ADVERTISEMENT

ಕುಸ್ತಿ ಹಬ್ಬ ಹೇಳಿ ಹೋದ ಕಥೆ...

ಹುಬ್ಬಳ್ಳಿ–ಧಾರವಾಡ ಮೆಟ್ರೊ

ಪ್ರಮೋದ್
Published 25 ಫೆಬ್ರುವರಿ 2020, 19:45 IST
Last Updated 25 ಫೆಬ್ರುವರಿ 2020, 19:45 IST
ಕರ್ನಾಟಕ ಕುಸ್ತಿ ಹಬ್ಬದಲ್ಲಿ ಭರವಸೆ ಮೂಡಿಸಿದ ಸೋನಿಯಾ ಜಾಧವ (ನೀಲಿ ಪೋಷಾಕು) ಮಮತಾ ಪೈಪೋಟಿ (ಎಡಚಿತ್ರ), ಬಾಲಕಿಯರ ವಿಭಾಗದ ಹಣಾಹಣಿಯಲ್ಲಿ ಶ್ವೇತಾ (ಕೆಂಪು ಪೋಷಾಕು) ಸೃಷ್ಟಿ ಸೆಣಸಾಟದ ಚಿತ್ರಣ(ಮಧ್ಯದ ಚಿತ್ರ), ಕೃಷ್ಣ ನಾಯ್ಕ ಹಾಗೂ ರಾಘವೇಂದ್ರ ಗೆಲುವಿಗಾಗಿ ಹೋರಾಟ ಪ್ರಜಾವಾಣಿ ಚಿತ್ರಗಳು/ಬಿ.ಎಂ. ಕೇದಾರನಾಥ
ಕರ್ನಾಟಕ ಕುಸ್ತಿ ಹಬ್ಬದಲ್ಲಿ ಭರವಸೆ ಮೂಡಿಸಿದ ಸೋನಿಯಾ ಜಾಧವ (ನೀಲಿ ಪೋಷಾಕು) ಮಮತಾ ಪೈಪೋಟಿ (ಎಡಚಿತ್ರ), ಬಾಲಕಿಯರ ವಿಭಾಗದ ಹಣಾಹಣಿಯಲ್ಲಿ ಶ್ವೇತಾ (ಕೆಂಪು ಪೋಷಾಕು) ಸೃಷ್ಟಿ ಸೆಣಸಾಟದ ಚಿತ್ರಣ(ಮಧ್ಯದ ಚಿತ್ರ), ಕೃಷ್ಣ ನಾಯ್ಕ ಹಾಗೂ ರಾಘವೇಂದ್ರ ಗೆಲುವಿಗಾಗಿ ಹೋರಾಟ ಪ್ರಜಾವಾಣಿ ಚಿತ್ರಗಳು/ಬಿ.ಎಂ. ಕೇದಾರನಾಥ   

ಧಾರವಾಡದಲ್ಲಿ ಮೂರು ದಿನ ನಡೆದ ಕರ್ನಾಟಕ ಕುಸ್ತಿ ಹಬ್ಬ ಕುಸ್ತಿ ಪರಂಪರೆ ನೆನಪಿಸಿಕೊಟ್ಟಿತು. ಹಬ್ಬದ ನೆಪದಲ್ಲಿ ಹಿರಿಯ ಪೈಲ್ವಾನರು ಭೇಟಿಯಾಗಿ ನೆನಪುಗಳನ್ನು ಹಂಚಿಕೊಂಡರು. ಟೂರ್ನಿಯ ಯಶಸ್ಸಿಗಾಗಿ ನೂರಾರು ಜನ ಹಗಲಿರುಳು ದುಡಿದರು. ಜಿಲ್ಲೆಯಲ್ಲಿ ಕುಸ್ತಿಯ ವೈಭವ ಮರುಕಳಿಸಲು ಹಬ್ಬದ ನೆನಪುಗಳು ವೇದಿಕೆಯಾದವು. ಇಂತಹ ಕುಸ್ತಿ ಹಬ್ಬದ ಮಾತುಗಳನ್ನು ಪ್ರಮೋದ್‌ ಹೀಗೆ ನಿರೂಪಿಸಿದ್ದಾರೆ

ಎಲ್ಲರಿಗೂ ನಮಸ್ಕಾರ,

ಧಾರವಾಡದ ಕರ್ನಾಟಕ ಕಾಲೇಜು ಮೈದಾನದಲ್ಲಿ ಮೂರು ದಿನಗಳಿಂದ ನನ್ನನ್ನು ತುಂಬಾ ಪ್ರೀತಿ, ಗೌರವದಿಂದ ನಡೆಸಿಕೊಂಡಿದ್ದೀರಿ. ದೇಶಿ ಕ್ರೀಡೆಯ ಮಹಾರಾಜ ಅಂತ ಮೊದಲಿನಿಂದಲೂ ನನ್ನನ್ನು ಕರೆಯುತ್ತಲೇ ಬಂದಿದ್ದೀರಿ. ಆ ಘನತೆ ಕುಸ್ತಿ ಹಬ್ಬದ ಸಡಗರದಲ್ಲಿ ನೂರು ಪಟ್ಟು ಹೆಚ್ಚಾಗಿದೆ. ನನ್ನ ಗೌರವವೂ ಇಮ್ಮಡಿಗೊಂಡಿದೆ.

ADVERTISEMENT

ಹಬ್ಬ ಮೂರು ದಿನಗಳಾದರೂ ನೂರಾರು ನೆನಪುಗಳು ನನ್ನ ಮನದ ಬುತ್ತಿಯಲ್ಲಿ ಗಟ್ಟಿಯಾಗಿ ನೆಲೆಯೂರಿವೆ. ನನ್ನ ಹೆಸರಿನ ಟೂರ್ನಿಯನ್ನು ಹಬ್ಬ ಎಂದು ಕರೆದು ಊರಿನ ಜನರೆಲ್ಲ ಸಂಭ್ರಮಿಸುವಂತೆ ಮಾಡಿದ್ದೀರಿ. ರಾಜ, ಮಹಾರಾಜರಕಾಲದಲ್ಲಿ ಕುಸ್ತಿಗೆ ಮತ್ತು ಪೈಲ್ವಾನರಿಗೆ ಸಿಗುತ್ತಿದ್ದ ಗೌರವವನ್ನು ಹಬ್ಬದ ನೆಪದಲ್ಲಿ ನನಗೆ ಮರಳಿ ತಂದುಕೊಟ್ಟಿದ್ದೀರಿ.

ಹಬ್ಬದ ದಿನಗಳಂದು ಹಿರಿಯ, ಕಿರಿಯ ಪೈಲ್ವಾನರೆಲ್ಲರೂ ತಲೆಗೆ ಪೇಟಾ ಸುತ್ತಿಕೊಂಡು ಹಳೆಯ ಕಾಲದ ಪೈಲ್ವಾನರು ಯಾವ ರೀತಿ ಇರುತ್ತಿದ್ದರು ಎನ್ನುವುದು ತೋರಿಸಿಕೊಟ್ಟರು. ಭವಾನಿ ಆರ್ಟ್ಸ್‌ ತಂಡದ ಸದಸ್ಯರಾದ ಪ್ರೀತೇಶ ಜಾಧವ, ಪ್ರಸನ್ನ ಜಾಧವ, ಮಹೇಶ ಸುಲಾಕೆ, ಕಾರ್ತೀಕ್ ಸಾಕ್ರೆ, ಪ್ರಸನ್ನ ಜೋಶಿ, ಸೊರಬ ಜಾಧವ್, ಪ್ರಣೀತ, ರೋಹನ ಮತ್ತು ನಾಗರಾಜ ಸುಣಗಾರ... ಹೀಗೆ ಅನೇಕ ಯುವಕರು ಸುಮಾರು ಎರಡು ಸಾವಿರ ಜನರಿಗೆ ಪೇಟಾ ತೊಡಿಸಿ ಸಂಭ್ರಮಿಸಿದರು. ಇದು ಹಬ್ಬದ ಖುಷಿ ಹೆಚ್ಚಿಸಿತು.

ಕುಸ್ತಿ ಹಬ್ಬದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಪೈಲ್ವಾನರನ್ನು ನೋಡಿದಾಗ ನನ್ನಲ್ಲಿ ಹೊಸ ಆಶಾಭಾವ ಮೂಡಿದೆ. ಅದರಲ್ಲಿ 14 ಮತ್ತು 17 ವರ್ಷದ ಒಳಗಿನ ಮಕ್ಕಳು ಗೆಲ್ಲಲೇಬೇಕು ಎನ್ನುವ ಛಲದಲ್ಲಿ ಹೋರಾಟ ಮಾಡಿದ ರೀತಿ, ಅವರಲ್ಲಿರುವ ಸಾಹಸ ಮನೋಭಾವ ನನ್ನಲ್ಲಿ ಹೊಸ ಭರವಸೆ ಹುಟ್ಟಿಸಿದೆ. ಮಣ್ಣಿನ ಕುಸ್ತಿ ಘನತೆಯನ್ನು ಅವರು ಎತ್ತಿ ಹಿಡಿಯುತ್ತಾರೆ ಎನ್ನುವ ನಂಬಿಕೆ ಮೂಡಿದೆ. 14 ವರ್ಷದ ಒಳಗಿನವರ ವಿಭಾಗದಲ್ಲಿ ಎಂಟು ಹಾಗೂ ಒಂಬತ್ತು ವರ್ಷದ ಮಕ್ಕಳು ಕೂಡ ಶಕ್ತಿ ಮೀರಿ ಹೋರಾಟ ಮಾಡಿದರು. ಕುಸ್ತಿಯಲ್ಲಿ ಪಾಲ್ಗೊಂಡವರಲ್ಲಿ ಈ ವಯಸ್ಸಿನ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಿದ್ದು ವಿಶೇಷ. ದೈಹಿಕವಾಗಿ ಬಲಿಷ್ಠರಾಗಿರುವ ಸಿದ್ಧಿ ಜನಾಂಗದ ಪೈಲ್ವಾನರುಅತ್ಯಂತ ವೃತ್ತಿಪರವಾಗಿ ಹೋರಾಟ ಮಾಡಿದ ರೀತಿ ಮೆಚ್ಚುವಂತದ್ದಾಗಿತ್ತು.

ಹಬ್ಬದ ಸಡಗರದಲ್ಲಿ ಮುಳುಗಿ ಹೋಗಿದ್ದ ನನಗೆ ಒಂದಷ್ಟು ವಾಸ್ತವ ವಿಷಯಗಳು ಆತಂಕವನ್ನುಂಟು ಮಾಡಿದವು. ಆಧುನಿಕ ಯುಗಾದ ಭರಾಟೆಯಲ್ಲಿ ಮ್ಯಾಟ್‌ ಕುಸ್ತಿ ಮುಂಚೂಣಿಯಲ್ಲಿದೆ. ಮ್ಯಾಟ್‌ ಮೇಲೆ ಪಂದ್ಯಗಳನ್ನು ಆಯೋಜಿಸಿ ಅನೇಕರು ಹಣವನ್ನೂ ಗಳಿಸುತ್ತಿದ್ದಾರೆ. ಇದು ಬದಲಾದ ಕಾಲದ ಅನಿವಾರ್ಯತೆಯಂಬುದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಆದರೆ, ಭಾರತದ ಸಾಂಪ್ರದಾಯ ಮತ್ತು ಪರಂಪರೆ ಮರೆತು ಹೋಗಬಾರದಲ್ಲವೇ? ನಾವು ಭಾರತೀಯರು, ನಮ್ಮ ಸಂಸ್ಕೃತಿಯನ್ನು ಮೊದಲಿನಿಂದಲೂ ಗೌರವಿಸುತ್ತಾ, ಆರಾಧಿಸುತ್ತಾ ಬಂದವರು.

ಇನ್ನು ನೂರು ವರ್ಷ ಕಳೆದ ಮೇಲೆ ಆಗಿನ ಮಕ್ಕಳು ಮಣ್ಣಿನ ಕುಸ್ತಿ ಎಂದರೇನು ಎಂದು ಪ್ರಶ್ನಿಸುವಂತೆ ಆಗಬಾರದಲ್ಲವೇ? ಅವರಿಗೂ ನಮ್ಮ ಕುಸ್ತಿ ಪರಂಪರೆ, ಪೈಲ್ವಾನರಿಗೆ ಸಿಗುತ್ತಿದ್ದ ಗೌರವ ಎಲ್ಲವೂ ಗೊತ್ತಾಗಬೇಕಲ್ಲವೇ? ಆದ್ದರಿಂದ ಆಧುನಿಕತೆಯ ಭರಾಟೆಯಲ್ಲಿ ನಾವೆಷ್ಟೇ ವೇಗವಾಗಿ ಓಡಿದರೂ ಪಾರಂಪರಿಕ ಕುಸ್ತಿಯನ್ನು ಜೊತೆಯಲ್ಲಿಟ್ಟುಕೊಂಡೇ ಸಾಗಬೇಕು.

ಜಿಲ್ಲೆಯಲ್ಲಿ ಗರಡಿ ಮನೆಗಳು ವಿನಾಶದ ಅಂಚಿಗೆ ತಲುಪಿವೆ, ಕೆಲ ಗರಡಿಗಳನ್ನು ಸಮುದಾಯ ಭವನಗಳನ್ನಾಗಿ ಬದಲಾವಣೆ ಮಾಡಲಾಗುತ್ತಿದೆ ಎನ್ನುವ ವಿಷಯವನ್ನು ಹಬ್ಬದ ಖುಷಿಯ ನಡುವೆಯೂ ಹಿರಿಯ ಪೈಲ್ವಾನರು ಅತ್ಯಂತ ಬೇಸರದಿಂದ ಹೇಳಿದರು. ಜಿಲ್ಲೆಯ ಸುತ್ತಮುತ್ತಲೂ, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಸುತ್ತಲಿನ ದುಸಗಿ, ಅರ್ಲವಾಡ, ಸಾತ್ನಳ್ಳಿ, ಬುಜರ ಕಂಚನಳ್ಳಿ, ಮೊದಲಗೇರಾ, ರಾಮಾಪುರ, ತಟ್ಟಿಗೇರಾ, ಜತಗಾ, ಮಂಗಳವಾಡ, ಮುರ್ಕವಾಡ, ಬೆಳವಟಗಿ, ತತ್ವಣಗಿ, ಜೋಗನಕೊಪ್ಪ, ಹುಣಸವಾಡ ಮತ್ತು ಖುರ್ದ ಕಂಚನಳ್ಳಿ ಗ್ರಾಮಗಳಲ್ಲಿ ಕುಸ್ತಿ ಪರಂಪರೆಯ ಪ್ರತೀಕವಾಗಿ ಗರಡಿ ಮನೆಗಳು ಉಳಿದುಕೊಂಡಿವೆ. ಅವುಗಳನ್ನು ಉಳಿಸುವ ಕೆಲಸ ಎಲ್ಲರೂ ಮಾಡಬೇಕಿದೆ.

ಹಬ್ಬವನ್ನು ನೋಡಲು ದಿನವೂ ಸಾವಿರಾರು ಸಂಖ್ಯೆಯಲ್ಲಿ ಜನ ಬಂದರು. ರಾಜ್ಯ ಸರ್ಕಾರ, ಧಾರವಾಡ ಜಿಲ್ಲಾಡಳಿತ, ಕುಸ್ತಿ ಪ್ರೇಮಿಗಳು, ಹಿರಿಯ ಪೈಲ್ವಾನರು ಮತ್ತು ಉಸ್ತಾದ್‌ಗಳು ಸಾಕಷ್ಟು ಜವಾಬ್ದಾರಿ ಹೊತ್ತು ಹಬ್ಬದ ಯಶಸ್ಸಿಗೆ ಸಹಕರಿಸಿದರು. ಊಟ, ಶೌಚಾಲಯ, ಟ್ರ್ಯಾಕ್‌ ಶೂಟ್‌ ವಿತರಿಸುವಲ್ಲಿ ವಿಳಂಬವಾದರೂ ಸಮಸ್ಯೆ ಗಮನಕ್ಕೆ ಬಂದ ಕೂಡಲೇ ಪರಿಹರಿಸಿದಿರಿ.

ಪಂಜಾಬ್‌, ಹರಿಯಾಣ, ದೆಹಲಿ, ಮಹಾರಾಷ್ಟ್ರ, ಅಜರ್‌ ಬೈಜಾನ್‌, ಇರಾನ್‌ ಹೀಗೆ ದೂರದ ಊರುಗಳ ಪೈಲ್ವಾನರು ಹಬ್ಬದಲ್ಲಿ ಪಾಲ್ಗೊಂಡರು. ಕರ್ನಾಟಕ ಕುಸ್ತಿ ಹಬ್ಬವನ್ನು ಅವರೂ ಅಪ್ಪಿಕೊಂಡರು. ಮಣ್ಣಿನ ಅಖಾಡದಲ್ಲಿ, ಗರಡಿ ಮನೆಗಳಲ್ಲಿ ಅಭ್ಯಾಸ ಮಾಡುವ ನಮ್ಮ ಪರಂಪರೆಗೆ ವಿದೇಶಿ ಕುಸ್ತಿಪಟುಗಳು ಮಾರು ಹೋದರು. ಇದರಿಂದ ನಾನು ಧನ್ಯನಾದೆ.

ಪ್ರತಿ ವರ್ಷ ಒಂದೊಂದು ಜಿಲ್ಲೆಯಲ್ಲಿ ಕುಸ್ತಿ ಹಬ್ಬವನ್ನು ಆಯೋಜಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಈ ನಿಯಮದ ಪ್ರಕಾರ ಧಾರವಾಡದಲ್ಲಿ ಮತ್ತೆ ಹಬ್ಬ ನಡೆಯಲು ಇನ್ನೂ 30 ವರ್ಷ ಕಾಯಬೇಕು. ಆ ವೇಳೆಗೆ ಪರಂಪರೆಯ ಪ್ರತೀಕವಾದ ನನ್ನನ್ನು ಇತಿಹಾಸದ ಕಾಲಗರ್ಭದೊಳಗೆ ಹುದುಗಿಸಬೇಡಿ. ಈಗ ತೋರಿದ ಪ್ರೀತಿ ಮತ್ತು ಅಕ್ಕರೆಯನ್ನು ಆಗಲೂ ತೋರಿಸಿ. ನಾನಿನ್ನು ಹೋಗಿ ಬರುವೆ.

ಇಂತಿ ನಿಮ್ಮ ಪ್ರೀತಿಯ ಕರ್ನಾಟಕ ಕುಸ್ತಿ ಹಬ್ಬ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.