ADVERTISEMENT

ಬಿತ್ತನೆ‌ ಚುರುಕುಗೊಳಿಸಿದ ರೈತರು

ಸಂಕಷ್ಟದಲ್ಲಿರುವ ಜಿಲ್ಲೆಯ ಅನ್ನದಾತರಿಗೆ ಕೈ ಹಿಡಿಯವುದೇ ಹಿಂಗಾರು?

ಕಲಾವತಿ ಬೈಚಬಾಳ
Published 15 ನವೆಂಬರ್ 2020, 2:12 IST
Last Updated 15 ನವೆಂಬರ್ 2020, 2:12 IST
ಶ್ರೀಕಾಂತ ದೇಶಪಾಂಡೆ
ಶ್ರೀಕಾಂತ ದೇಶಪಾಂಡೆ   

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಮಳೆ ಬಿಡುವು‌ ನೀಡಿದ್ದು, ರೈತರು ಸದ್ಯ ಹಿಂಗಾರು ಬಿತ್ತನೆ ಚುರುಕುಗೊಳಿಸಿದ್ದಾರೆ. ಈ ಬಾರಿಯಾದರೂ ಉತ್ತಮ ಫಸಲು ಬಂದು ಕಷ್ಟ ನೀಗಬಹುದು ಎನ್ನುವ ಆಶಾವಾದವನ್ನು ರೈತರು ಹೊಂದಿದ್ದಾರೆ.

ಕಳೆದ ವರ್ಷ ಮತ್ತು ಈ ವರ್ಷ ಜಿಲ್ಲೆಯಲ್ಲಿ ಸಾಕಷ್ಟು ಮಳೆ ಸುರಿದಿತ್ತು. ಅದಕ್ಕೂ ಮೊದಲು ಬರಗಾಲ ಕಾಡಿತು. ಕೆಲ ಬಾರಿ ಅತಿವೃಷ್ಟಿ ಮತ್ತು ಇನ್ನೂ ಕೆಲಸಲ ಅನಾವೃಷ್ಟಿ ಸಂಕಷ್ಟದ ಪರಿಸ್ಥಿತಿಯನ್ನು ಜಿಲ್ಲೆಯ ರೈತರು ಎದುರಿಸಿದ್ದಾರೆ. ಕೆಲ ತಿಂಗಳ ಹಿಂದೆ ಜಿಲ್ಲೆಯಲ್ಲಿ ಸುರಿದ ವ್ಯಾಪಕ ಮಳೆಯಿಂದಾಗಿ ಬಹಳಷ್ಟು ಬೆಳೆ ನೀರು ಪಾಲಾಗಿತ್ತು. ಈ ಬಾರಿಯಾದರೂ ಉತ್ತಮ ಫಸಲು ಸಿಕ್ಕು ಸಂಕಷ್ಟ ಕಡಿಮೆಯಾಗಬಹುದು ಎನ್ನುವ ನಿರೀಕ್ಷೆ ರೈತರದ್ದು.

ಕೃಷಿ ಇಲಾಖೆ ಜಿಲ್ಲೆಯಲ್ಲಿ ಒಟ್ಟು 1.93 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ಸದ್ಯಕ್ಕೆ 79,521 ಹೆಕ್ಟೇರ್ ಪ್ರದೇಶದಲ್ಲಿ‌ ಬಿತ್ತನೆ ಪೂರ್ಣಗೊಂಡಿದೆ. ಜೋಳ, ಗೋಧಿ, ಕುಸುಬೆ, ಮೆಕ್ಕೆಜೋಳ, ಹೆಸರು, ಕಡಲೆ, ಹತ್ತಿ ಈ ಭಾಗದ ಪ್ರಮುಖ ಬೆಳೆಗಳು.

ADVERTISEMENT

41,507 ಹೆಕ್ಟೇರ್ ಪ್ರದೇಶ
ದಲ್ಲಿ ಕಡಲೆ, 22,577 ಹೆಕ್ಟೇರ್ ಪ್ರದೇಶದಲ್ಲಿ ಜೋಳ, 8,176 ಹೆಕ್ಟೇರ್ ಪ್ರದೇಶದಲ್ಲಿ ಗೋಧಿ, 5,383 ಹೆಕ್ಟೇರ್ ಪ್ರದೇಶದಲ್ಲಿ ಕುಸುಬೆ, 705 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, 639 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಬೀಜ ವಿತರಣೆ: ‘ಹಿಂಗಾರು ಹಂಗಾಮಿನಲ್ಲಿ ಈ‌ ತನಕ 13 ಸಾವಿರ ಕ್ವಿಂಟಲ್ ವಿವಿಧ ಬೆಳೆಗಳ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿದೆ. ಹಿಂಗಾರಿಗೆ 32, 225 ಮೆಟ್ರಿಕ್ ಟನ್ ರಸಗೊಬ್ಬರದ ಅಗತ್ಯವಿದ್ದು, ಆಯಾ‌ ತಾಲ್ಲೂಕು ಕೇಂದ್ರಗಳಿಂದ ವಿತರಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಕೃಷಿ‌ ಇಲಾಖೆಯ ಜಂಟಿ‌ ನಿರ್ದೇಶಕ ಐ.ಬಿ.ರಾಜಶೇಖರ್ ‘ಪ್ರಜಾವಾಣಿ’ಗೆ ಮಾಹಿತಿ‌ ನೀಡಿದರು.

ಈ ಕುರಿತು ’ಪ್ರಜಾವಾಣಿ’ ಗೆ ಪ್ರತಿಕ್ರಿಯಿಸಿದ ನವಲಗುಂದದ ರೈತ ವೆಂಕಣ್ಣ ಗೋವಿಂದಪ್ಪ ಮುದರೆಡ್ಡಿ ‘ಮುಂಗಾರು ಬೆಳೆ ಕೈ ಸೇರುವ
ಹಂತದಲ್ಲಿ ವಿಪರೀತ ಮಳೆ ಸುರಿದು ಶೇ 50ರಷ್ಟು ಬೆಳೆಹಾನಿಯಾಗಿ‌ ನಷ್ಟ ಅನುಭವಿಸಿದ್ದೇವೆ. ಸದ್ಯ 54 ಎಕರೆ ಪ್ರದೇಶದಲ್ಲಿ ಗೋಧಿ, ಜೋಳ, ಹಸಿಮೆಣಸಿನಕಾಯಿ, ಕುಸುಬೆ ಬಿತ್ತನೆ ಪೂರ್ಣಗೊಂಡಿದೆ. ಕಳೆದ ಕೆಲವು ದಿನಗಳಿಂದ ಮೋಡ ಮುಸುಕಿದ ವಾತಾವರಣ ಇದೆ. ಇದರಿಂದ ಬೆಳೆಗೆ ಹಾನಿಯಾಗಿ ಕೀಟಬಾಧೆ ಉಂಟಾಗಲಿದೆ. ಬೆಳೆಗಳಿಗೆ ಪೂರಕವಾದ ಹವಾಮಾನವಿದ್ದರೆ ಈ ಬಾರಿಯ ಬೆಳೆ ನಮ್ಮ ಕೈ ಹಿಡಿಯುವ ಭರವಸೆ ಇದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.