ADVERTISEMENT

ಸಾಮಾಜಿಕ ಜಾಲತಾಣ ದುರ್ಬಳಕೆ:28 ಪ್ರಕರಣ ದಾಖಲು, 700ಕ್ಕೂ ಹೆಚ್ಚು ಖಾತೆ ಮೇಲೆ ನಿಗಾ

​ಪ್ರಜಾವಾಣಿ ವಾರ್ತೆ
Published 14 ಮೇ 2025, 15:08 IST
Last Updated 14 ಮೇ 2025, 15:08 IST
ಎನ್.ಶಶಿಕುಮಾರ್
ಎನ್.ಶಶಿಕುಮಾರ್   

ಹುಬ್ಬಳ್ಳಿ: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವ, ಸಾರ್ವಜನಿಕರಿಗೆ ಭಯ ಹುಟ್ಟಿಸುವ, ಗಲಭೆಗೆ ಕಾರಣವಾಗುವ, ಕೋಮು ಪ್ರಚೋದನೆ ನೀಡುವ ಹೀಗೆ ವಿವಿಧ ರೀತಿಯಲ್ಲಿ ಜಾಲತಾಣಗಳ ನಿಯಮಾವಳಿ ಉಲ್ಲಂಘಿಸಿದವರ ವಿರುದ್ಧ ಹುಬ್ಬಳ್ಳಿ–ಧಾರವಾಡ ಮಹಾನಗರ ಪೊಲೀಸರು ವಿವಿಧ ಠಾಣೆಗಳಲ್ಲಿ 28 ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಅವಳಿನಗರದಲ್ಲಿ 16 ಪೊಲೀಸ್‌ ಠಾಣೆಗಳಿದ್ದು, ಪ್ರತಿ ಠಾಣೆಯಲ್ಲೂ ಸಾಮಾಜಿಕ ಜಾಲತಾಣ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ತಲಾ ಇಬ್ಬರು ತಾಂತ್ರಿಕ ಸಿಬ್ಬಂದಿ ಎರಡು ಪಾಳಿಗಳಲ್ಲಿ ಜಾಲತಾಣಗಳ ಮೇಲೆ ನಿಗಾ ಇಡುತ್ತಿದ್ದಾರೆ. ಹದಿನೈದು ದಿನಗಳಿಂದ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಮತ್ತು ಯೂಟ್ಯೂಬ್‌ಗಳ ಖಾತೆಗಳನ್ನು ಪರಿಶೀಲನೆ ನಡೆಸಲಾಗಿತ್ತು. ಅವುಗಳಲ್ಲಿ ನಿಯಮಾವಳಿ ಉಲ್ಲಂಘಿಸಿದ ಕುರಿತು 28 ಪ್ರಕರಣಗಳನ್ನು ದಾಖಲಿಸಿ, 700ಕ್ಕೂ ಖಾತೆಗಳ ಮೇಲೆ ನಿಗಾ ಇಡಲಾಗಿದೆ. 58 ರೌಡಿಗಳನ್ನು‌ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ.

ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌, ‘ಸಮಾಜದ ವಾತಾವರಣ ಹದಗೆಡಿಸಲು ಕೆಲವರು ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂದಿತ್ತು. ಈ ನಿಟ್ಟಿನಲ್ಲಿ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದರು.

ADVERTISEMENT

‘ರೌಡಿಗಳು ಸೇರಿ ಕೆಲವು ಕಿಡಿಗೇಡಿಗಳ ಖಾತೆಗಳಲ್ಲಿ ಕಾನೂನು ಬಾಹಿರ ಪೋಸ್ಟ್‌ಗಳು ಇರುವುದು ಗಮನಕ್ಕೆ ಬಂದಿವೆ. ಧಾರ್ಮಿಕ ಭಾವನೆಗೆ ಕುಂದು ಉಂಟು ಮಾಡುವುದು, ಕೆಲವು ಘಟನೆಗಳಿಗೆ ಜಾತಿ ಬಣ್ಣ ಹಚ್ಚುವುದು, ಗಲಭೆಗೆ ಪ್ರಚೋದನೆ ನೀಡುವುದು, ಗಲಭೆಗೆ ಕಾರಣವಾಗುವ ವೈಭವೀಕರಿಸಿದ ಬರಹಗಳು, ಸಂಚಾರ ನಿಯಮ ಪಾಲಿಸದೆ ವಾಹನ ಚಲಾಯಿಸಿದ ವಿಡಿಯೊಗಳು, ತಲ್ವಾರ್‌ ಹಿಡಿದು ಜನ್ಮ ದಿನ ಆಚರಿಸಿಕೊಂಡಿರುವುದು, ಕೋಮು ಪ್ರಚೋದಕ ವಿಡಿಯೊಗಳನ್ನು ಸಹ ಪೋಸ್ಟ್‌ ಮಾಡಿರುವುದು ಕಂಡು ಬಂದಿವೆ. ಸಾಮಾಜಿಕ ಜಾಲತಾಣಗಳ ಉಲ್ಲಂಘನೆಯ ಕಾಯ್ದೆಯಡಿ ಯಾವ ಸೆಕ್ಷನ್‌ ದಾಖಲಿಸಿಕೊಳ್ಳಬೇಕು ಎನ್ನುವ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಿ, ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ವಿವರಿಸಿದರು.

‘ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ವಿಡಿಯೊ, ಚಿತ್ರ ಹಾಗೂ ಬರಹಗಳಿಗೆ ಕೆಲವರು ಪ್ರಚೋದನಕಾರಿಯಾಗಿ ಅಭಿಪ್ರಾಯ ನೀಡಿದ್ದಾರೆ. ಕೆಲವು ರೌಡಿಗಳು ತಮ್ಮ ಬೆಂಬಲಿಗರ ಖಾತೆಯಿಂದ  ಪೋಸ್ಟ್‌ ಮಾಡಿಸಿದ್ದೂ ಅಲ್ಲದೆ, ಪರಿಚಯದವರಿಂದ ಅಭಿಪ್ರಾಯಗಳನ್ನು ಅಲ್ಲಿ ವ್ಯಕ್ತಪಡಿಸುವಂತೆ ಮಾಡಿದ್ದಾರೆ. ಇವೆಲ್ಲವನ್ನೂ ಕೂಲಂಕಷವಾಗಿ ಪರಿಶೀಲನೆ ನಡೆಸಲಾಗುತ್ತಿದ್ದು, ಅವರನ್ನು ಸಹ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುವುದು. ಅಗತ್ಯವಿದ್ದರೆ ಬಂಧಿಸಿ ಕಾನೂನು ಪ್ರಕ್ರಿಯೆಗೆ ಒಳಪಡಿಸಲಾಗುವುದು.  ಕಾನೂನು ಬಾಹಿರ ಸಂದೇಶ ಪೋಸ್ಟ್‌ ಮಾಡಿರುವ ಖಾತೆಗಳ ದಾಖಲೆಗಳನ್ನು ಸಂಗ್ರಹಿಸಿದ್ದು, ತನಿಖೆ ನಡೆಸಿ ದೋಷಾರೋಪ ಪಟ್ಟಿ ಕೋರ್ಟ್‌ಗೆ ಸಲ್ಲಿಸಲಾಗುವುದು’ ಎಂದು ಕಮಿಷನರ್‌ ಶಶಿಕುಮಾರ್‌ ತಿಳಿಸಿದರು.

‘ರೌಡಿ ಪಟ್ಟಿ; ಹೆಸರು ತೆಗೆಯಲು ನಿರ್ಧಾರ

‘ವಿವಿಧ ಪೊಲೀಸ್‌ ಠಾಣೆಗಳ ರೌಡಿ ಪಟ್ಟಿಯಲ್ಲಿ ಒಟ್ಟು 1862 ಮಂದಿಯ ಹೆಸರಿದೆ. ಇವರ ಪೈಕಿ 1701 ರೌಡಿಗಳು ನಿಗಾದಲ್ಲಿದ್ದಾರೆ. 250 ರಿಂದ 300 ರೌಡಿಗಳ ಹೆಸರನ್ನು ಪಟ್ಟಿಯಿಂದ ಕೈ ಬಿಡಲು ನಿರ್ಧರಿಸಲಾಗಿದೆ. ಎರಡು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು’ ಎಂದು ಕಮಿಷನರ್‌ ಎನ್‌. ಶಶಿಕುಮಾರ್‌ ತಿಳಿಸಿದರು. ‌‘ಒಂದೊಂದು ಪ್ರಕರಣದಲ್ಲಿ ಇದ್ದವರು ಸಹ ರೌಡಿ ಪಟ್ಟಿಯಲ್ಲಿದ್ದು 10–15 ವರ್ಷಗಳಿಂದ ಅವರು ಯಾವುದೇ ಪ್ರಕರಣದಲ್ಲಿ ಪಾಲ್ಗೊಂಡಿಲ್ಲ. ಕೆಲವರಿಗೆ 60 ವರ್ಷ ವಯಸ್ಸಾಗಿದೆ. ಇನ್ನು ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ರೌಡಿ ಪಟ್ಟಿಯಿಂದ ಹೆಸರು ತೆಗೆಯುವಂತೆ 300 ಮಂದಿಯ ಪಟ್ಟಿ ಸಿದ್ಧವಾಗಿದೆ. ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು. ‘ಕೆಲವು ರೌಡಿಗಳು ಮೃತಪಟ್ಟಿದ್ದರೆ ಇನ್ನು ಕೆಲವರು ತಲೆಮರೆಸಿಕೊಂಡಿದ್ದಾರೆ. ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ 1158 ರೌಡಿಗಳಿಂದ ಬಾಂಡ್‌ ಬರೆಸಿಕೊಂಡಿದ್ದೇವೆ. 52 ಮಂದಿಯನ್ನು ಗಡಿಪಾರು ಮಾಡಿದ್ದೇವೆ. ಸಮಾಜಕ್ಕೆ ಕಂಟಕವಾಗಿರುವ ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.