ADVERTISEMENT

ಧಾರವಾಡ| ಸೊಯಾಬೀನ್‌: ಆರಂಭವಾಗದ ಖರೀದಿ

ಎಂಎಸ್‌ಪಿ: ಜಿಲ್ಲೆಯಲ್ಲಿ ಈವರೆಗೆ 2,445 ಬೆಳೆಗಾರರು  ನೋಂದಣಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 4:27 IST
Last Updated 30 ಅಕ್ಟೋಬರ್ 2025, 4:27 IST
ಧಾರವಾಡದ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಕಚೇರಿ ಎದುರು ರೈತರು ನೋಂದಣಿಗಾಗಿ ಕಾದು ಕುಳಿತಿದ್ದರು
ಧಾರವಾಡದ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಕಚೇರಿ ಎದುರು ರೈತರು ನೋಂದಣಿಗಾಗಿ ಕಾದು ಕುಳಿತಿದ್ದರು   

ಧಾರವಾಡ: ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ (ಎಂಎಸ್‌ಪಿ) ಸೊಯಾಬೀನ್‌ ನೋಂದಣಿ ನಡೆಯುತ್ತಿದೆ ಆದರೆ, ಖರೀದಿ ಇನ್ನು ಆರಂಭವಾಗಿಲ್ಲ. ಬೆಳೆಗಾರರು ಪರಿತಪಿಸುವಂತಾಗಿದೆ.

ಸತತ ಮಳೆಯಿಂದಾಗಿ ಬೆಳೆ ಇಳುವರಿ ಕಡಿಮೆಯಾಗಿದೆ. ಸ್ವಲ್ಪ ಬೆಳೆ ಕೈಸೇರಿದೆ. ಮಾರುಕಟ್ಟೆಯಲ್ಲಿ ಸೊಯಾಬೀನ್‌ ದರ ಕುಸಿದಿದೆ. ಎಂಎಸ್‌ಪಿ ಖರೀದಿ ಕೇಂದ್ರ ಖರೀದಿ ಆರಂಭವಾಗದಿರುವುದು ರೈತರು ಸಮಸ್ಯೆಯಾಗಿದೆ.

ಸೊಯಾಬೀನ್‌ಗೆ ಎಂಎಸ್‌ಪಿ ದರ ಕ್ವಿಂಟಲ್‌ಗೆ ₹5,328 ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ 10 ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದ್ದು ಈವರೆಗೆ 2,445 ಬೆಳೆಗಾರರು  ನೋಂದಣಿ ಮಾಡಿಸಿದ್ದಾರೆ.

ADVERTISEMENT

ಮಾರುಕಟ್ಟೆಯಲ್ಲಿ ಸೊಯಾಬೀನ್‌ ಧಾರಣೆ ಎಂಎಸ್‌ಪಿ ದರಕ್ಕಿಂತ ಕಡಿಮೆ ಇದೆ. ಕ್ವಿಂಟಲ್‍ಗೆ ₹4,000 ರಿಂದ ₹4,200 ವರೆಗೆ ಧಾರಣೆ ಇದೆ. ಆದರೆ, ಎಂಎಸ್‌ಪಿ ಕೇಂದ್ರದಲ್ಲಿ ಖರೀದಿ ಆರಂಭವಾಗಿದಿರುವುದರಿಂದ ಕೆಲವು ರೈತರು ಮಾರುಕಟ್ಟೆಯಲ್ಲೇ ದಲ್ಲಾಳಿಗಳ ಮೂಲಕ ಮಾರಾಟ ಮಾಡುವಂತಾಗಿದೆ.

‘ಕಟಾವು ಮುಗಿದ ಫಸಲು ಮಾರುಕಟ್ಟೆಗೆ ಪ್ರವೇಶ ಹಂತದಲ್ಲಿ ವರ್ತಕರು ಬೆಲೆ ಇಳಿಕೆ ತಂತ್ರಗಾರಿಕೆ ಮಾಡುತ್ತಾರೆ. ತಕ್ಷಣಕ್ಕೆ ಹಣದ ಅಗತ್ಯವಿದ್ದ ರೈತರು ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಾರೆ. ಬೆಂಬಲ ಬೆಲೆ ಕೇಂದ್ರದಲ್ಲಿ ತಕ್ಷಣ ಖರೀದಿ ಆರಂಭಿಸಿದರೆ ರೈತರಿಗೆ  ಅನುಕೂಲವಾಗುತ್ತದೆ’ ಎಂದು ಕೋಟೂರಿನ ಬೆಳೆಗಾರ ಸಲೀಂ ನನ್ನೇಸಾಬನವರ ತಿಳಿಸಿದರು.

ಅನೇಕ ರೈತರು ಈಗ ಮಾರುಕಟ್ಟೆಗೆ ಸೊಯಾಬೀನ್ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ ಉತ್ತಮ ಬೆಲೆ ಅವರಿಗೆ ಸಿಗುತ್ತಿಲ್ಲ. ಸರ್ವರ್‌ ಸಮಸ್ಯೆ ಸರಿಪಡಿಸಿ ಶೀಘ್ರ ಖರೀದಿ ಆರಂಭಿಸಲು ಸಂಬಂಧಪಟ್ಟವರು ಕ್ರಮ ವಹಿಸಬೇಕು
ರವಿರಾಜ ಕಂಬಳಿ ರೈತ ಸಂಘ–ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ
ಸೊಯಾಬೀನ್ ಬೆಂಬಲ ಬೆಲೆ ಖರೀದಿ ಕೇಂದ್ರೆಕ್ಕೆ ನಾಲ್ಕು ದಿನದಿಂದ ಅಲೆಯುತ್ತಿದ್ದೇನೆ. ಸರ್ವರ್ ಸಮಸ್ಯೆಯಿಂದ ಇನ್ನು ನೋಂದಣಿ ಮಾಡಲು ಸಾಧ್ಯವಾಗಿಲ್ಲ. ಕೇಂದ್ರದಲ್ಲಿ ಎರಡು ನೋಂದಣಿ ಘಟಕ ವ್ಯವಸ್ಥೆ ಮಾಡಬೇಕು
ರಮೇಶ ದೊಡವಾಡ ರೈತ ಮಾದನಬಾವಿ

ಸರ್ವರ್ ಸಮಸ್ಯೆ: ಖರೀದಿ ಕೇಂದ್ರಕ್ಕೆ ಅಲೆದಾಟ

ಕೆಲವೆಡೆ ಖರೀದಿ ಕೇಂದ್ರಗಳಲ್ಲಿ ಸರ್ವರ್‌ ಸಮಸ್ಯೆ ಇದೆ. ದಿನಕ್ಕೆ 20 ಜನರ ನೋಂದಣಿ ಆಗುತ್ತಿದೆ. ರೈತರು ನೋಂದಣಿಗಾಗಿ ಖರೀದಿ ಕೇಂದ್ರಕ್ಕೆ ಅಲೆದಾಡುವ ಸ್ಥಿತಿ ಇದೆ. ನಗರದ ಹಳೇ ಎಪಿಎಂಸಿ ಆವರಣದ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಕಚೇರಿಯಲ್ಲಿ ನೋಂದಣಿ ನಡೆಯುತ್ತಿದೆ. ಸರ್ವರ್ ಸಮಸ್ಯೆಯಿಂದ ಸರಿಯಾಗಿ ನೋಂದಣಿ ಪ್ರಕ್ರಿಯೆ ನಡೆಯುತ್ತಿಲ್ಲ. ರೈತರು ಕೇಂದ್ರದ ಬಳಿ ನಿಂತು ಕುಳಿತು ಹೈರಾಣಾಗುವಂತಾಗಿದೆ. ಸರ್ವರ್‌ ಸಮಸ್ಯೆ ಪರಿಹರಿಸಿ ನೋಂದಣಿ ಪ್ರಕ್ರಿಯೆ ಸುಗಮವಾಗಿ ನಡೆಯಲು ಸಂಬಂಧಪಟ್ಟವರು ಕ್ರಮ ವಹಿಸಬೇಕು ಎಂದು ರೈತರು ಒತ್ತಾಯಿಸುತ್ತಾರೆ.

‘ಡಿ.27ರವರೆಗೆ ಖರೀದಿಗೆ ಅವಕಾಶ’

ಡಿ.17ರವರೆಗೆ ನೋಂದಣಿಗೆ ಹಾಗೂ ಡಿ.27ರವರೆಗೆ ಖರೀದಿಗೆ ಅವಕಾಶ ಇದೆ. ನೋಂದಣಿ ನಡೆಯುತ್ತಿದೆ ಎಂದು ಎಂಪಿಎಂಸಿ ಮಾರುಕಟ್ಟೆ ವಿಭಾಗದ ಉಪನಿರ್ದೇಶಕ ವಿರೂಪಾಕ್ಷಪ್ಪ ಲಮಾಣಿ ತಿಳಿಸಿದರು. ‘ಖರೀದಿ ಪ್ರಕ್ರಿಯೆಯನ್ನೂ ಆರಂಭಿಸಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಒಬ್ಬರಿಂದ ಗರಿಷ್ಠ 20 ಕ್ವಿಂಟಲ್‌ ಖರೀದಿಗೆ ಅವಕಾಶ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.