ADVERTISEMENT

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ನಿರ್ಲಕ್ಷ್ಯ ಸರಿಯಲ್ಲ: ಸಿದ್ದು ಸವದಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 9:14 IST
Last Updated 18 ಆಗಸ್ಟ್ 2020, 9:14 IST
ಸಿದ್ದು ಸವದಿ
ಸಿದ್ದು ಸವದಿ   

ಹುಬ್ಬಳ್ಳಿ: ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಆರ್ಥಿಕ ಸಂಕಷ್ಟದಲ್ಲಿದೆ. ಅದನ್ನು ಸಂಕಷ್ಟದಿಂದ ಹೊರತರುವ ಕೆಲಸಕ್ಕೆ ಆದ್ಯತೆ ನೀಡಲಾಗುವುದು ಎಂದು ನಿಗಮದ ನೂತನ ಅಧ್ಯಕ್ಷ ಸಿದ್ದು ಸವದಿ ಹೇಳಿದರು.

ಮಂಗಳವಾರ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ನಿಗಮವು ₹110 ಕೋಟಿ ಸಾಲದಲ್ಲಿದೆ. ಪ್ರತಿ ವರ್ಷ ₹9 ಕೋಟಿ ಬಡ್ಡಿ ಪಾವತಿಸುತ್ತಿದ್ದೇವೆ. ಇದೇ ರೀತಿ ಆದರೆ, ನಿಗಮ ಉದ್ಧಾರವಾಗುವುದಿಲ್ಲ. ಆರ್ಥಿಕ ನೆರವು ನೀಡುವ ಮೂಲಕ ನೇಕಾರರ ರಕ್ಷಣೆಗೆ ಬರುವಂತೆ ಸರ್ಕಾರವನ್ನು ಕೋರಲಾಗುವುದು ಎಂದರು.

ನಿಗಮದಡಿ 9 ಸಾವಿರ ನೇಕಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ, 5,600 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಪವರ್‌ ಲೂಮ್‌ ಬಂದ ಮೇಲೆ ಕೈ ಮಗ್ಗ ಬಟ್ಟೆಗೆ ಬೇಡಿಕೆ ಕಡಿಮೆಯಾಗಿದೆ. ನೇಕಾರರಿಗೆ ₹150 ರಿಂದ 200 ಕೂಲಿ ದೊರೆಯುತ್ತಿದೆ. ಕೂಲಿ ಹೆಚ್ಚಿಸಬೇಕಿದೆ ಎಂದು ಹೇಳಿದರು.

ADVERTISEMENT

ಶಿಕ್ಷಣ ಇಲಾಖೆಯ ವಿದ್ಯಾ ವಿಕಾಸ ಯೋಜನೆಯ ನಿಗಮದ ಆದಾಯದ ಮೂಲ. ಇಲಾಖೆಯು ಸರಿಯಾಗ ಸಹಕಾರ ನೀಡುತ್ತಿಲ್ಲ. ₹20 ಕೋಟಿ ಬಾಕಿ ಉಳಿಸಿಕೊಂಡಿದೆ. ಅದನ್ನು ಪಡೆಯಲು ಹತ್ತಾರು ಬಾರಿ ಪತ್ರ ಬರೆಯಬೇಕಾಗಿದೆ. ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಶಿಕ್ಷಣ ಇಲಾಖೆಯ ಜತೆಗಿನ ಮೂರು ವರ್ಷಗಳ ಒಪ್ಪಂದ ಪೂರ್ಣಗೊಂಡಿದೆ. ಮುಂದಿನ ಐದು ವರ್ಷಗಳಿಗೆ ಒಪ್ಪಂದಕ್ಕೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ.

ಜಿ.ಐ. ಟ್ಯಾಗ್‌ ಹೊಂದಿರುವ ಕೈಮಗ್ಗ ಉತ್ಪನ್ನಗಳಿಗೆ ಪ್ರಿಯದರ್ಶಿನಿ ಬ್ರಾಂಡ್‌ ಮೂಲಕ ಮಾರುಕಟ್ಟೆ ಒದಗಿಸಲಾಗುವುದು. ಐದು ಪ್ರಿಯದರ್ಶಿನಿ ಮಳಿಗೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಅಮೆಜಾನ್‌ ಹಾಗೂ ಪ್ಲಿಪ್‌ಕಾರ್ಟ್‌ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.

171 ಮಂದಿ ಕಾಯಂ ಸಿಬ್ಬಂದಿ, 80 ಮಂದಿ ನಿಯೋಜನೆ ಹಾಗೂ 126 ಮಂದಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ನೇಕಾರರಿಗೆ ವಿಶೇಷ ಮಾಸಿಕ ವೃದ್ಧಾಪ್ಯ ವೇತನ ನೀಡುವುದು. ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ, ನೇಕಾರರಿಗೆ ನೀಡುವ ಪರಿವರ್ತನಾ ದರಗಳ ಮೇಲೆ 2016–17ರಲ್ಲಿ ನೀಡಿದಂತೆ ಶೇ 15 ರಷ್ಟು ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದರು.

ನೇಕಾರರ ಕಾಲೊನಿಗಳಲ್ಲಿ ಮೂಲ ಸೌಕರ್ಯ ಒದಗಿಸುವುದು. ನಿಗಮದಲ್ಲಿ ನೋಂದಾಯಿತ ನೇಕಾರರಿಗೆ ವಿಶೇಷ ಜೀವವಿಮೆ ಸೌಲಭ್ಯ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.