ADVERTISEMENT

ಧಾರವಾಡದ ಕೆಎಸ್ಸಾರ್ಟಿಸಿ ಚಾಲಕನ ಸಂಶಯಾಸ್ಪದ ಸಾವು: ಶವ ಹೊರತೆಗೆದು ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 15:50 IST
Last Updated 21 ಜನವರಿ 2026, 15:50 IST
   

ಧಾರವಾಡ: ಎನ್‌ಡಬ್ಲ್ಯುಕೆಆರ್‌ಟಿಸಿಯಲ್ಲಿ ಚಾಲಕನಾಗಿದ್ದ ಅಣ್ಣಿಗೇರಿ ತಾಲ್ಲೂಕಿನ ಭದ್ರಾಪುರದ ಬಾಬಾಜಾನ್‌ ಚಿನ್ನೂರ (51) ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿ ಸಹೋದರ ಇಮ್ತಿಯಾಜ್‌ ಚಿನ್ನೂರು ದೂರು ದಾಖಲಿಸಿದ್ದರಿಂದ ಶವವನ್ನು ಹೊರತೆಗೆದು ಬುಧವಾರ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ವೈದ್ಯರ ತಂಡ, ಧಾರವಾಡ ಉಪನಗರ ಠಾಣೆ ಪೊಲಿಸರು, ಅಣ್ಣಿಗೇರಿ ತಹಶೀಲ್ದಾರ್‌ ಮಂಜುನಾಥ ದಾಸಪ್ಪನವರ ಅವರು ಪ್ರಕ್ರಿಯೆ ನಡೆಸಿದರು. ತಂಡವು ಮಾದರಿಗಳನ್ನು ಸಂಗ್ರಹಿಸಿದೆ.

‘ಧಾರವಾಡದ ಮಾಳಮಡ್ಡಿಯಲ್ಲಿ ವಾಸ ಇದ್ದ ಚಾಲಕ ಬಾಬಾಜಾನ್‌ ಅವರು 2025 ನವೆಂಬರ್‌ 11 ಮೃತಪಟ್ಟಿದ್ದರು. ಭದ್ರಾಪುರದ ಖಬರಸ್ತಾನದಲ್ಲಿ ಅಂತ್ಯಕ್ರಿಯೆ ನಡೆದಿತ್ತು. ಮರಣೋತ್ತರ ಪರೀಕ್ಷೆ ನಡೆಸಿರಲಿಲ್ಲ. ಬಾಬಾಜಾನ್‌ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿ ಸಹೋದರ ಇಮ್ತಿಯಾಜ್‌ ದೂರು ಸಲ್ಲಿಸಿದ್ದರು. ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಲಾಗಿತ್ತು. ಜ.21ರಂದು ಶವ ಹೊರ ತೆಗೆದು ಮರಣೋತ್ತರ ಪ‍ರೀಕ್ಷೆ ನಡೆಸಲು ಉಪವಿಭಾಗಾಧಿಕಾರಿ ಆದೇಶಿಸಿದ್ದರು. ಅದರಂತೆ ಪ್ರಕ್ರಿಯೆ ನಡೆಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ವೈದ್ಯರ ತಂಡವು ಮಾದರಿಗಳನ್ನು ಸಂಗ್ರಹಿಸಿದೆ. ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.