ಸಿರುಗುಪ್ಪ ನಗರದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಹದಗೆಟ್ಟು ಹೋಗಿದ್ದ ರಸ್ತೆಯಲ್ಲಿ ಗುಂಡಿಗಳು ಹೊಂಡಗಳಾಗಿ ನಿರ್ಮಾಣವಾಗಿವೆ
ಸಿರುಗುಪ್ಪ: ನಗರದಲ್ಲಿನ ರಸ್ತೆ ಹಾಳಾಗಿದ್ದು, ವಾಹನ ಸವಾರರ ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ಬೀದರ– ಜೇವರ್ಗಿಯಿಂದ ಚಾಮರಾಜನಗರಕ್ಕೆ ಸಿರುಗುಪ್ಪ ನಗರದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150ಎ ರಸ್ತೆಯು ಶೋಚನೀಯ ಸ್ಥಿತಿಯಲ್ಲಿದ್ದು, ಸಾರ್ವಜನಿಕರು, ವಾಹನ ಸವಾರರು ನಿತ್ಯ ನರಕ ಅನುಭವಿಸುವಂತಾಗಿದೆ.
ನಗರದಲ್ಲಿನ ಹೆದ್ದಾರಿಯು ಸಂರ್ಪೂಣವಾಗಿ ಹಾಳಾಗಿದ್ದು ಸಾಕಷ್ಟು ಗುಂಡಿಗಳು ಬಿದ್ದು, ತಗ್ಗು ದಿನ್ನಿಗಳು ಹೆಚ್ಚಾಗಿದ್ದು, ವಾಹನ ಸವಾರರು ಸರ್ಕಸ್ ಮಾಡುವಂತಾಗಿದೆ. ಮಳೆಗೆ ರಸ್ತೆಯಲ್ಲಿ ಗುಂಡಿಗಳು ಹೊಂಡಗಳಾಗಿ ನಿರ್ಮಾಣವಾಗಿವೆ. ಗುಂಡಿಗಳಿಂದ ಕೂಡಿದ ರಸ್ತೆಗಳು ಮತ್ತು ಕಳಪೆ ನಿರ್ವಹಣೆಯಿಂದಾಗಿ ದೈನಂದಿನ ಜೀವನ, ವ್ಯವಹಾರಗಳು ಮತ್ತು ಸಾರಿಗೆಯ ಮೇಲೆ ಪರಿಣಾಮ ಬೀರುತ್ತದೆ.
ಗುರುವಾರ ಕೆ.ಕೆ.ಆರ್.ಟಿ.ಸಿ ಬಸ್‌ನ ಚಕ್ರ ರಸ್ತೆಯ ಕೆಸರುಗುಂಡಿಯಲ್ಲಿ ಹೂತುಹೋಗಿ ಚಾಲಕ, ನಿರ್ವಾಹಕ, ಪ್ರಯಾಣಿಕರು ಪರದಾಡಿದರು. ಭತ್ತ ತುಂಬಿದ ಟ್ರಾಕ್ಟರ್ ತಗ್ಗು ಗುಂಡಿಯಲ್ಲಿ ಸಿಲುಕಿದ್ದು ಕ್ರೇನ್ ಸಹಾಯದಿಂದ ತೆರವುಗೊಳಿಸಿದರು. ನೀರಿನ ಟ್ಯಾಂಕ್ ಮತ್ತು ಐಸ್ ಕ್ರಿಂ ವಾಹನ ರಸ್ತೆ ಮೇಲೆ ಉಳುರುಳಿದ್ದು ಟ್ರಾಫಿಕ್ ಕಿರಿಕಿರಿಯನ್ನು ಪ್ರಯಾಣಿಕರು ಅನುಭವಿಸಿದರು. ಸಾರ್ವಜನಿಕರ ಸಹಾಯದಿಂದ ತೆರವುಗೊಳಿಸಲಾಯಿತು. ನಾಗರಿಕರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿ ಹತಾಶೆ ವ್ಯಕ್ತಪಡಿಸಿ ರಸ್ತೆ ನಿರ್ಮಾಣ ಕಾರ್ಯವನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.
ರಸ್ತೆ ಅಭಿವೃದ್ಧಿಗೆ ನಾಗರಿಕರು ಹಲವು ಬಾರಿ ಮನವಿ ಮಾಡಿದ್ದರೂ ಸ್ಪಂದಿಸದ ಕಾರಣ ಗುಂಡಿಗಳು ಬಾಯ್ದೆರೆದು ಕುಳಿತಿವೆ. ನಿರಂತರ ಮಳೆಗೆ ಡಾಂಬರು ಸಂಪೂರ್ಣ ಕಿತ್ತುಹೋಗಿದ್ದು ಮಣ್ಣಿನ ರಸ್ತೆಯಾಗಿ ಪರಿವರ್ತನೆಯಾಗಿದೆ. ಹೆದ್ದಾರಿಯು ದುರಸ್ತಿಗಾಗಿ ಕಾದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಇಲಾಖೆಯು ರಸ್ತೆಯಲ್ಲಿನ ಗುಂಡಿ ಮುಚ್ಚುವ ಕೆಲಸ ಮಾಡಬೇಕು ಹಾಗೂ ರಸ್ತೆ ಅಗಲಿಕರಣ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.