ADVERTISEMENT

‘ಸ್ಮಾರ್ಟ್‌ ಹೆಲ್ತ್‌ ಕೇರ್’ ಯೋಜನೆಯಲ್ಲಿ ಅವ್ಯವಹಾರ: ದಾಖಲೆ ನೀಡದ ಅಧಿಕಾರಿಗಳು

ಸತೀಶ ಬಿ.
Published 28 ಏಪ್ರಿಲ್ 2025, 5:20 IST
Last Updated 28 ಏಪ್ರಿಲ್ 2025, 5:20 IST
ನಿರುಪಯುಕ್ತವಾಗಿರುವ ಸ್ಮಾರ್ಟ್‌ ಹೆಲ್ತ್‌ಕೇರ್ ಯಂತ್ರ
ನಿರುಪಯುಕ್ತವಾಗಿರುವ ಸ್ಮಾರ್ಟ್‌ ಹೆಲ್ತ್‌ಕೇರ್ ಯಂತ್ರ   

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ‘ಸ್ಮಾರ್ಟ್‌ ಹೆಲ್ತ್‌ ಕೇರ್’ ಯೋಜನೆಯ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಚಿಸಲಾಗಿದ್ದ ಸದನ ಸಮಿತಿಯು ಈವರೆಗೆ ವರದಿ ಸಲ್ಲಿಸಿಲ್ಲ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಚನೆಗೊಂಡ ಸದನ ಸಮಿತಿಗೆ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಸಂಸ್ಥೆ ಅಧಿಕಾರಿಗಳು ಅಗತ್ಯ ದಾಖಲೆ, ಮಾಹಿತಿ ಒದಗಿಸಿಲ್ಲ.

ಸ್ಮಾರ್ಟ್‌ಸಿಟಿ ಯೋಜನೆಯಡಿ ₹3.26 ಕೋಟಿ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಿದರೂ ನಿರೀಕ್ಷಿತ ಮಟ್ಟದಲ್ಲಿ ನಿರ್ವಹಣೆ ಆಗಲಿಲ್ಲ. ಆದರೂ ಟೆಕ್ಲಾನ್ ಎಂಬ ಕಂಪನಿಗೆ 2019ರಿಂದ ಪ್ರತಿ ವರ್ಷ ₹15 ಲಕ್ಷ ಪಾವತಿಸಲಾಗಿದೆ. ಈ ಯೋಜನೆಯಡಿ ಎಷ್ಟು ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ ಎಂಬ ಬಗ್ಗೆ ಅಧಿಕಾರಿಗಳ ಬಳಿ ಸ್ಪಷ್ಟ ಮಾಹಿತಿ ಇಲ್ಲ.

ಎಲೆಕ್ಟ್ರಾನಿಕ್‌ ಮೆಡಿಕಲ್ ರೆಕಾರ್ಡ್‌ (ಇಎಂಆರ್‌), ವರ್ಚ್ಯುವಲ್ ಹೆಲ್ತ್‌ಕೇರ್‌, ಸ್ಮಾರ್ಟ್ ಡಯಾಗ್ನಾಸ್ಟಿಕ್ಸ್ ಸಿಸ್ಟಮ್‌, ಔಷಧ ವಿತರಣಾ ಯಂತ್ರ, ರೋಗಿಯ ವಿವರ ಪಡೆಯಲು ಬಾರ್‌ಕೋಡ್ ಸ್ಕ್ಯಾನ್ ವ್ಯವಸ್ಥೆಯನ್ನು ಈ ಯೋಜನೆ ಹೊಂದಿದೆ. ಸದನ ಸಮಿತಿ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಯೋಜನೆ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದು ಬೆಳಕಿಗೆ ಬಂದಿತ್ತು.

ADVERTISEMENT

ಯೋಜನೆಯ ಅನುಷ್ಠಾನಕ್ಕೆ ಶೇ 70ರಷ್ಟು (₹2.6 ಕೋಟಿ) ಹಣವನ್ನು ಕೆಪೆಕ್ಸ್‌ಗೆ ನೀಡಲಾಗಿದೆ. ಉಳಿದ ಶೇ 30ರಷ್ಟು (₹78 ಲಕ್ಷ) ಹಣವನ್ನು ಕಾರ್ಯಾಚರಣೆ ಮತ್ತು ನಿರ್ವಹಣೆಗೆ (ಒ ಆ್ಯಂಡ್‌ ಎಂ) ಮೀಸಲಿಡಲಾಗಿದೆ.

ಸ್ಮಾರ್ಟ್‌ ಸಿಟಿ ಸಂಸ್ಥೆಯಿಂದ ಟೆಂಡರ್ ಪಡೆದಿರುವ ಸಂಸ್ಥೆಗೆ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಈಗಾಗಲೇ ₹70 ಲಕ್ಷ ನೀಡಲಾಗಿದೆ. ಅದರ ಜತೆಗೆ ನಿರ್ವಹಣೆಗೆ ಪಾಲಿಕೆ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿದ್ದು, ಐದು ಜನ ಸಿಬ್ಬಂದಿಗೆ ಪ್ರತಿ ತಿಂಗಳು ಪಾಲಿಕೆಯಿಂದ ಹಣ ಪಾವತಿಸಲಾಗಿದೆ ಎಂಬುದು ಸದನ ಸಮಿತಿಯ ತನಿಖೆಯಿಂದ ಬಹಿರಂಗವಾಗಿದೆ.

ಮೂಲೆ ಸೇರಿದ ಉಪಕರಣ

‘ಟೆಂಡರ್‌ ನಿಯಮದ ಪ್ರಕಾರ, ಐದು ವರ್ಷ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಟೆಂಡರ್‌ ಪಡೆದ ಕಂಪನಿಯೇ ಮಾಡಬೇಕಿತ್ತು. ಪಾಲಿಕೆಯಿಂದ ವೇತನ ನೀಡಲು ಅವಕಾಶ ಇಲ್ಲ. ಯೋಜನೆ ಅನುಷ್ಠಾನವಾದಾಗಿನಿಂದ ಯಾವ ವರ್ಷ ಪಾಲಿಕೆಯಿಂದ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿದೆ, ಎಷ್ಟು ಹಣ ಪಾವತಿಸಲಾಗಿದೆ ಎಂಬ ಬಗ್ಗೆ ಮಾಹಿತಿ ಒದಗಿಸುವಂತೆ ಕೇಳಲಾಗಿತ್ತು. ಅಧಿಕಾರಿಗಳು ಮಾಹಿತಿ ನೀಡಿಲ್ಲ’ ಎಂದು ಸದನ ಸಮಿತಿ ಸದಸ್ಯ ಈರೇಶ ಅಂಚಟಗೇರಿ ಹೇಳಿದರು.

‘ಹೊರರೋಗಿ, ಒಳರೋಗಿ ನೋಂದಣಿಗೆ ಕ್ಯುಆರ್‌ ಕೋಡ್‌ ಸ್ಕ್ಯಾನ್ ಮಾಡುವ ವ್ಯವಸ್ಥೆ ಇದೆ. ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಔಷಧ ವಿತರಣೆ ಯಂತ್ರಕ್ಕೆ ಫ್ರೀಜರ್ ಇರಬೇಕೆ, ಇಲ್ಲವೇ ಎಂಬ ಬಗ್ಗೆ ಸ್ಪಷ್ಟವಾಗಿ ಅಧಿಕಾರಿಗಳು ಹೇಳುತ್ತಿಲ್ಲ. ಈ ಯೋಜನೆ ಸರ್ಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಉಪಕರಣಗಳೆಲ್ಲವೂ ಮೂಲೆಗೆ ಸೇರಿವೆ’ ಎಂದರು.

ತನಿಖೆ ನಡೆಸಿ ಆದಷ್ಟು ಬೇಗ ವರದಿ ನೀಡಲು ಸದನ ಸಮಿತಿಗೆ ಸೂಚಿಸಲಾಗಿತ್ತು. ವರದಿ ಸಲ್ಲಿಸಿದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು
ರಾಮಪ್ಪ ಬಡಿಗೇರ ಮೇಯರ್‌ ಹು–ಧಾ ಮಹಾನಗರ ಪಾಲಿಕೆ
ಯೋಜನೆಗೆ ಸಂಬಂಧಿಸಿದಂತೆ ಸದನ ಸಮಿತಿ ಕೇಳಿದ ಅಗತ್ಯ ದಾಖಲೆ ನೀಡುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ
ರುದ್ರೇಶ ಘಾಳಿ ಆಯುಕ್ತ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ
ಈಗಾಗಲೇ ಎರಡು ಬಾರಿ ಸಭೆ ನಡೆಸಲಾಗಿದ್ದು ಅಧಿಕಾರಿಗಳಿಂದ ದಾಖಲೆ ಪಡೆದು ಶೀಘ್ರ ಮೇಯರ್‌ಗೆ ಅಂತಿಮ ವರದಿ ಸಲ್ಲಿಸಲಾಗುವುದು
ವೀರಣ್ಣ ಸವಡಿ ಅಧ್ಯಕ್ಷ ಸದನ ಸಮಿತಿ
ಅಧಿಕಾರಿಗಳು ಮಾಹಿತಿ ಕೊಡದಿರುವುದನ್ನು ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು. ಸ್ಮಾರ್ಟ್‌ ಸಿಟಿ ಪಾಲಿಕೆ ಅಧಿಕಾರಿಗಳು ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ಮೇಯರ್‌ಗೆ ವರದಿ ಸಲ್ಲಿಸಲಾಗುವುದು
ಈರೇಶ ಅಂಚಟಗೇರಿ ಸದನ ಸಮಿತಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.