ADVERTISEMENT

ಕಲಾ ಶ್ರೀಮಂತಿಕೆ; ಸೌಕರ್ಯದ ಬಡತನ

ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ ಹುಬ್ಬಳ್ಳಿ ತಾಲ್ಲೂಕಿನ ಸುಳ್ಳ ಗ್ರಾಮ

ಗೋವರ್ಧನ ಎಸ್‌.ಎನ್‌.
Published 16 ನವೆಂಬರ್ 2022, 4:05 IST
Last Updated 16 ನವೆಂಬರ್ 2022, 4:05 IST
ಹುಬ್ಬಳ್ಳಿ ತಾಲ್ಲೂಕಿನ ಸುಳ್ಳ ಗ್ರಾಮದಲ್ಲಿ ಜಲ ಜೀವನ್ ಮಿಷನ್‌ನಡಿ ಮನೆ ಮನೆಗೆ ನಳ ಸಂಪರ್ಕ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದೆ
ಹುಬ್ಬಳ್ಳಿ ತಾಲ್ಲೂಕಿನ ಸುಳ್ಳ ಗ್ರಾಮದಲ್ಲಿ ಜಲ ಜೀವನ್ ಮಿಷನ್‌ನಡಿ ಮನೆ ಮನೆಗೆ ನಳ ಸಂಪರ್ಕ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದೆ   

ಹುಬ್ಬಳ್ಳಿ: ನಗರದಿಂದ ಕೇವಲ 12 ಕಿ.ಮೀ. ದೂರವಿರುವ ಗ್ರಾಮ ಸುಳ್ಳ. ಜಿಲ್ಲೆಯಲ್ಲಿಯೇ ಅತಿಹೆಚ್ಚು ಜಾನಪದ ಕಲಾವಿದರನ್ನು ಹೊಂದಿರುವುದು ಗ್ರಾಮದ ವಿಶೇಷ. ಜಾನಪದ ಕಲಾವಿದರಿಂದ ಅಲ್ಲದೇ, ಇಲ್ಲಿರುವ ಸಮಸ್ಯೆಗಳಿಂದಲೂ ಗಮನ ಸೆಳೆದಿದೆ.

ಸುಮಾರು ಒಂದು ಸಾವಿರ ಕಲಾವಿದರು ಸೋಬಾನೆ ಪದ, ಜಗ್ಗಲಗಿ, ಜಾನಪದ ಹಾಡುಗಾರಿಕೆಗೆ ಹೆಸರಾಗಿದ್ದಾರೆ. ‘ಆಕಸ್ಮಿಕ’ ಚಿತ್ರದಲ್ಲಿ ಡಾ. ರಾಜ್‌ಕುಮಾರ್‌ ಅವರು ಹಾಡಿ, ಕುಣಿದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡಿನಲ್ಲಿ ಕಾಣಿಸಿಕೊಳ್ಳುವ ಜಗ್ಗಲಗಿ ತಂಡವೂ ಈ ಗ್ರಾಮದ್ದೇ. ಸಾಂಸ್ಕೃತಿಕ ಕ್ಷೇತ್ರಕ್ಕೆ ಸುಳ್ಳದ ಕೊಡುಗೆ ಅಪಾರ.

‘200ಕ್ಕೂ ಹೆಚ್ಚು ಕೊಳವೆ ಬಾವಿಗಳು ಇರುವುದರಿಂದ ತರಕಾರಿ ಬೆಳೆ ಪ್ರಧಾನವಾಗಿದೆ. ಮುಂಗಾರಿನಲ್ಲಿ ಹೆಸರು, ಹಿಂಗಾರಿನಲ್ಲಿ ಕಡಲೆ ಬೆಳೆಯುತ್ತಾರೆ. ಸುತ್ತಲಿನ ಗ್ರಾಮಗಳಿಗೆ ಲಾವಣಿಗೆ ಕೆಲಸಕ್ಕೂ ತೆರಳುತ್ತಾರೆ. ಇಲ್ಲಿ ಕೈಗಾರಿಕೆಗಳಿಲ್ಲ. ಹುಬ್ಬಳ್ಳಿ ಸೇರಿದಂತೆ ವಿವಿಧೆಡೆ ಕೆಲಸಕ್ಕೆ ತೆರಳುವ ಮಂದಿಯ ಸಂಖ್ಯೆಯೂ ಅಧಿಕವಾಗಿದೆ’ ಎಂದು ಗ್ರಾಮದ ನಿವಾಸಿ ಮಲ್ಲಿಕಾರ್ಜುನ ಶಿವಳ್ಳಿ ಮಾಹಿತಿ ನೀಡಿದರು.

ADVERTISEMENT

‘ಕಲ್ಮೇಶ್ವರ ಹಾಗೂ ಸಿದ್ಧರಾಮೇಶ್ವರ ದೇವಸ್ಥಾನಗಳು ಪ್ರಖ್ಯಾತವಾಗಿವೆ. ಪ್ರತಿ ಮನೆಯಲ್ಲಿ ಕಲ್ಲಪ್ಪ ಇಲ್ಲವೇ ಸಿದ್ಧರಾಮ ಎಂಬ ಹೆಸರಿನವರು ಸಿಗುತ್ತಾರೆ. ಶ್ರಾಣ ಮಾಸದ ಕೊನೆ ಸೋಮವಾರ ಸಿದ್ಧರಾಮ ದೇವರ ಅಡ್ಡಪಲ್ಲಕ್ಕಿ ಉತ್ಸವ ನಡೆದರೆ, ಕಲ್ಲಪ್ಪಜ್ಜನ ಜಾತ್ರೆ ಏಪ್ರಿಲ್‌ ತಿಂಗಳಲ್ಲಿ ನಡೆಯುತ್ತದೆ. 65 ಅಡಿ ಎತ್ತರದ ತೇರು ಈ ಹಿಂದೆ ಆಕರ್ಷಣೀಯ
ವಾಗಿತ್ತು. ಕಾಲಕ್ರಮೇಣ ತೇರಿನ ಎತ್ತರ ಕಡಿಮೆಯಾಗುತ್ತಿದೆ’ ಎಂದರು.

ಎಸ್‌ಎಸ್‌ಎಲ್‌ಸಿ ಬಳಿಕ ಹುಬ್ಬಳ್ಳಿಗೆ: ‘ಗ್ರಾಮದಲ್ಲಿ ಎಸ್‌ಎಸ್‌ಎಲ್‌ಸಿವರೆಗೆ ಕಲಿಯಲು ಶಾಲೆಗಳಿವೆ. ಬಸ್‌ ಸೌಕರ್ಯ ಸಮರ್ಪಕವಾಗಿರುವ ಕಾರಣ ಉನ್ನತ ಶಿಕ್ಷಣಕ್ಕೆ ಹುಬ್ಬಳ್ಳಿ ತೆರಳುತ್ತಾರೆ. 7 ವಾರ್ಡ್‌
ಗಳಲ್ಲೂ ಅಂಗನವಾಡಿ ಕೇಂದ್ರಗಳಿವೆ. ಇಲ್ಲಿನ ಕೆರೆಯಲ್ಲಿ ನೀರಿದ್ದರೂ ಬಳಕೆಗೆ ಯೋಗ್ಯವಲ್ಲ. ಧರ್ಮಸ್ಥಳ ಗ್ರಾಮಾಭಿ
ವೃದ್ಧಿ ಯೋಜನೆಯಿಂದ ಸ್ವಚ್ಛ ಮಾಡ
ಲಾಗಿತ್ತು. ಮತ್ತೆ ಮಲಿನಗೊಂಡಿದೆ. ಕುಡಿಯುವ ನೀರಿಗಾಗಿ ಹೋರಾಟವೇ ನಡೆಸಬೇಕಾಯಿತು. ಅದರ ಫಲವಾಗಿ ಸದ್ಯ, ಸಾರ್ವಜನಿಕ ನಳದಲ್ಲಿ ಎರಡು ದಿನಕ್ಕೊಮ್ಮೆ ನೀರು ಬಿಡುತ್ತಾರೆ. ಮನೆ ಬಳಕೆಗೆ ಕೊಳವೆ ಬಾವಿ ನೀರೇ ಗತಿ’ ಎಂದು ಸಮಸ್ಯೆಗಳನ್ನೂ ಬಿಚ್ಚಿಟ್ಟರು.

ಸರ್ಕಾರಿ ಆಸ್ಪತ್ರೆ ಸುಧಾರಣೆ ಅವಶ್ಯ: ‘ಸರ್ಕಾರಿ ಆಸ್ಪತ್ರೆಯಲ್ಲದೆ, ಮೂರು ಖಾಸಗಿ ಆಸ್ಪತ್ರೆಗಳೂ ಇವೆ. ಸರ್ಕಾರಿ ಆಸ್ಪತ್ರೆ ಸಾಕಷ್ಟು ಸುಧಾರಣೆ ಕಾಣಬೇಕಿದೆ. ತುರ್ತು ಸಮಯದಲ್ಲಿ ಹುಬ್ಬಳ್ಳಿಗೇ ಹೋಗಬೇಕಾಗಿದೆ’ ಎಂಬುದು ಗ್ರಾಮಸ್ಥರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.