
ಕಲಘಟಗಿ: ‘ಹಳಿಯಾಳ ಇಐಡಿ ಕಾರ್ಖಾನೆ ಹಾಗೂ ಕೋಣಕೇರಿ ಕಬ್ಬಿನ ಕಾರ್ಖಾನೆಯವರು ದರ ನಿಗದಿ ಪಡಿಸಿದೆ ಕಬ್ಬು ಕಟಾವು ಆರಂಭಿಸಿದ್ದಾರೆ’ ಎಂದು ಆರೋಪಿಸಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರು.
ಪಟ್ಟಣದ ಆಂಜನೇಯ ವೃತ್ತದ ಬಳಿ ಹುಬ್ಬಳ್ಳಿ– ಕಾರವಾರ ರಾಷ್ಟ್ರೀಯ ಹೆದ್ದಾರಿಯನ್ನು ಬುಧವಾರ ಎರಡು ತಾಸು ತಡೆದು ಪ್ರತಿಭಟಿಸಿ, ಕಾರ್ಖಾನೆ ವಿರುದ್ಧ ಘೋಷಣೆ ಕೂಗಿದರು.
ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಎತ್ತಿನಗುಡ್ಡ ಮಾತನಾಡಿ, ‘ಹಳಿಯಾಳದ ಕಾರ್ಖಾನೆಯವರು ಹಿಂದಿನ ವರ್ಷ ಕಬ್ಬು ಸಾಗಿಸಿದ ರೈತರಿಗೆ ₹26 ಕೋಟಿ ಬಾಕಿ ಉಳಿಸಿಕೊಂಡು ಹೈಕೋರ್ಟ್ ಮೊರೆ ಹೋಗಿದ್ದಾರೆ. ನ್ಯಾಯಾಲಯದಲ್ಲಿ ಅವರಿಗೆ ಛೀಮಾರಿ ಹಾಕಿದ್ದಾರೆ’ ಎಂದರು.
ರೈತ ಮುಖಂಡರಾದ ಉಳವಪ್ಪ ಬಳಿಗೇರ ಮಾತನಾಡಿ, ‘ರೈತರಿಗೆ ಮೋಸ ಮಾಡುತ್ತಿರುವ ಕಾರ್ಖಾನೆಯವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ’ ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ತಹಶೀಲ್ದಾರ್ ಬಸವರಾಜ ಹೊಂಕಣದವರ ಭೇಟಿ ನೀಡಿ, ಪರಿಶೀಲಿಸಿ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷ ಮಹೇಶ ಬೆಳಗಾಂವಕರ, ತಾಲ್ಲೂಕು ಅಧ್ಯಕ್ಷ ವಸಂತ ಡಾಕಪ್ಪನವರ, ಮಾಳಪ್ಪ ಹೊನ್ನಳ್ಳಿ, ಶಿವಪ್ಪ ತಡಸ, ಬಸನಗೌಡ ಸಿದ್ದನಗೌಡ್ರ ಇದ್ದರು.
ಪ್ರಕರಣ ದಾಖಲು
ಕೆಲವು ದಿನಗಳ ಹಿಂದೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕಬ್ಬು ಬೆಳೆಗಾರರು ಅಧಿಕಾರಿಗಳು ಹಾಗೂ ಕಾರ್ಖಾನೆಯವರ ಸಭೆ ನಡೆಸಿ ‘ಹಿಂದಿನ ಬಾಕಿ ಪಾವತಿಸಬೇಕು ಹಾಗೂ ಈ ವರ್ಷದ ದರ ನಿಗದಿ ಪಡಿಸಿ ಕಟಾವು ಮಾಡಿಸಿ’ ಎಂದು ಸೂಚಿಸಿದ್ದರು. ‘ಆದರೆ ಈ ನಿಯಮ ಪಾಲನೆ ಮಾಡದೇ ಕಾರ್ಮಿಕರ ಗ್ಯಾಂಗ್ ಕಳುಹಿಸಿ ಕಬ್ಬು ಕಟಾವು ಆರಂಭಿಸಿದ್ದಾರೆ’ ಎಂದು ಆರೋಪ ಕೇಳಿಬಂದಿದೆ.
ರೈತರ ಹಾಗೂ ಕಾರ್ಖಾನೆ ನಡುವೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಹಳಿಯಾಳದ ಹುಲ್ಲಟ್ಟಿ ಕಾರ್ಖಾನೆಯ ರಮೇಶ ರೆಡ್ಡಿ ಶಂಕರ ಅಗಡಿ ಹಾಗೂ ಶಿಗ್ಗಾವಿಯ ಕೋಣಕೇರಿ ಕಾರ್ಖಾನೆಯ ಮಂಜುನಾಥ ಲಕ್ಷ್ಮಣ ಎಂಬುವವರ ವಿರುದ್ಧ ಕಲಘಟಗಿ ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.