ಹುಬ್ಬಳ್ಳಿ: ‘ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವ ಮೂಲಕ ಮೇಯರ್ ಪಟ್ಟ ನಮ್ಮದಾಗಿಸಿಕೊಳ್ಳಬೇಕು. ಆ ಮೂಲಕ ಸೋನಿಯಾ ಗಾಂಧಿಯವರಿಗೆ ಭರ್ಜರಿ ಉಡುಗೊರೆ ನೀಡಬೇಕು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಪರಿಶಿಷ್ಟ ವಿಭಾಗದ ಅಧ್ಯಕ್ಷ ಎಫ್.ಎಚ್.ಜಕ್ಕಪ್ಪನವರ ಹೇಳಿದರು.
ಇಲ್ಲಿನ ಕಾರವಾರ ರಸ್ತೆಯ ಮಹಾನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹಲವು ವರ್ಷಗಳಿಂದ ಪಾಲಿಕೆಯಲ್ಲಿ ನಾವು ಅಧಿಕಾರ ಕಳೆದುಕೊಂಡಿದ್ದೇವೆ. ಈ ಬಾರಿ ನಾವು ಅಧಿಕಾರ ಹಿಡಿಯಲೇಬೇಕು. ಬಿಜೆಪಿ ದುರಾಡಳಿತದಿಂದ ಅವಳಿ ನಗರದ ಅಭಿವೃದ್ಧಿ ಕುಂಠಿತಗೊಂಡಿದೆ’ ಎಂದರು.
"ಸಂಪೂರ್ಣ ನೆಲಕಚ್ಚಿದ್ದ ಕಾಂಗ್ರೆಸ್ ಪಕ್ಷವನ್ನು ಪುನಶ್ಚೇತನಗೊಳಿಸಿದ ಕೀರ್ತಿ ಸೋನಿಯಾ ಅವರಿಗೆ ಸಲ್ಲಬೇಕು. ಸತತ ಪ್ರಯತ್ನದಿಂದಾಗಿ 17 ರಾಜ್ಯಗಳಲ್ಲಿ ಅಧಿಕಾರ ಕೊಡಿಸಿದರಲ್ಲದೇ, ಕೇಂದ್ರದಲ್ಲಿಯೂ ಎರಡು ಬಾರಿ ಅಧಿಕಾರವನ್ನು ತಂದು ಕೊಟ್ಟರು. ಪ್ರಧಾನಿ ಹುದ್ದೆಗೆ ಏರುವ ಎಲ್ಲ ಅರ್ಹತೆಗಳು ಅವರಿಗೆ ಇದ್ದರೂ ಆ ಸ್ಥಾನವನ್ನು ಮನಮೋಹನ್ ಸಿಂಗ್ ಅವರಿಗೆ ಬಿಟ್ಟುಕೊಟ್ಟು ಮಹಾ ತ್ಯಾಗಿಯಾದರು’ ಎಂದು ಶ್ಲಾಘಿಸಿದರು.
‘ಸೋನಿಯಾ ಅವರನ್ನು ಕಾಂಗ್ರೆಸ್‌ನ ವಿಧವೆ ಎನ್ನುವ ಮೂಲಕ ಮೋದಿ ಪ್ರಧಾನಿ ಹುದ್ದೆಗೇ ಕಳಂಕ ತಂದಿದ್ದಾರೆ. ಕೂಡಲೇ ಅವರು ದೇಶದ ಎಲ್ಲ ಮಹಿಳೆಯರ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ಸದಾನಂದ ಡಂಗನವರ, ಕಾಂಗ್ರೆಸ್ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ ಮಾತನಾಡಿದರು.
ಕೆಪಿಸಿಸಿ ಕಿಸಾನ್ ಘಟಕದ ರಾಜ್ಯ ಉಪಾಧ್ಯಕ್ಷ ಶರಣಪ್ಪ ಕೊಟಗಿ (ಮತ್ತಿಕಟ್ಟಿ), ಪಾಲಿಕೆ ಸದಸ್ಯರಾದ ಪ್ರಕಾಶ್ ಕ್ಯಾರಕಟ್ಟಿ, ಮೋಹನ ಹಿರೇಮಠ, ನಾಮನಿರ್ದೇಶಿತ ಸದಸ್ಯ ವಿಜನಗೌಡ ಪಾಟೀಲ, ಮುಖಂಡರಾದ ಬಂಗಾರೇಶ ಹಿರೇಮಠ, ಮಂಜುನಾಥ ಉಪ್ಪಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.