ADVERTISEMENT

ಕಾಂಪೋಸ್ಟ್‌ ಘಟಕ ಡಿಸೆಂಬರ್‌ಗೆ ಆರಂಭ: ಇಟ್ನಾಳ

ಘನತ್ಯಾಜ್ಯ ನಿರ್ವಹಣೆ ರಾಜ್ಯ ಕರಡು ನೀತಿ ಕುರಿತು ಚರ್ಚೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 17:45 IST
Last Updated 8 ನವೆಂಬರ್ 2019, 17:45 IST
ಹುಬ್ಬಳ್ಳಿಯ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ಮಹಾನಗರ ಪಾಲಿಕೆ ಆಯೋಜಿಸಿದ್ದ ಸಭೆಯಲ್ಲಿ ಬೆರಳೆಣಿಕೆಯಷ್ಟ ಸಾರ್ವಜನಿಕರು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ಮಹಾನಗರ ಪಾಲಿಕೆ ಆಯೋಜಿಸಿದ್ದ ಸಭೆಯಲ್ಲಿ ಬೆರಳೆಣಿಕೆಯಷ್ಟ ಸಾರ್ವಜನಿಕರು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಘನತ್ಯಾಜ್ಯ ವಿಲೇವಾರಿ ಉದ್ದೇಶದಿಂದ ಅವಳಿ ನಗರದಲ್ಲಿ ಎರಡು ಕಾಂಪೋಸ್ಟ್‌ ಘಟಕಗಳನ್ನು ಡಿಸೆಂಬರ್‌ ಅಂತ್ಯದೊಳಗೆ ಆರಂಭಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಹೇಳಿದರು.

ಇಲ್ಲಿನ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ಘನತ್ಯಾಜ್ಯ ನಿರ್ವಹಣೆಯ ರಾಜ್ಯ ಕರಡು ನೀತಿಗೆ ಸಲಹೆ, ಅಭಿಪ್ರಾಯ, ಆಕ್ಷೇಪಣೆಗಳ ಸಂಗ್ರಹ ಸಂಬಂಧ ಆಯೋಜಿಸಲಾಗಿದ್ದ ಪಾಲಿಕೆಯ ಮಧ್ಯಸ್ಥಗಾರರ ಸಭೆಯಲ್ಲಿ ಅವರು ಮಾತನಾಡಿದರು.

ಘನತ್ಯಾಜ್ಯವನ್ನು ಸಮರ್ಪಕವಾಗಿ ಮರುಬಳಿಕೆ ಮಾಡುವ ನಿಟ್ಟಿನಲ್ಲಿ ಪ್ರತಿ ಮನೆ, ಅಪಾರ್ಟ್‌ಮೆಂಟ್‌, ವಾಣಿಜ್ಯ ಕಟ್ಟಡಗಳಲ್ಲಿ ಕಾಂಪೋಸ್ಟ್‌ ಗೊಬ್ಬರ ತಯಾರಿಸಲು ಹಾಗೂ ಸಾರ್ವಜನಿಕ ಉದ್ಯಾನಗಳಲ್ಲಿ ಕಾಂಪೋಸ್ಟ್‌ ಸಮುದಾಯ ಘಟಕಗಳನ್ನು ಆರಂಭಿಸಲು ಆದ್ಯತೆ ನೀಡಲಾಗುವುದು ಎಂದರು.

ADVERTISEMENT

ಪುರಸ್ಕಾರ:ನಗರ ಪ್ರದೇಶದ ಮನೆಗಳಲ್ಲಿ ಕಾಂಪೋಸ್ಟ್‌ ಗೊಬ್ಬರ ತಯಾರಿಸುವವರನ್ನು ಗುರುತಿಸಿ, ಉತ್ತೇಜಿಸುವ ಉದ್ದೇಶದಿಂದ ‘ಪರಿಸರ ಸ್ನೇಹಿ ಮನೆ’ ಪುರಸ್ಕಾರ ನೀಡುವ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.

ಶಿವಳ್ಳಿಯಲ್ಲಿ 67 ಎಕರೆ ವಿಸ್ತೀರ್ಣದಲ್ಲಿ ಕಟ್ಟಡಗಳ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲಾಗುತ್ತಿದ್ದು, ಮಾರ್ಚ್‌ ಅಂತ್ಯಕ್ಕೆ ಕಾರ್ಯಾರಂಭ ಮಾಡಲಿದೆ. ವೈದ್ಯಕೀಯ, ಕೈಗಾರಿಕಾ, ಪ್ಲಾಸ್ಟಿಕ್‌ ತ್ಯಾಜ್ಯ ವಿಲೇವಾರಿಗೂ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ತಾತ್ಕಾಲಿಕ ಸ್ಥಳಾಂತರ:ಗಣೇಶಪೇಟೆ ಮೀನು ಮಾರುಕಟ್ಟೆಯನ್ನು ಆಧುನಿಕರಣಗೊಳಿಸುವ ಕಾರ್ಯಕೈಗೆತ್ತಿಕೊಳ್ಳಲಾಗುತ್ತಿದ್ದು, ಈ ಸಂಬಂಧ ಅಲ್ಲಿರುವ ವ್ಯಾಪಾರಸ್ಥರನ್ನು ಶೀಘ್ರದಲ್ಲೇ ಮಂಟೂರು ರಸ್ತೆಯ ಕೆ.ವಿ.ನಗರಕ್ಕೆ ಸ್ಥಳಾಂತರಗೊಳಿಸಲಾಗುವುದು ಎಂದರು.

ಬಯೋಮೈನಿಂಗ್‌:ಅವಳಿ ನಗರದಲ್ಲಿ ಪ್ರತಿ ದಿನ 400 ಟನ್‌ ತ್ಯಾಜ್ಯ ಸಂಗ್ರಹವಾಗುತ್ತಿದೆ. ಹುಬ್ಬಳ್ಳಿಯ ಕಾರವಾರ ರಸ್ತೆಯ ಡಂಪಿಂಗ್‌ ಯಾರ್ಡ್‌ ಮತ್ತು ಧಾರವಾಡದ ಹೊಸಯಲ್ಲಾಪುರದಲ್ಲಿ ಈಗಾಗಲೇ 8 ಲಕ್ಷ ಟನ್‌ ಕಸದ ರಾಶಿ ಬಿದ್ದಿದೆ. ಇಲ್ಲಿ ಬಯೋಮೈನಿಂಗ್‌ ಆರಂಭಿಸಲಾಗುವುದು ಎಂದು ತಿಳಿಸಿದರು.

ಆಕ್ಷೇಪ ಸಲ್ಲಿಕೆ ಇಂದು ಕೊನೆ:ಘನತ್ಯಾಜ್ಯ ನಿರ್ವಹಣೆಯ ರಾಜ್ಯ ಕರಡು ನೀತಿಗೆ ಸಂಬಂಧಿಸಿದ ಸಲಹೆ, ಆಕ್ಷೇಪಗಳಿದ್ದರೇ ನ.9ರ ಸಂಜೆ ಒಳಗಾಗಿ hdmcswachhbharat@gmail.com ಗೆ ಕಳುಹಿಸುವಂತೆ ಮನವಿ ಮಾಡಿದರು.

ಘನತ್ಯಾಜ್ಯ ನಿರ್ವಹಣೆಯ ರಾಜ್ಯ ಕರಡು ನೀತಿಯ ಕುರಿತು ಸಭೆಗೆ ಮಾಹಿತಿ ನೀಡಿದ ಪರಿಸರ ಎಂಜಿನಿಯರ್‌ ನಯನಾ, ಕಡ್ಡಾಯವಾಗಿ ವಾರ್ಡ್‌ ಕಮಿಟಿ ರಚಿಸುವಂತೆ, ತ್ಯಾಜ್ಯ ವಿಲೇವಾರಿಗೆ ಸಿಎಸ್‌ಆರ್‌ ಫಂಡ್‌ ಬಳಸಿಕೊಳ್ಳುವಂತೆ ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ ಎಂದರು.

ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಎನ್.ಜಿ.ಒ, ಸ್ವ-ಸಹಾಯ ಸಂಘಗಳು ಪದಾಧಿಕಾರಿಗಳು ಸೇರಿದಂತೆ ಕೇವಲ 53 ಜನ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ 9 ಜನ ಲಿಖಿತವಾಗಿ, 20 ಜನ ಇ–ಮೇಲ್‌ ಮೂಲಕವಾಗಿ ಸಲಹೆ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಿದರು. ಘನತ್ಯಾಜ್ಯ ವಿಲೇವಾಡಿ ವಿಭಾಗದ ಎಂಜಿನಿಯರ್‌ ವಿಜಯಕುಮಾರ್‌, ಪರಿಸರ ಎಂಜಿನಿಯರ್‌ ಶ್ರೀಧರ್‌ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.