ADVERTISEMENT

SSLC, PUC: ಧಾರವಾಡ ಜಿ‌ಲ್ಲೆಯಲ್ಲಿ ಫಲಿತಾಂಶ ಸುಧಾರಣೆಯತ್ತ ಹೆಜ್ಜೆ

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯು ಪರೀಕ್ಷೆ: ಉತ್ತಮ ಸ್ಥಾನ ಗಳಿಸಲು ಇಲಾಖೆ ಶ್ರಮ

ಗೋವರ್ಧನ ಎಸ್.ಎನ್.
Published 27 ಡಿಸೆಂಬರ್ 2024, 7:00 IST
Last Updated 27 ಡಿಸೆಂಬರ್ 2024, 7:00 IST
ಎಸ್‌.ಎಸ್‌. ಕೆಳದಿಮಠ 
ಎಸ್‌.ಎಸ್‌. ಕೆಳದಿಮಠ    

ಹುಬ್ಬಳ್ಳಿ: ಜಿ‌ಲ್ಲೆಯಲ್ಲಿ ಎಸ್‌ಎಸ್‌ಎ‌ಲ್‌ಸಿ ಪರೀಕ್ಷೆಯ ಫಲಿತಾಂಶ ಸುಧಾರಣೆಗಾಗಿ ‘ರೂಢಿ ಪರೀಕ್ಷೆ’ ವಿಧಾನ ಅನುಸರಿಸುತ್ತಿರುವ ಶಾಲಾ ಶಿಕ್ಷಣ ಇಲಾಖೆಯು, ವಿದ್ಯಾರ್ಥಿಗಳಲ್ಲಿ ಬರವಣಿಗೆ ಕಲೆ ಬೆಳೆಸಿ, ಓದಿದ್ದನ್ನು ಹೆಚ್ಚು ಕಾಲ ನೆನಪಿನಲ್ಲಿ ಉಳಿಸಿಕೊಳ್ಳುವಂತೆ ಮಾಡಲು ಶ್ರಮಿಸುತ್ತಿದೆ. 

ಈಗಾಗಲೇ (ಡಿಸೆಂಬರ್‌ 16ರಿಂದ) ಪರೀಕ್ಷೆಗಳನ್ನು ಆರಂಭಿಸಲಾಗಿದ್ದು, 25 ಅಂಕಗಳ ಪರೀಕ್ಷೆ ಇದಾಗಿದೆ. ಫೆಬ್ರುವರಿ 15ರವರೆಗೆ ಇದೇ ಮಾದರಿಯ ಪರೀಕ್ಷೆ ನಡೆಸುವ ಯೋಜನೆ ಇಲಾಖೆಯದ್ದಾಗಿದೆ.

‘ಈ ಮಾದರಿಯ ಪರೀಕ್ಷೆಯನ್ನು ಜಿಲ್ಲೆಯಲ್ಲಿ ಮಾತ್ರ ನಡೆಸಲಾಗುತ್ತಿದೆ. ‘ಮಿಷನ್‌ ವಿದ್ಯಾಕಾಶಿ’ ಎಂಬ ಪರಿಕಲ್ಪನೆಯಡಿ ವಿಷಯ ಶಿಕ್ಷಕರಿಗೆ ಈಗಾಗಲೇ ಹಲವು ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗಿದೆ. ಬೋಧನೆ, ವಿವಿಧ ಚಟುವಟಿಕೆ ಹಮ್ಮಿಕೊಳ್ಳುವ ಬಗ್ಗೆ ಐಐಟಿ ಡೀನ್‌ ಶಿವಪ್ರಸಾದ್‌ ಅವರು ತರಬೇತಿ ನೀಡಿದ್ದಾರೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್‌.ಎಸ್‌. ಕೆಳದಿಮಠ ಹೇಳಿದರು.  

ADVERTISEMENT

‘ಕಲಿಕೆಯಲ್ಲಿ ಹಿಂದುಳಿದ 3,000 ಮಕ್ಕಳನ್ನು ಗುರುತಿಸಿ, ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದು, ಏಕಾಗ್ರತೆ, ಪರೀಕ್ಷೆ ಎದುರಿಸುವ ಬಗ್ಗೆ ಪರಿಣತರಿಂದ ಅರಿವು ಮೂಡಿಸಲಾಗಿದೆ. ‘ಪಾಸಿಂಗ್‌ ಪ್ಯಾಕೇಜ್‌’ ಪ್ರತಿಗಳನ್ನು ಎಲ್ಲ ಮಕ್ಕಳಿಗೆ ತಲುಪಿಸಲಾಗಿದೆ’ ಎಂದು ಅವರು ಹೇಳಿದರು.

ಫೋನ್‌–ಇನ್‌: ‘ಡಿಸೆಂಬರ್‌ ಒಳಗೆ ಪಠ್ಯ ಬೋಧನೆಯನ್ನು ಪೂರ್ಣಗೊಳಿಸಿ ಆನಂತರ ವಿಡಿಯೊ ಪಾಠ, ಪಾಲಕರ ಭೇಟಿಯಂತಹ ಯೋಜನೆ ಹಮ್ಮಿಕೊಳ್ಳಲಾಗಿದೆ. ವಾರದಲ್ಲಿ ಎರಡು ದಿನ ಮಧ್ಯಾಹ್ನ 3ರಿಂದ 6 ಗಂಟೆವರೆಗೆ ನಮ್ಮ ಕಚೇರಿಯಲ್ಲಿ ಫೋನ್‌–ಇನ್‌ ಆಯೋಜಿಸಿ ಎಲ್ಲಾ ವಿಷಯ ಶಿಕ್ಷಕರ ಮೂಲಕ ಮಕ್ಕಳ ಗೊಂದಲ ಪರಿಹರಿಸಲಾಗುತ್ತಿದೆ’ ಎಂದರು. 

‘15 ದಿನಕ್ಕೊಮ್ಮೆ ಪಾಲಕರ ಸಭೆ ನಡೆಸಿ, ಮಕ್ಕಳ ಕಲಿಕಾ ಮಟ್ಟದ ಬಗ್ಗೆ ಅವರಿಗೆ ತಿಳಿಸಲಾಗುತ್ತದೆ. ವೈಯಕ್ತಿಕ ವೇಳಾಪಟ್ಟಿ ನೀಡಿ, ಮನೆಯಲ್ಲಿ ಓದಿಸಲು ಸಲಹೆ ನೀಡಲಾಗುತ್ತದೆ.  ‘ವೇಕ್ ಅಪ್‌ ಕಾಲ್‌’ನಂತೆ ಬೆಳಿಗ್ಗೆ ಮಕ್ಕಳಿಗೆ ಕರೆ ಮಾಡಿ ಎಬ್ಬಿಸಿ ಓದಿಸಲಾಗುತ್ತದೆ ಹಾಗೂ ಸಂಜೆ ಓದುತ್ತಿದ್ದಾರಾ? ಎಂದು ಮಾಹಿತಿ ಪಡೆಯಲಾಗುತ್ತದೆ. ಪರೀಕ್ಷೆ ಸಮಯದಲ್ಲಿ ಮನಃಶಾಸ್ತ್ರಜ್ಞರ ಮೂಲಕ ಸ್ಥೈರ್ಯ ಹೆಚ್ಚಿಸಲಾಗುತ್ತದೆ’ ಎಂದು ಅವರು ತಿಳಿಸಿದರು. 

ನೋಂದಾಯಿತರೆಲ್ಲರೂ ಪರೀಕ್ಷೆ ಬರೆದು ಪಾಸಾಗಬೇಕು. ಕಳೆದ ಬಾರಿ 22ನೇ ಸ್ಥಾನದಲ್ಲಿದ್ದ ಜಿಲ್ಲೆಯನ್ನು 10ನೇ ಸ್ಥಾನದೊಳಗೆ ತರಲು ಯತ್ನಿಸಲಾಗುತ್ತಿದೆ.

–ಎಸ್‌.ಎಸ್‌. ಕೆಳದಿಮಠ ಉಪನಿರ್ದೇಶಕ ಶಾಲಾ ಶಿಕ್ಷಣ ಇಲಾಖೆ

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕಳೆದ ಬಾರಿ ಜಿಲ್ಲೆ 23ನೇ ಸ್ಥಾನ (ಶೇ 82ರಷ್ಟು ಫಲಿತಾಂಶ) ಗಳಿಸಿತ್ತು. ಈ ಬಾರಿ 15ನೇ ಸ್ಥಾನದೊಳಗೆ ತರುವ ಗುರಿ ಇದೆ

–ಕೆ.ಪಿ. ಸುರೇಶ ಉಪನಿರ್ದೇಶಕ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ​

‘ಬದಲಾದ ಸಮಯದಂತೆ ಸಿದ್ಧತೆ’

‘ದ್ವಿತೀಯ ಪಿ.ಯು ಪರೀಕ್ಷೆ ಸಮಯ 15 ನಿಮಿಷ ಕಡಿತವಾಗಿದೆ. ಈ ಮೊದಲು 3ಗಂಟೆ 15 ನಿಮಿಷ ಪರೀಕ್ಷೆಯ ಸಮಯವಿತ್ತು. ಈಗ 80 ಅಂಕಗಳಿಗಷ್ಟೇ ಪರೀಕ್ಷೆ ನಡೆಯುವುದರಿಂದ 3 ತಾಸಿಗೆ ನಿಗದಿಗೊಳಿಸಲಾಗಿದೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಅಣಿಗೊಳಿಸಲಾಗುತ್ತಿದೆ’ ಎಂದು  ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ​ಉಪನಿರ್ದೇಶಕ ಕೆ.ಪಿ. ಸುರೇಶ ತಿಳಿಸಿದರು. ‘ಪ್ರತಿ ಘಟಕ ಪೂರ್ಣಗೊಂಡ ನಂತರ ಕಿರುಪರೀಕ್ಷೆ ನಡೆಸಲಾಗುತ್ತಿದೆ. ಡಿಸೆಂಬರ್‌ ಒಳಗೆ ಪಠ್ಯ ಬೋಧನೆ ಪೂರ್ಣಗೊಳಿಸಿ ನಂತರ ಪುನರ್ಮನನಕ್ಕೆ ಆದ್ಯತೆ ನೀಡಲಾಗುತ್ತದೆ’ ಎಂದರು. ‘ಮೊದಲ ಕಿರುಪರೀಕ್ಷೆ ಮಧ್ಯವಾರ್ಷಿಕ ಪರೀಕ್ಷೆ ನಡೆದಿದ್ದು ಎರಡನೇ ಕಿರುಪರೀಕ್ಷೆ ಪೂರ್ವಭಾವಿ ಪರೀಕ್ಷೆ ನಡೆಯಲಿವೆ. ಕಳೆದ ವರ್ಷಗಳ ಪ್ರಶ್ನೆಪತ್ರಿಕೆ ಬಿಡಿಸುವುದು ಉತ್ತಮ ಸಾಧನೆ ಮಾಡಿದ ಜಿಲ್ಲೆಗಳಿಂದ ಪಠ್ಯ ಸಾಮಗ್ರಿ ಪಡೆದು ಅಭ್ಯಾಸ ಮಾಡಿಸಲು ಸೂಚಿಸಲಾಗಿದೆ’ ಎಂದು ವಿವರಿಸಿದರು.  ‘ಉರ್ದು ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲಿ ಫೇಲಾಗುತ್ತಾರೆ. ಅವರಿಗೂ ‘ಪಾಸಿಂಗ್‌ ಪ್ಯಾಕೇಜ್‌’ ರೂಪಿಸಿ ವಿತರಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ 93 ಮಕ್ಕಳಿಗಾಗಿ ಬೆಳಿಗ್ಗೆ ಹಾಗೂ ಸಂಜೆ ವಿಶೇಷ ತರಗತಿ ನಡೆಸಲಾಗುತ್ತಿದೆ. ನಿಯಮಿತವಾಗಿ ಪ್ರಾಚಾರ್ಯರು ಹಾಗೂ ಉಪನ್ಯಾಸಕರ ಸಭೆ ನಡೆಸಲಾಗುತ್ತಿದೆ ಹಾಗೂ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಪ್ರಾಶುಪಾಲರ ಸಂಘ ಉಪನ್ಯಾಸಕ ವೇದಿಕೆಗಳ ಶೇ 100ರಷ್ಟು ಫಲಿತಾಂಶಕ್ಕಾಗಿ ಶ್ರಮಿಸಲಾಗುತ್ತಿದೆ’ ಎಂದರು.  

ಉಚಿತ ತರಬೇತಿ

ಸರ್ಕಾರಿ ಪಿ.ಯು ಕಾಲೇಜುಗಳ ದ್ವಿತೀಯ ಪಿ.ಯು ವಿದ್ಯಾರ್ಥಿಗಳಿಗಾಗಿ ಸರ್ಕಾರವೇ ಉಚಿತವಾಗಿ ಸಿಇಟಿ ನೀಟ್‌ ಜೆಇಇ ತರಬೇತಿ ನೀಡುತ್ತಿದೆ. ಜಿಲ್ಲೆಯ 17 ಸರ್ಕಾರಿ ವಿಜ್ಞಾನ ಕಾಲೇಜುಗಳ 1400 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ’ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ​ಉಪನಿರ್ದೇಶಕ ಕೆ.ಪಿ. ಸುರೇಶ ಹೇಳಿದರು. ‘ನಿತ್ಯ ಬೆಳಿಗ್ಗೆ 1 ತಾಸು ಮಧ್ಯಾಹ್ನ 1 ತಾಸು ಪರಿಣತರ ತಂಡವು ಆನ್‌ಲೈನ್‌ನಲ್ಲಿ ಬೋಧನೆ ಮಾಡುತ್ತಿದೆ. ಇದರಿಂದ ವೃತ್ತಿಪರ ಕೋರ್ಸ್‌ಗಳ ಪರೀಕ್ಷೆಗಳಲ್ಲಿ ಖಾಸಗಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು ಸ್ಪರ್ಧಿಸಲು ಸಾಧ್ಯವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.