ADVERTISEMENT

ಧಾರವಾಡ: ರೈತರಿಗೆ ಸಾಲ ಸೌಲಭ್ಯ ಪಡೆಯಲು ಅಡ್ಡಿಯಾದ ತಂತ್ರಾಂಶ ದೋಷ

ಆರ್ಥಿಕ ಸಂಕಷ್ಟ: ಔಷಧ, ಗೊಬ್ಬರ ಖರೀದಿಸಲಾಗದೆ ಕೃಷಿ ಕಾರ್ಯಕ್ಕೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 5:37 IST
Last Updated 11 ಜುಲೈ 2025, 5:37 IST
   

ಧಾರವಾಡ: ಕೇಂದ್ರ ಸರ್ಕಾರದ ಕಿಸಾನ್ ಕ್ರೇಡಿಟ್‌ ಕಾರ್ಡ್‌(ಕೆಸಿಸಿ) ಯೋಜನೆ ಸೌಲಭ್ಯ ಪಡೆಯಲು ರೈತರಿಗೆ ಸಮಸ್ಯೆಯಾಗುತ್ತಿದೆ. ತಂತ್ರಾಂಶ ದೋಷದಿಂದ ರೈತರಿಗೆ ಸಾಲದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ.

ಕೂಡ ಒಂದು. ಇದರಿಂದ ಕಡಿಮೆ ಬಡ್ಡಿ ದರದಲ್ಲಿ ರೈತರು ಸಾಲ ಪಡೆದು ತಮ್ಮ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಇದೀಗ ಮುಂಗಾರು ಬಿತ್ತನೆ ಅಂತ್ಯಗೊಂಡಿದೆ. ರೈತರಿಗೆ ಬೆಳೆಗಳ ಪೋಷಣೆಗಾಗಿ ಹಣದ ಅವಶ್ಯಕತೆ ಇದೆ. ಇದೇ ಸಂದರ್ಭದಲ್ಲಿ ಹೆಚ್ಚುವರಿ ಸಾಲ ಪಡೆಯಲು ಹೋದ ರೈತನಿಗೆ ತಂತ್ರಾಂಶ ದೋಷವು ಅಡ್ಡಿಪಡಿಸುತ್ತಿದೆ.

ADVERTISEMENT

ರೈತರು ₹3 ಲಕ್ಷಕ್ಕಿಂತ ಅಧಿಕ ಸಾಲ ಪಡೆಯಲು ಅಡಮಾನ ಪತ್ರ ಅವಶ್ಯವಿದೆ. ಭಾರತದ ಸೆಕ್ಯುರಿಟೈಸೇಶನ್ ಆಸ್ತಿ ಪುನರ್ ನಿರ್ಮಾಣ ಮತ್ತು ಭದ್ರತಾ ಹಿತಾಸಕ್ತಿಯ ಕೇಂದ್ರ ನೋಂದಣಿ (CERSAI) ತತ್ರಾಂಶದಲ್ಲಿ ಅಡಮಾನ ಪತ್ರ ನೋಂದಣಿಗೆ ಅನುಮತಿ ಪಡೆಯಬೇಕಾಗುತ್ತದೆ. ಇದೀಗ ತತ್ರಾಂಶ ದೋಷದಿಂದಾಗಿ ನೋಂದಣಿ ಪ್ರಕ್ರಿಯೆಯಲ್ಲಿ ತೀವ್ರ ಹಿನ್ನಡೆಯಾಗುತ್ತಿದೆ.

ಮುಂಗಾರು ಬಿತ್ತನೆಯನ್ನು ಪೂರ್ಣಗೊಳಿಸಲಾಗಿದೆ. ಅಧಿಕ ಮಳೆಯಿಂದಾಗಿ ಫಸಲಿಗೆ ಕೀಟಗಳ ಕಾಟವು ಅಧಿಕವಾಗಿದೆ. ಹೀಗಿರುವಾಗ ಫಸಲಿಗೆ ಔಷಧಿ, ಗೊಬ್ಬರ, ವಿತರಿಸಲು ಹಣದ ಅವಶ್ಯಕತೆ ಇದೆ. ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಹೋದರೇ ಪದೇ ಪದೇ ಸರ್ವರ್‌ ಸಮಸ್ಯೆಯಿಂದಾಗಿ ವಿಳಂಬವಾಗುತ್ತಿದೆ. ಇದರಿಂದಾಗಿ ಹಣವಿಲ್ಲದೇ ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ರೈತ ಮಹಾರುದ್ರಪ್ಪ ಬೇಟಗೇರಿ ತಮ್ಮ ಕಷ್ಟವನ್ನು ತಿಳಿಸಿದರು.

ಸಾಲದ ವಿವರ: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರಿಗೆ ಶೇ 7ರಷ್ಟು ಬಡ್ಡಿ ದರದಲ್ಲಿ ₹3 ಲಕ್ಷದವರೆಗೆ ಸಾಲ ವಿತರಿಸಲಾಗುತ್ತದೆ. ನಿಗದಿತ ಅವಧಿಯೊಳಗೆ ಬಡ್ಡಿ ಸಮೇತ ಸಂಪೂರ್ಣ ಸಾಲ ಹಿಂಪಡೆದು ನಂತರ ರೈತರ ಸಾಲ ಖಾತೆಗೆ ಶೇ 3ರಷ್ಟು ಬಡ್ಡಿಯನ್ನು ಸಹಾಯಧನದ ರೂಪದಲ್ಲಿ ಹಿಂದಿರುಗಿಸಲಾಗುತ್ತದೆ. ಇನ್ನುಳಿದ ಶೇ 4ರಷ್ಟು ಬಡ್ಡಿಯನ್ನು ರೈತರು ಭರಿಸಬೇಕು. ₹3 ಲಕ್ಷ ವರೆಗಿನ ಸಾಲಕ್ಕೆ ಮಾತ್ರ ಶೇ 7ರಷ್ಟು ಬಡ್ಡಿ ದರವಿದ್ದು, ಹೆಚ್ಚಿನ ಸಾಲಕ್ಕೆ ಆಯಾ ಬ್ಯಾಂಕ್‌ಗಳ ನಿಯಮಾನುಸಾರ ಬಡ್ಡಿದರ ವಿಧಿಸಲಾಗುವುದು. ಹೆಚ್ಚಿನ ಸಾಲಕ್ಕಾಗಿ ರೈತರು ಉಪ ನೋಂದಣಿ ಕಚೇರಿಯಲ್ಲಿ ಅನುಮತಿ (ಅಡಮಾನ ಪತ್ರ) ಪಡೆಯಬೇಕು.

‘ರೈತರು ಹೆಚ್ಚುವರಿ ಸಾಲ ಪಡೆಯಲು ಅಡಮಾನ ಪತ್ರ ಅವಶ್ಯಕ. ಆದರೆ, ತಾಂತ್ರಿಕ ಸಮಸ್ಯೆಯಿಂದ ಸಮಯ ವ್ಯರ್ಥವಾಗುತ್ತಿದೆ. ಆದರೆ, ಈ ತಂತ್ರಾಂಶವು ಬ್ಯಾಂಕ್ ವ್ಯಾಪ್ತಿಗೆ ಸಂಬಂಧ ಪಡುವುದಿಲ್ಲ. ನಮ್ಮಿಂದಾ ರೈತರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ’ ಎಂದು ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಪ್ರಭುದೇವ ಎನ್‌.ಜಿ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.