ADVERTISEMENT

ಹುಬ್ಬಳ್ಳಿ: ರೈಲ್ವೆ ಸಪ್ತಾಹ, ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 3:08 IST
Last Updated 22 ಜನವರಿ 2026, 3:08 IST
ನೈರುತ್ಯ ರೈಲ್ವೆ ಇಲಾಖೆ ಹುಬ್ಬಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಧಕ ಸಿಬ್ಬಂದಿಗೆ ಪ್ರಶಸ್ತಿ ಹಾಗೂ ಪಾರಿತೋಷಕ ನೀಡಿ ಗೌರವಿಸಿತು. ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್ ಹಾಗೂ ಇತರರು ಹಾಜರಿದ್ದರು
ನೈರುತ್ಯ ರೈಲ್ವೆ ಇಲಾಖೆ ಹುಬ್ಬಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಧಕ ಸಿಬ್ಬಂದಿಗೆ ಪ್ರಶಸ್ತಿ ಹಾಗೂ ಪಾರಿತೋಷಕ ನೀಡಿ ಗೌರವಿಸಿತು. ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್ ಹಾಗೂ ಇತರರು ಹಾಜರಿದ್ದರು   

ಹುಬ್ಬಳ್ಳಿ: ಇಲ್ಲಿನ ಗದಗ ರಸ್ತೆಯಲ್ಲಿರುವ ಚಾಲುಕ್ಯ ರೈಲ್ವೆ ಸಭಾಭವನದಲ್ಲಿ ಮಂಗಳವಾರ ನೈಋತ್ಯ ರೈಲ್ವೆ ವಲಯದ ವತಿಯಿಂದ 70ನೇ ರೈಲ್ವೆ ಸಪ್ತಾಹ ಕಾರ್ಯಕ್ರಮ ನಡೆಯಿತು. ಇಲಾಖೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ನೌಕರರು ಹಾಗೂ ಅತ್ಯುತ್ತಮ ಪ್ರದರ್ಶನ ನೀಡಿದ ವಿವಿಧ ವಿಭಾಗಗಳನ್ನು ಗೌರವಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

41 ಸಿಬ್ಬಂದಿಗೆ ‘ವಿಶಿಷ್ಟ ರೈಲ್ ಸೇವಾ ಪುರಸ್ಕಾರ’ ಹಾಗೂ 21 ನೌಕರರಿಗೆ ‘ರೈಲ್ ಸೇವಾ ಪುರಸ್ಕಾರ’ ಹಾಗೂ ಕರ್ತವ್ಯದಲ್ಲಿ ದಕ್ಷತೆ ಮೆರೆದ 31 ನೌಕರರಿಗೆ ‘ಮೆರಿಟ್ ಪ್ರಮಾಣಪತ್ರ’ ನೀಡಿ ಗೌರವಿಸಲಾಯಿತು. 2024-25ನೇ ಸಾಲಿನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ವಿವಿಧ ವಿಭಾಗಗಳಿಗೆ 25 ದಕ್ಷತಾ ಪಾರಿತೋಷಕ ವಿತರಿಸಲಾಯಿತು.

ಪ್ರಮುಖ ನಿಲ್ದಾಣ ವಿಭಾಗದಲ್ಲಿ ಧಾರವಾಡ ಹಾಗೂ ಸಣ್ಣ ನಿಲ್ದಾಣ ವಿಭಾಗದಲ್ಲಿ ಶ್ರವಣಬೆಳಗೊಳ ನಿಲ್ದಾಣಗಳು ಅತ್ಯುತ್ತಮ ನಿಲ್ದಾಣ ಪ್ರಶಸ್ತಿ ಪಡೆದಿವೆ. ಹುಬ್ಬಳ್ಳಿ ವಿಭಾಗದ ಹುಬ್ಬಳ್ಳಿ-ಚೆನ್ನೈ ಎಕ್ಸ್‌ಪ್ರೆಸ್ (17313/14) ಅತ್ಯುತ್ತಮ ರೈಲು ಹಾಗೂ ಬೆಂಗಳೂರು ವಿಭಾಗದ ಕೃಷ್ಣರಾಜಪುರಂ ಡೀಸೆಲ್ ಶೆಡ್ ಅತ್ಯುತ್ತಮ ಶೆಡ್ ಪ್ರಶಸ್ತಿಗೆ ಪಾತ್ರವಾಗಿದೆ. ಹುಬ್ಬಳ್ಳಿಯ ಉಪ ಮುಖ್ಯ ಇಂಜಿನಿಯರ್ ವಿಭಾಗಕ್ಕೆ ಅತ್ಯುತ್ತಮ ನಿರ್ಮಾಣ ವಿಭಾಗ ಹಾಗೂ ಹುಬ್ಬಳ್ಳಿ ರನ್ನಿಂಗ್ ರೂಮ್‌ಗೆ ಅತ್ಯುತ್ತಮ ನಿರ್ವಹಣಾ ಪ್ರಶಸ್ತಿ ಲಭಿಸಿದೆ.

ADVERTISEMENT

ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್, ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೇಲಾ ಮೀನಾ, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್, ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್, ಕಾರ್ಮಿಕ ಅಧಿಕಾರಿ ಸೂರ್ಯಪ್ರಕಾಶ್ ಹಾಗೂ ಇಲಾಖೆಗಳ ಪ್ರಧಾನ ಮುಖ್ಯಸ್ಥರು, ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.