
ಹುಬ್ಬಳ್ಳಿ: ‘ನಗರದ ಜನತಾ ಬಜಾರ್‌ನಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಿದ ಸಂಕೀರ್ಣಕ್ಕೆ ಸ್ಥಳಾಂತರ ಆಗುವುದಿಲ್ಲ’ ಎಂದು ಬೀದಿ ಬದಿ ವ್ಯಾಪಾರಸ್ಥರು, ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಂಡರು.
ಜನತಾ ಬಜಾರ್ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮಹೇಶ ಹಂಜಗಿ ಮಾತನಾಡಿ, ‘ಹಲವಾರು ವರ್ಷಗಳಿಂದ ಸರ್ಕಾರ ಸೂಚಿಸಿದ ಸ್ಥಳದಲ್ಲೇ ಕಾನೂನು ಬದ್ಧವಾಗಿ ವ್ಯಾಪಾರ ಮಾಡುತ್ತಿದ್ದೇವೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಿದ ಕಟ್ಟಡಕ್ಕೆ ಸ್ಥಳಾಂತರ ಆಗಲು ಸಾಧ್ಯವಿಲ್ಲ’ ಎಂದು ಹೇಳಿದರು.
‘ಕಟ್ಟಡದೊಳಗೆ ವ್ಯಾಪಾರ ನಡೆಸಲು 182 ವ್ಯಾಪಾರಸ್ಥರಿಗೆ ಸೂಚಿಸಲಾಗಿದೆ. ಇವರು ಯಾರೆಂಬ ಸ್ಪಷ್ಟತೆ ಇಲ್ಲ. ಯಾವ ಆಧಾರದ ಮೇಲೆ ಪಟ್ಟಿ ತಯಾರಿಸಲಾಗಿದೆ ಎಂಬುದೂ ಗೊತ್ತಿಲ್ಲ. ವಾಹನ ನಿಲುಗಡೆ ಸ್ಥಳದಲ್ಲಿ ವ್ಯಾಪಾರ ಮಾಡಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.
ನಗರ ವ್ಯಾಪಾರ ಸಮಿತಿ ಸದಸ್ಯ ಅನ್ವರ್ ಶಿರಹಟ್ಟಿ ಮಾತನಾಡಿ, ‘ಜನತಾ ಬಜಾರ್‌ನ ಬೀದಿ ಬದಿಯ 177 ಕಟ್ಟೆಗಳಲ್ಲಿ ವ್ಯಾಪಾರಸ್ಥರು ವಹಿವಾಟು ನಡೆಸುತ್ತಿದ್ದಾರೆ. ಕಟ್ಟಡದೊಳಗೆ 53 ಕಟ್ಟೆಗಳನ್ನು ವ್ಯಾಪಾರಸ್ಥರಿಗೆ ಹಂಚಿಕೆ ಮಾಡಲಾಗಿದೆ. ಉಳಿದ ವ್ಯಾಪಾರಸ್ಥರು ಎಲ್ಲಿ ವ್ಯಾಪಾರ ಮಾಡಬೇಕು?’ ಎಂದು ಕೇಳಿದರು.
ಸಮಿತಿ ಸದಸ್ಯ ಇಸ್ಮಾಯಿಲ್ ಮಾತನಾಡಿ, ‘ಬೀದಿ ಬದಿ ವ್ಯಾಪಾರವನ್ನೇ ನಂಬಿಕೊಂಡು ಸಾಕಷ್ಟು ಕುಟುಂಬಗಳು ಜೀವನ ನಡೆಸುತ್ತಿವೆ. ಕಟ್ಟಡದೊಳಗೆ ಸ್ಥಳಾಂತರ ಆಗುವಂತೆ ಪಾಲಿಕೆಯಿಂದ ತೊಂದರೆ ನೀಡಬಾರದು’ ಎಂದು ಕೋರಿದರು.
ಮುಖಂಡ ಟೀನಿವಾಲೆ ಮಾತನಾಡಿ, ‘ವ್ಯಾಪಾರ ಸರಿಯಾಗಿ ನಡೆಯದ ಸ್ಥಳಕ್ಕೆ ಹೋಗಲು ಸಾಧ್ಯವಿಲ್ಲ. ಒತ್ತಾಯ ಮಾಡಿದರೆ ಯಾವುದೇ ಹೋರಾಟಕ್ಕೂ ಸಿದ್ಧ’ ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಸೋಮಣ್ಣ ಹಂಜಗಿ, ಇಮಾಮ್ ಶಿರಹಟ್ಟಿ, ಬಿ.ಕೆ. ನರೇಂದ್ರ, ಸುರೇಶ ವಜ್ರಣ್ಣವರ, ತ್ರಿಪಾಲ್ ಪಟೇಲ, ಬೆಳ್ಳಿಪ್ರಸಾದ, ಹುಸೇನ್ ಭಾಗವಾನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.