ADVERTISEMENT

ಸಮಾನತೆ ಸಿಕ್ಕಾಗ ಸ್ವಾತಂತ್ರ್ಯಕ್ಕೆ ಅರ್ಥ: ಸಚಿವ ಜಾರಕಿಹೊಳಿ ಹೇಳಿಕೆ

ಶಾಂತಿ–ಸೌಹಾರ್ದ ಸಂದೇಶ ಸಾರಿದ ಸೂಫಿ ಸಂತರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 2:39 IST
Last Updated 27 ಜುಲೈ 2025, 2:39 IST
<div class="paragraphs"><p>ಹುಬ್ಬಳ್ಳಿಯಲ್ಲಿ ನಡೆದ ಸೂಫಿ ಸಂತರ ಸಮಾವೇಶ</p></div>

ಹುಬ್ಬಳ್ಳಿಯಲ್ಲಿ ನಡೆದ ಸೂಫಿ ಸಂತರ ಸಮಾವೇಶ

   

ಹುಬ್ಬಳ್ಳಿ: ‘ಸಮಾನ ಶಿಕ್ಷಣ, ಹಕ್ಕು, ಅವಕಾಶ ಸಿಕ್ಕಾಗ ಮಾತ್ರ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ. ಹಿಂದೂ ಮುಸ್ಲಿಮರು ಒಂದಾಗಿ ಹೋರಾಟ ಮಾಡಿದಾಗ ಯಶಸ್ಸು‌ ಗಳಿಸಲು ಸಾಧ್ಯ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಹಳೇ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಸೂಫಿ ಸಂತರ ಸೌಹಾರ್ದ ವೇದಿಕೆಯು ಶನಿವಾರ ಏರ್ಪಡಿಸಿದ್ದ ಸೂಫಿ ಸಂತರ ಸಮಾವೇಶದಲ್ಲಿ ಅವರು ಮಾತನಾಡಿದರು.

ADVERTISEMENT

‘ದೇಶ ಸ್ವಾತಂತ್ರ್ಯಗೊಳ್ಳಲು ಎಲ್ಲ ಸಮುದಾಯದವರು ಹೋರಾಟ ಮಾಡಿದರು. ಹಾಗಾಗಿ, ನಾವೆಲ್ಲ ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು. ಸಮಾಜದಲ್ಲಿ ಭಾವೈಕ್ಯ ನೆಲೆಸಬೇಕು.‌ ಅಂಬೇಡ್ಕರ್, ಬಸವೇಶ್ವರರ ಅನುಯಾಯಿಗಳು ಒಂದಾಗಬೇಕು’ ಎಂದು ಕರೆ ನೀಡಿದರು.  

‘ಎಲ್ಲ ಸಮಸ್ಯೆಗಳಿಗೆ ಅಂಬೇಡ್ಕರ್ ಚಿಂತನೆಗಳಲ್ಲಿ ಪರಿಹಾರ ಇದೆ. ಅಂಬೇಡ್ಕರ್, ಬಸವ ಜಯಂತಿಯಲ್ಲಿ ಮುಸ್ಲಿಮರು ಭಾಗವಹಿಸಿ, ನಿಮ್ಮ ಕಾರ್ಯಗಳಲ್ಲಿ ನಾವು ಭಾಗವಹಿಸುತ್ತೇವೆ. ಒಂದೇ ವೇದಿಕೆಯಲ್ಲಿ ಹೊಸ ವಿಚಾರಗಳ‌ ಚರ್ಚೆ ನಡೆಯಲಿ’ ಎಂದರು. 

‘ಭಾವೈಕ್ಯ ಸಮಾಜ ಕಟ್ಟುವಲ್ಲಿ ಸೂಫಿ ಸಂತರು ಪ್ರಮುಖ ಪಾತ್ರ ವಹಿಸಿದ್ದಾರೆ‌. ಸರಿಯಾದ ದಿಕ್ಕಿನಲ್ಲಿ ಸಾಗಲು ಅವರ ಮಾರ್ಗದರ್ಶನ ಅವಶ್ಯ. ಎಲ್ಲರನ್ನೂ ಬೆಸೆಯುವ ಇಂತಹ ಸಮ್ಮೇಳನಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಯಬೇಕು’ ಎಂದು ಹೇಳಿದರು.

‘ವಕ್ಫ್ ಮಂಡಳಿಯಿಂದ ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ₹4 ಸಾವಿರ ಕೋಟಿ ಅನುದಾನ ನೀಡಿದ್ದು, ಅದನ್ನು ಸದುಪಯೋಗ ಮಾಡಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಡಾಕ್ಟರ್, ಎಂಜಿನಿಯರ್ ಮಾಡಬೇಕು’ ಎಂದು ಸಲಹೆ ನೀಡಿದರು.

ವಿಧಾನ ಪರಿಷತ್‌ ಮುಖ್ಯ ಸಚೇತಕ ಸಲೀಂ ಅಹ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ದೇಶದ ಅಭಿವೃದ್ಧಿಗೆ ಕೋಮು ಸಾಮರಸ್ಯ ಅವಶ್ಯ. ಎಲ್ಲರನ್ನೂ ಪ್ರೀತಿಯಿಂದ ಗೆಲ್ಲಬೇಕು. ದ್ವೇಷ ಬಿಡಬೇಕು ಎಂಬುದು ಈ ಸಮಾವೇಶದ ಸಂದೇಶ’ ಎಂದರು.

‘ಈ ಭಾಗದ ಅನೇಕ ಸೂಫಿ ಸಂತರು ಕೋಮು ಸೌಹಾರ್ದ ನೆಲೆಸಲು ವಿಶೇಷ ಕೊಡುಗೆ ನೀಡಿದ್ದಾರೆ. ನಾವೆಲ್ಲ ಒಂದು ಎಂಬ ಸಂದೇಶ ಸಾರಿದ್ದಾರೆ. ಅದನ್ನು ಪಾಲಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಇದು ಎಲ್ಲ ಧರ್ಮಗುರುಗಳ ಸಂಗಮ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು’ ಎಂದು ಅಭಿಪ್ರಾಯಪಟ್ಟರು.

ಸಚಿವ ಶಿವಾನಂದ ಪಾಟೀಲ ಮಾತನಾಡಿ, ಬ್ರಿಟಿಷರು ಸಮಾಜದಲ್ಲಿ ಜಾತಿ ಬೀಜವನ್ನು ಬಿತ್ತಿದ್ದಾರೆ. ಅದನ್ನು ಕಿತ್ತೊಗೆಯಬೇಕಿದೆ. ಅಧಿಕಾರಕ್ಕಾಗಿ ಯಾರು ಏನು ಬೇಕಾದರೂ ಮಾತನಾಡುತ್ತಾರೆ. ಇಂತಹ ಸಮಾವೇಶದ ಮೂಲಕ ಅಂತವರನ್ನು ನಿಯಂತ್ರಿಸುವ ಕೆಲಸ ಆಗಬೇಕು ಎಂದರು.

ಹುಟ್ಟಿದ ನಂತರ ಮನುಷ್ಯತ್ವದಿಂದ ನಡೆದಾಗ ಮಾತ್ರ ಎಲ್ಲರೂ ಸೂಫಿಗಳು, ಸಂತರು ಆಗುತ್ತಾರೆ. ಇದು ಅಧಿಕಾರಕ್ಕಾಗಿ ನಡೆದ ಸಮಾವೇಶ ಅಲ್ಲ. ಸರ್ಕಾರ ಎಲ್ಲ ಜಾತಿ, ಧರ್ಮಗಳ ಪರವಾಗಿ ಇದೆ ಎಂದು ಹೇಳಿದರು.

ಸವಣೂರು ದೊಡ್ಡಹುಣಸೆ ಕಲ್ಮಠದ ಚನ್ನಬಸವ ಸ್ವಾಮೀಜಿ ಸೇರಿದಂತೆ ಇಸ್ಲಾಂ ಧರ್ಮ ಗುರುಗಳು ಸಾನ್ನಿಧ್ಯ ವಹಿಸಿದ್ದರು.

ಸಚಿವ  ರಹೀಂ‌ ಖಾನ್, ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್‌, ಹುಡಾ ಅಧ್ಯಕ್ಷ ಶಾಕೀರ ಸನದಿ, ಕಾಂಗ್ರೆಸ್‌ ಮುಖಂಡರಾದ ಜಿ.ಎಸ್.ಪಾಟೀಲ, ಅನಿಲಕುಮಾರ ಪಾಟೀಲ, ಇಮ್ರಾನ್ ಯಲಿಗಾರ, ಅಲ್ತಾಫ್ ಕಿತ್ತೂರ, ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್, ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್, ಪೊಲೀಸ್ ಕಮಿಷನರ್‌ ಎನ್. ಶಶಿಕುಮಾರ್ ಇದ್ದರು.

ಸಿದ್ಧಾರೂಢರು ನಡೆದಾಡಿದ ನೆಲದಲ್ಲಿ ಹಿಂದೂ–ಮುಸ್ಲಿಮರು ಸೌಹಾರ್ದದಿಂದ ಬದುಕುತ್ತಿದ್ದೇವೆ. ಒಗ್ಗಟ್ಟು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ.
– ಎನ್‌.ಎಚ್‌. ಕೋನರಡ್ಡಿ, ನವಲಗುಂದ ಶಾಸಕ
ಜಾತಿ ಧರ್ಮ ನಮ್ಮ ಮನೆಯ ಹೊಸ್ತಿಲ ಒಳಗಿರಬೇಕು. ಮನೆಯಿಂದ ಹೊರಬಂದರೆ ನಾವೆಲ್ಲ ಭಾರತ ದೇಶದ ಸುಪುತ್ರರಂತೆ ಬದುಕಬೇಕು
– ದಿಂಗಾಲೇಶ್ವರ ಸ್ವಾಮೀಜಿ, ಶಿರಹಟ್ಟಿ

‘ಧರ್ಮಗಳ ನಡುವೆ ಕಚ್ಚಾಟ ನಿಲ್ಲಲ್ಲಿ’

‘ರಾಷ್ಟ್ರ ಧರ್ಮ ಪಾಲನೆಗೆ ಆಗುವವರೆಗೂ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲವೆಂದು ಸೂಫಿಗಳು ಹೇಳಿದ್ದಾರೆ. ಧರ್ಮಗಳ ನಡುವೆ ಕಚ್ಚಾಟ ನಿಲ್ಲಬೇಕು. ಮಾನವರೆಲ್ಲ ಒಂದು ಎಂಬ ಏಕತೆ ಮೂಡಬೇಕು’ ಎಂದು ಶಿರಹಟ್ಟಿ ಭಾವೈಕ್ಯ ಪೀಠದ ಪಕ್ಕೀರ ದಿಂಗಾಲೇಶ್ವರ ಸ್ವಾಮೀಜಿ‌ ಹೇಳಿದರು.

ದೇಶದಲ್ಲಿ ಸೂಫಿ ಸಂತರು ಬಸವಾದಿ ಶರಣರು ಆಗಿ ಹೋಗದಿದ್ದರೆ ನದಿಗಳಲ್ಲಿ ನೀರಿನ ಬದಲು ರಕ್ತ ಹರಿಯುತ್ತಿತ್ತು. ಅವರು ಭಾವೈಕ್ಯದ ಸಂದೇಶ ಸಾರಿದ್ದಾರೆ. ಸೂಫಿ ಸಂತರು ಎಲ್ಲ ಧರ್ಮಗಳ ಕೊಂಡಿಯಂತೆ ಕೆಲಸ ಮಾಡಿದ್ದಾರೆ ಎಂದರು. ದ್ವೇಷ ಬಿಡು ಪ‍್ರೀತಿ ಮಾಡು ಎಂಬ ಸಂದೇಶವನ್ನು ಐದು ಶತಮಾನಗಳ ಹಿಂದೇ  ಫಕೀರೇಶ್ವರರು ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮೂಜಗಂ ಸ್ವಾಮೀಜಿ  ಹಿಂದೂ ಮುಸ್ಲಿಂ ಸೌಹಾರ್ದಕ್ಕೆ ಕೊಡುಗೆ ನೀಡಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.