ಹುಬ್ಬಳ್ಳಿ: ‘ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡವು ಕಾಂಗ್ರೆಸ್‌ನ ಏಜೆಂಟ್ ರೀತಿಯಲ್ಲಿ ಕೆಲಸ ಮಾಡುತ್ತಿದೆ’ ಎಂದು ಸಂಸದ ಪ್ರಲ್ಹಾದ ಜೋಶಿ ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಮುಖಂಡರಾಗಿರುವ ದೇವರಾಜೇಗೌಡ ಅವರು ಹೆಚ್ಚಿನ ತನಿಖೆಯಾಗಲಿ, ಸತ್ಯಾಂಶ ಹೊರಬರಲಿ ಎಂದು ಒತ್ತಾಯಿಸಿದ್ದರು. ಇದನ್ನು ಸಹಿಸದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಒತ್ತಡ ಹೇರಿ, ದೇವರಾಜೇಗೌಡ ಅವರನ್ನು ಬಂಧಿಸಿದ್ದಾರೆ. ಡಿಸಿಎಂ ಹಾಗೂ ಸಿಎಂ ಇಬ್ಬರಿಗೂ ನ್ಯಾಯ ಸಮ್ಮತ ತನಿಖೆಯಾಗುವುದು ಬೇಕಾಗಿಲ್ಲ’ ಎಂದು ಆರೋಪಿಸಿದರು.
‘ದೇವರಾಜೇಗೌಡ ಅವರ ಬಂಧನ ಮಾಡಿರುವುದರ ಹಿಂದೆ ಸ್ವಾರ್ಥ ರಾಜಕಾರಣ ಹಾಗೂ ಪಕ್ಷ ರಾಜಕಾರಣ ಇರುವುದು ಸ್ಪಷ್ಟವಾಗಿದೆ. ಡಿ.ಕೆ. ಶಿವಕುಮಾರ್ ಪಾತ್ರದ ಬಗ್ಗೆ ಸಾಕ್ಷಿ ಹೇಳಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ. ನಾನು ಇದನ್ನು ಖಂಡಿಸುತ್ತೇನೆ’ ಎಂದರು.
‘ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಷಡ್ಯಂತ್ರ ಇದೆ. ಎಲ್ಲಿ ಡಿ.ಕೆ. ಶಿವಕುಮಾರ್ ಸಿಕ್ಕಿ ಹಾಕಿಕೊಳ್ತಾರೋ ಅನ್ನೋ ಕಾರಣಕ್ಕೆ ಬಂಧನವಾಗಿದೆ. ಯಾರನ್ನೋ ರಕ್ಷಣೆ ಮಾಡೋದು, ಒಂದು ಪಕ್ಷ ಅಥವಾ ಒಂದು ಕುಟುಂಬ ಮುಗಿಸುವ ಹುನ್ನಾರ ಇದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.