ADVERTISEMENT

ಶ್ರದ್ಧಾ, ಭಕ್ತಿಯ ಸಿದ್ದಾರೂಢ ಜಾತ್ರೆ

ನಿತ್ಯ ರಾತ್ರಿ ಪ್ರವಚನ, ಕೀರ್ತನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 3:04 IST
Last Updated 10 ಮಾರ್ಚ್ 2022, 3:04 IST
ಅಳ್ನಾವರ ಸಮೀಪದ ಅರವಟಗಿ ಗ್ರಾಮದಲ್ಲಿ ನಡೆದ ಸಿದ್ಧಾರೂಢ ಜಾತ್ರಾ ಮಹೋತ್ಸವದಲ್ಲಿ ಭಕ್ತರು ನೆರೆದಿದ್ದರು
ಅಳ್ನಾವರ ಸಮೀಪದ ಅರವಟಗಿ ಗ್ರಾಮದಲ್ಲಿ ನಡೆದ ಸಿದ್ಧಾರೂಢ ಜಾತ್ರಾ ಮಹೋತ್ಸವದಲ್ಲಿ ಭಕ್ತರು ನೆರೆದಿದ್ದರು   

ಅಳ್ನಾವರ: ಅರವಟಗಿ ಗ್ರಾಮದ ಆರಾಧ್ಯ ದೈವ ಸಿದ್ಧಾರೂಢರ ಜಾತ್ರಾ ಮಹೋತ್ಸವ ಕಳೆದ ಒಂದು ವಾರದಿಂದ ಶ್ರದ್ದಾ, ಭಕ್ತಿಯಿಂದ ನಡೆಯಿತು.

ಮಾ. 3ರಿಂದ ಹುಬ್ಬಳ್ಳಿಯ ಜಡಿ ಸಿದ್ದೇಶ್ವರ ಮಠದ ರಾಮಾನಂದ ಭಾರತಿ ಸ್ವಾಮೀಜಿ ಹಾಗೂ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಬಸವಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಿತ್ಯ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ಶಿವನಾಮ ಸಪ್ತಾಹದಲ್ಲಿ ಭಕ್ತರು ಶ್ರದ್ದೆಯಿಂದ ಭಗವಹಿಸಿದ್ದರು.

ಕಾರ್ಲಕಟ್ಟಿಯ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಕಿವಡೆಬೈಲನ ಚನ್ನವೃಷಭೇಂದ್ರ ಸ್ವಾಮೀಜಿ ಮಠದ ರವಿಶಾಸ್ತ್ರಿ ಸ್ವಾಮೀಜಿ, ಹಾಲ ಕುಸಗಲ್ಲದ ರವಿಶಂಕರ ಸ್ವಾಮೀಜಿ ಆಶೀರ್ವಚನ ನೀಡಿ, ಸಿದ್ಧಾರೂಢರ ಆರಾಧನೆಯಿಂದ ಗ್ರಾಮಸ್ಥರ ಬದುಕು ಸುಂದರವಾಗಲಿ, ಮಳೆ, ಬೆಳೆ ಸಮೃದ್ಧವಾಗಿ ಬರಲಿ ಎಂದು ಹಾರೈಸಿದರು.

ADVERTISEMENT

ನಿತ್ಯ ರಾತ್ರಿ ಪ್ರವಚನ, ಕೀರ್ತನೆ, ಭಜನೆ ಹಾಗೂ ಶಾಸ್ತ್ರ ಪಠಣ ಮತ್ತು ಅನ್ನ ಸಂತರ್ಪಣೆ ನಡೆಯಿತು. ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಹಸಿರು ತಳಿರು ತೋರಣಗಳ ಅಲಂಕಾರ ಮಾಡಲಾಗಿತ್ತು. ಬ್ಯಾಹಟ್ಟಿಯ ಮಡಿವಾಳಪ್ಪ ಮತ್ತು ಸಕ್ಕುಬಾಯಿ ಬಡಿಗೇರ ದಂಪತಿಯಿಂದ ಬೆಳಿಗ್ಗೆ ಮತ್ತು ಸಂಜೆ ಪ್ರತಿ ದಿನ ರುದ್ರಾದ್ಯಾಯ ಪಠಣ ಮತ್ತು ಶ್ರೀಗಳ ಸ್ತೂತ್ರ ಆಲಿಕೆ ಜರುಗಿತು.

ಮಾ. 9ರಂದು ಬುಧವಾರ ಜಾತ್ರೆಯ ಪ್ರಮುಖ ದಿನವಾಗಿತ್ತು. ಬೆಳಿಗೆ ಕರ್ತೃ ಗದ್ದುಗೆಗೆ ಅಭಿಷೇಕ ವಿಶೇಷ ಪೂಜೆ ನಡೆಯಿತು. ಸಿದ್ದಾರೂಢ ಮತ್ತು ಗುರುನಾಥರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ ದೇವಸ್ಥಾನದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಎರಡು ಜೋಡಿಗಳು ಹೊಸ ಬಾಳಿಗೆ ಕಾಲಿಟ್ಟವು.
ರಾತ್ರಿ ಸಿದ್ಧಾರೂಢ ತರುಣ ನಾಟ್ಯ ಸಂಘದವರಿಂದ ‘ಭೂಗರ್ಭದಲ್ಲಿ ಘರ್ಜಿಸಿದ ಗರುಡ’ ಬಯಲಾಟ ಪ್ರದರ್ಶನ ಗ್ರಾಮಸ್ಥರ ಮಣ ತಣಿಸಿತು. ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಅಶೋಕ ಜೋಡಟ್ಟಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಉಮೇಶ ಭೂಮಣ್ಣವರ, ಮಾಜಿ ಸಚಿವ ಸಂತೋಷ್ ಲಾಡ್ ಅವರ ಆಪ್ತ ಕಾರ್ಯದರ್ಶಿ ಶ್ರೀಕಾಂತ ಗಾಯಕವಾಡ, ವಿಶ್ವಂಬರ ಬನಸಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.