ಸಿದ್ಧಾರೂಢರ 95ನೇ ಪುಣ್ಯಾರಾಧನೆ ಪ್ರಯುಕ್ತ ಮಂಗಳವಾರ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಆವರಣದಲ್ಲಿರುವ ಪುಷ್ಕರಣಿಯಲ್ಲಿ ಜಲ ರಥೋತ್ಸವ ನಡೆಯಿತು -
ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
ಹುಬ್ಬಳ್ಳಿ: ಸಿದ್ಧಾರೂಢರ 95ನೇ ಪುಣ್ಯಾರಾಧನೆ ಪ್ರಯುಕ್ತ ಜಲ ರಥೋತ್ಸವ (ತೆಪ್ಪದ ತೇರು) ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಜನರು ಪಂಚಾಕ್ಷರಿ ಮಂತ್ರ ಪಠಿಸುವ ಮೂಲಕ ಭಕ್ತಿಯಲ್ಲಿ ಮಿಂದೆದ್ದರು. ಸಿದ್ಧಾರೂಢ ಮಹಾರಾಜ ಕೀ ಜೈ, ಹರ ಹರ ಮಹಾದೇವ, ಓಂ ನಮಃ ಶಿವಾಯ ಘೋಷಣೆಗಳು ಮೊಳಗಿದವು.
ಶ್ರೀಮಠದಿಂದ ಆರಂಭವಾದ ಪಲ್ಲಕ್ಕಿ ಉತ್ಸವ, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪುನಃ ಮಠಕ್ಕೆ ಆಗಮಿಸಿದ ನಂತರ ಜಲರಥೋತ್ಸವ ಆರಂಭಗೊಂಡಿತು. ಮಠದ ಆವರಣದಲ್ಲಿರುವ ಪುಷ್ಕರಣಿಯ ಸುತ್ತ ನಿಂತಿದ್ದ ಸಾವಿರಾರು ಭಕ್ತರು ಉತ್ತತ್ತಿ, ಹಣ್ಣು ಎಸೆದು ಘೋಷಣೆ ಕೂಗಿದರು.
ಜಲ ರಥೋತ್ಸವದ ಪ್ರಯುಕ್ತ ಬೆಳಿಗ್ಗೆ ಸಿದ್ಧಾರೂಢಸ್ವಾಮಿ ಹಾಗೂ ಗುರುನಾಥರೂಢ ಸ್ವಾಮೀಜಿ ಗದ್ದುಗೆಗೆ ವಿಶೇಷ ಪೂಜೆ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಆರೂಢ ಮಹಿಮೆ ಕುರಿತು ಬೆಳಿಗ್ಗೆ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇಂಚಲದ ಸಾದು ಸಂಸ್ಥಾನ ಮಠದ ಶಿವಾನಂದ ಭಾರತಿ ಸ್ವಾಮೀಜಿ, ಹೊಸದುರ್ಗ ಬ್ರಹ್ಮವಿದ್ಯಾನಗರದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಇಂಚಲದ ಪೂರ್ಣಾನಂದಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಮಠದ ಟ್ರಸ್ಟ್ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ ಜಲ ರಥೋತ್ಸವಕ್ಕೆ ಚಾಲನೆ ನೀಡಿದರು. ಉಪ ಚೇರ್ಮನ್ ಮಂಜುನಾಥ ಮುನವಳ್ಳಿ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿಗಳಾದ ಉದಯಕುಮಾರ ನಾಯ್ಕ, ಚನ್ನವೀರ ಮುಂಗುರವಾಡಿ, ರಮೇಶ ಬೆಳಗಾವಿ, ಶಾಮಾನಂದ ಪೂಜೇರಿ, ಬಾಳು ಮಗಜಿಕೊಂಡಿ, ವಿ.ವಿ.ಮಲ್ಲಾಪುರ, ಡಾ.ಗೋವಿಂದ ಮಣ್ಣೂರ, ಗೀತಾ ಕಲಬುರ್ಗಿ, ಕೆ.ಎಲ್.ಪಾಟೀಲ, ವಿ.ಡಿ.ಕಾಮರಡ್ಡಿ, ಸಿದ್ದನಗೌಡ ಪಾಟೀಲ, ಅಂದಾನಪ್ಪ ಚಾಕಲಬ್ಬಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.