆ ನಗರದ ವೈದ್ಯರು, ಔಷಧ ಮಳಿಗೆಗಳು ಹಾಗೂ ಔಷಧ ಕಂಪನಿಗಳು ಕೈಜೋಡಿಸಬಹುದಾಗಿದೆ ಎಂದು ಅವರು ಮನವಿ ಮಾಡಿದರು.

ಮುಂದಿನ ದಿನಗಳಲ್ಲಿ ಚರ್ಮ, ಕಣ್ಣು, ಹೃದಯ ಮತ್ತು ನರರೋಗ ತಜ್ಞರು ತಿಂಗಳಿಗೊಮ್ಮೆ ಲಭ್ಯ ಇರಲಿದ್ದು, ಚಿಕಿತ್ಸೆ ನೀಡಲಿದ್ದಾರೆ. ಅಗತ್ಯ ಇರುವವರಿಗೆ ರಿಯಾಯಿತಿ ದರದಲ್ಲಿ ಕಿಮ್ಸ್‌ ಮತ್ತು ಇತರೆ ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆಗೆ ಮಠದಿಂದ ವ್ಯವಸ್ಥೆ ಮಾಡಿಸಿಕೊಡಲಾಗುತ್ತಿದೆ ಎಂದು ಹೇಳಿದರು.

ಪುಟ್ಟಪರ್ತಿ ಸಾಯಿಬಾಬಾ ಆಸ್ಪತ್ರೆ, ಧರ್ಮಸ್ಥಳದ ಎಸ್‌ಡಿಎಂ ಆಸ್ಪತ್ರೆ ಮಾದರಿಯಲ್ಲಿ ಸಿದ್ಧಾರೂಢರ ಸನ್ನಿಧಿಯಲ್ಲಿ ಸಕಲ ಸೌಲಭ್ಯ ಇರುವ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆಯನ್ನು ಆರಂಭಿಸುವ ಮೂಲಕ ಭಕ್ತರಿಗೆ ಆರೋಗ್ಯ ದಾಸೋಹ ಆರಂಭಿಸಬೇಕು ಎಂಬ ಉದ್ದೇಶವಿದೆ ಎಂದರು.

ಹೆಚ್ಚಿನ ಮಾಹಿತಿಗಾಗಿ ಡಾ.ಬಸವರಾಜ ಸಂಕನಗೌಡರ ಅವರ ಮೊಬೈಲ್‌ ಸಂಖ್ಯೆ 9448150022 ಸಂಪರ್ಕಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.