ADVERTISEMENT

ಕೆರೆಗಳ ರಕ್ಷಣೆಗೆ ನಾಗರಿಕರ ‘ಸೋಲ್‌’

ಪ್ರಜಾವಾಣಿ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 4:31 IST
Last Updated 10 ಫೆಬ್ರುವರಿ 2020, 4:31 IST

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡದಲ್ಲಿ ವಿನಾಶದ ಅಂಚಿನಲ್ಲಿರುವ ಕೆರೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಮಾನಮನಸ್ಕರ ತಂಡ ಮುಂದಾಗಿದೆ. ಸಾಮಾಜಿಕ ಕಾರ್ಯಕರ್ತೆ ಒಟಿಲ್ಲೆ ಅನ್ಬನ್‌ಕುಮಾರ್‌ ನೇತೃತ್ವದಲ್ಲಿ ಹುಬ್ಬಳ್ಳಿ–ಧಾರವಾಡದಲ್ಲಿರುವ ಕೆರೆಗಳನ್ನು ರಕ್ಷಿಸಲು ‘ಸೋಲ್‌ (SOUL- ಸೇವ್‌ ಅವರ್‌ ಲೇಕ್‌)’ ಯೋಜನೆಯನ್ನು ಕಾರ್ಯಗತಗೊಳಿಸಲು ಭಾನುವಾರ ನಿರ್ಧರಿಸಲಾಗಿದೆ.

‘ಪ್ರಜಾವಾಣಿ ಮೆಟ್ರೊದಲ್ಲಿ ಪ್ರಕಟವಾಗುತ್ತಿರುವ ‘ನಮ್‌ ಕೆರಿ ಕಥಿ’ ಲೇಖನ ಮಾಲೆ ನಮ್ಮ ಕಣ್ಣು ತೆರೆಸಿದ್ದು, ಕೆರೆಗಳನ್ನು ಉಳಿಸುವ ನಿಟ್ಟಿನಲ್ಲಿ ನಾವು ಕಾರ್ಯಗತವಾಗಲು ನಿರ್ಧರಿಸಿದ್ದೇವೆ. ಹಲವು ಕೆರೆಗಳನ್ನು ಜಿಲ್ಲಾಡಳಿತ ಸೇರಿದಂತೆ ಎಲ್ಲ ಸರ್ಕಾರಿ ಸಂಸ್ಥೆಗಳೂ ನಿರ್ಲಕ್ಷಿಸಿವೆ. ಹೀಗಾಗಿ ಸಮಾನ ಮನಸ್ಕರೆಲ್ಲರೂ ಸೇರಿ ಒಂದು ತಂಡ ರಚಿಸಿಕೊಂಡಿದ್ದೇವೆ. ಕೆರೆಗಳನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇವೆ’ ಎಂದು ಒಟಿಲ್ಲೆ ತಿಳಿಸಿದ್ದಾರೆ.

‘ಈ ಯೋಜನೆಯಲ್ಲಿ ಪ್ರತಿಯೊಂದು ಕೆರೆಗಳಿಗೆ ಸ್ಥಳೀಯ ನಿವಾಸಿಗಳ ಸೇರಿಕೊಂಡು ಗುಂಪು ರಚಿಸಲಾಗುತ್ತದೆ. ನಾಗರಿಕರು ಕೆರೆ ವಾರ್ಡನ್‌ಗಳಾಗಿ ನೋಂದಣಿಯಾಗಲು ಉತ್ತೇಜಿಸಲಾಗುತ್ತದೆ. ಕೆರೆಯ ಸ್ವಚ್ಛತೆ, ರಕ್ಷಣೆ ಬಗ್ಗೆ ಕಾಳಜಿವಹಿಸಿ, ಒಳಚರಂಡಿ ನೀರು ತಡೆಯಲು, ಒಳಹರಿವು, ಹೊರಹರಿವಿಗೆ ಆಗಿರುವ ತಡೆಯನ್ನು ನಿವಾರಿಸಲು ಅಧಿಕಾರಿಗಳಿಗೆ ಒತ್ತಾಯಿಸಲಾಗುತ್ತದೆ’ ಎಂದಿದ್ದಾರೆ.

ADVERTISEMENT

‘ಕೆರೆಗಳ ಅಭಿವೃದ್ಧಿಗೆ ಕಾರ್ಪೊರೇಟ್‌ ಹಾಗೂ ಸಂಘ–ಸಂಸ್ಥೆಗಳಿಗೆ ಮನವಿ ಮಾಡಿಕೊಳ್ಳುವುದು. ಸಾಮಾಜಿಕ ಜಾಲ ತಾಣಗಳ ಮೂಲಕ ಕೆರೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವುದು. ಜಿಲ್ಲಾಡಳಿತ ಹಾಗೂ ಪಾಲಿಕೆ ಕೆರೆಗಳನ್ನು ಸಂರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರ ಗುಂಪುಗಳ ಮೂಲಕ ಒತ್ತಾಯಿಸಲಾಗುತ್ತದೆ’ ಎಂದಿದ್ದಾರೆ.

‘ಧಾರವಾಡದಲ್ಲಿರುವ ಕೆರೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಜಿಲ್ಲಾ ಕೆರೆ ಸಮಿತಿಯನ್ನು ಪುನಾರಚಿಸಿ, ಅದಕ್ಕೆ ಪ್ರತ್ಯೇಕವಾಗಿ ಒಬ್ಬ ಮುಖ್ಯ ಎಂಜಿನಿಯರ್‌ರನ್ನು ನೇಮಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಲು ಸಹಿ ಸಂಗ್ರಹ ಆಂದೋಲನ ನಡೆಸಲಾಗುತ್ತದೆ. ಜೊತೆಗೆ, ಕಾಯ್ದೆಯಂತೆ ಕೆರೆ ವಾರ್ಡನ್‌ ನೇಮಕ ಮಾಡಬೇಕು, ಕೆರೆ ಅಭಿವೃದ್ಧಿಯಲ್ಲಿ ಸಮುದಾಯ ಪಾಲ್ಗೊಳ್ಳುವಿಕೆ ಇರಬೇಕು ಎಂದು ಆಗ್ರಹಿಸುತ್ತೇವೆ’ ಎಂದು ಹೇಳಿದ್ದಾರೆ.

‘ಕೇರಳದ ಕೊಚ್ಚಿಯಲ್ಲಿ ಪರಿಸರಕ್ಕೆ ಮಾರಕವಾದ ಕಟ್ಟಡಗಳ ನೆಲಸಮವನ್ನು ಪ್ರಮುಖ ಉದಾಹರಣೆಯನ್ನಾಗಿ ತೆಗೆದುಕೊಂಡು, ನಮ್ಮ ಜಿಲ್ಲೆಯ ಕೆರೆಗಳನ್ನು ಸಂರಕ್ಷಿಸಬೇಕು ಎಂದು ಜಿಲ್ಲಾಧಿಕಾರಿಯವನ್ನು ಒತ್ತಾಯಿಸುತ್ತೇವೆ’ ಎಂದು ಒಟಿಲ್ಲೆ ತಿಳಿಸಿದ್ದಾರೆ.

ಕೆರೆ ರಕ್ಷಣೆ ಕಾರ್ಯದಲ್ಲಿ ಭಾಗವಹಿಸಲು ಇಚ್ಛಿಸುವವರು ಮೊ:9845701164 ಸಂಪರ್ಕಿಸಬಹುದು ಎಂದು ಒಟಿಲ್ಲೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.