ADVERTISEMENT

ಸೈಯದ್‌ ಸಬೀರ್‌ಗೆ ಪದಕಗಳ ಹಾರ

ಅಥ್ಲೆಟಿಕ್ಸ್‌ನಲ್ಲಿ ಮಿಂಚುತ್ತಿರುವ ಹುಬ್ಬಳ್ಳಿಯ ಅಥ್ಲೀಟ್‌

ಸತೀಶ ಬಿ.
Published 31 ಮೇ 2025, 5:21 IST
Last Updated 31 ಮೇ 2025, 5:21 IST
ಸೈಯದ್‌ ಸಬೀರ್‌  
ಸೈಯದ್‌ ಸಬೀರ್‌     

ಹುಬ್ಬಳ್ಳಿ: ಶಾಲಾ ಹಂತದ ಕ್ರೀಡಾಕೂಟದಲ್ಲಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುತ್ತಿದ್ದೆ. ನಂತರ ಇದರಲ್ಲೇ ಸಾಧನೆ ಮಾಡಬೇಕು ಎಂಬ ಛಲ ಮೂಡಿತು. ಪ್ರಸಕ್ತ ವರ್ಷ ಏಪ್ರಿಲ್‌ನಲ್ಲಿ 6ನೇ ಏಷ್ಯನ್ (18 ವರ್ಷದೊಳಗಿನವರ) ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಮೆಡ್ಲೆ ರಿಲೇಯಲ್ಲಿ ನಮ್ಮ ತಂಡ ಬೆಳ್ಳಿ ಪದಕ ಜಯಿಸಿದ್ದಕ್ಕೆ ಖುಷಿಯಾಗಿದೆ...

–ಇವು ಅಥ್ಲೀಟ್‌ ಸೈಯದ್ ಸಬೀರ್ ಅವರ ಸಂಭ್ರಮದ ನುಡಿಗಳು. ಅವರ ತಂಡ (ಚಿರಂತ್‌ ಪಿ., ಸಾಕೇತ್‌ ಮಿಂಜ್‌, ಕಾದಿರ್‌ ಖಾನ್‌) ಸೌದಿಯಲ್ಲಿ ನಡೆದ ಸ್ಪರ್ಧೆಯಲ್ಲಿ 1ನಿ,52.15 ಸೆಕೆಂಡುಗಳಲ್ಲಿ ಗುರಿ ಮುಟ್ಟಿತು.   

ಸಬೀರ್ ಹುಬ್ಬಳ್ಳಿಯ ಮಂಟೂರ ರಸ್ತೆಯ ಬ್ಯಾಳಿ ಪ್ಲಾಟ್ ನಿವಾಸಿ. ಅವರ ತಂದೆ ರೈಲ್ವೆಇಲಾಖೆಯ‌‌ಲ್ಲಿ ಟೆಕ್ನಿಷಿಯನ್ ಆಗಿದ್ದು, ಸಹೋದರ ಸೈಯದ್ ಇರ್ಫಾನ್‌ ಸಹ ಅಥ್ಲೀಟ್ ಆಗಿದ್ದಾರೆ.

ADVERTISEMENT

200 ಮೀ. ಮತ್ತು 400 ಮೀ. ಓಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವರು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ 3 ಚಿನ್ನದ ಪದಕ, 8 ಬೆಳ್ಳಿ, 2 ಕಂಚಿನ ಪದಕ ಗಳಿಸಿದ್ದಾರೆ. ಅಲ್ಲದೆ, ದಕ್ಷಿಣ ವಲಯ, ರಾಜ್ಯಮಟ್ಟದ ವಿವಿಧ ಕ್ರೀಡಾಕೂಟದಲ್ಲಿಯೂ ಅವರ ಸಾಧನೆಗೆ ಪದಕಗಳು ಒಲಿದಿವೆ.

ಇದೇ ತಿಂಗಳು ಪಟ್ನಾದಲ್ಲಿ ನಡೆದ ಖೇಲೊ ಇಂಡಿಯಾ ಯೂಥ್‌ ಗೇಮ್ಸ್‌ನ (18 ವರ್ಷದೊಳಗಿನವರ)  200 ಮೀ. ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ, ಇದೇ ಕ್ರೀಡಾಕೂಟದ 400ಮೀ. ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದಾರೆ.

ಪ್ರಸಕ್ತ ವರ್ಷ ಮಾರ್ಚ್‌ನಲ್ಲಿ ಪಾಟಲಿಪುತ್ರದಲ್ಲಿ ನಡೆದ 20ನೇ ರಾಷ್ಟ್ರೀಯ ಯೂತ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ 400ಮೀ. ಓಟದಲ್ಲಿ ಬೆಳ್ಳಿ, 200 ಮೀ. ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. 2024ರಲ್ಲಿ ಭುವನೇಶ್ವರದಲ್ಲಿ ನಡೆದ 39ನೇ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌, ಇದೇ ವರ್ಷ ಗುಜರಾತ್‌ನಲ್ಲಿ ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ನಿಂದ ನಡೆದ 19ನೇ ರಾಷ್ಟ್ರೀಯ ಅಂತರ ಜಿಲ್ಲಾ ಜೂನಿಯರ್‌ ಅಥ್ಲೆಟಿಕ್ಸ್‌  ಕ್ರೀಡಾಕೂಟದ  600 ಮೀ. ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.

‘ಏಳು ಮತ್ತು ಎಂಟನೇ ತರಗತಿಯಲ್ಲಿ ಧಾರವಾಡ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಸ್ಟೆಲ್‌ನಲ್ಲಿ ತರಬೇತಿ ಪಡೆದೆ. ಈಗ ಬೆಂಗಳೂರಿನ  ಖೇಲೊ ಇಂಡಿಯಾ ಕೇಂದ್ರದಲ್ಲಿ ವಸಂತಕುಮಾರ ಅವರ ಬಳಿ ತರಬೇತಿ ಪಡೆಯುತ್ತಿದ್ದೇನೆ’ ಎಂದು ಸಬೀರ್‌ ಹೇಳಿದರು. 

‘ಖೇಲೊ ಇಂಡಿಯಾ ಕೇಂದ್ರದಲ್ಲಿ ಉತ್ತಮ ತರಬೇತಿ, ಆಹಾರ ಸಿಗುತ್ತದೆ. ಆದರೆ, ಮುಂಬರುವ ಸ್ಪರ್ಧೆಗಳಲ್ಲಿ ಸಾಧನೆ ಮಾಡಬೇಕಾದರೆ ಪೌಷ್ಟಿಕ ಆಹಾರ, ಗುಣಮಟ್ಟದ  ಶೂ, ಕಿಟ್‌ಗಳ ಅಗತ್ಯ ಇದೆ. ಹುಬ್ಬಳ್ಳಿಯ ಮೆಟ್ರೊ ಪೊಲಿಸ್‌ ಹೋಟೆಲ್‌ನವರು ಉತ್ತಮ ಗುಣಮಟ್ಟದ ಶೂ ಕೊಡಿಸಿದ್ದಾರೆ’ ಎಂದರು. 

‘ಬೆಂಗಳೂರಿನ ರೇವಾ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ಪಿಯುಸಿ (ವಾಣಿಜ್ಯ)ಮುಗಿಸಿದ್ದೇನೆ. ನನ್ನ ಸಾಧನೆ ಗುರುತಿಸಿ ಹುಬ್ಬಳ್ಳಿಯ ಸನಾ ಶಾಹೀನ್‌ ಕಾಲೇಜು ದ್ವಿತೀಯ ಪಿಯುಗೆ ಉಚಿತ ಪ್ರವೇಶ ನೀಡಿದೆ. ಬೆಂಗಳೂರಿನ ಖೇಲೊ ಇಂಡಿಯಾ ಕೇಂದ್ರದಲ್ಲಿ ತರಬೇತಿ ಪಡೆಯುವ ಜತೆಗೆ ಆನ್‌ಲೈನ್‌ ಮೂಲಕ ತರಗತಿಗಳಿಗೆ ಹಾಜರಾಗುತ್ತೇನೆ’ ಎಂದು ಹೇಳಿದರು.       

ಸೈಯದ್‌ ಸಬೀರ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.