ADVERTISEMENT

ರಾಜ್ಯದಲ್ಲಿ ಹು–ಧಾ ಪಾಲಿಕೆಗೆ 2ನೇ ಸ್ಥಾನ

ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣ: ಪಾಲಿಕೆಗೆ 61ನೇ ರ್‍ಯಾಂಕ್‌

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 6:25 IST
Last Updated 2 ಅಕ್ಟೋಬರ್ 2022, 6:25 IST

ಹುಬ್ಬಳ್ಳಿ: ಕೇಂದ್ರ ಸರ್ಕಾರದ ‘ಸ್ವಚ್ಛ ಸರ್ವೇಕ್ಷಣ–2022’ ಸಮೀಕ್ಷೆಯಲ್ಲಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯು 1 ಲಕ್ಷದಿಂದ 10 ಲಕ್ಷ ಜನಸಂಖ್ಯೆ ಇರುವ ದೇಶದ 382 ನಗರಗಳ ಪೈಕಿ 61ನೇ ಸ್ಥಾನ ಪಡೆದಿದೆ. ರಾಜ್ಯದ 25 ನಗರಗಳ ಪೈಕಿ ಎರಡನೇ ಸ್ಥಾನ ಪಡೆದಿದೆ.

ಸ್ವಚ್ಛ ಸರ್ವೇಕ್ಷಣ-2022ರಲ್ಲಿ ಹತ್ತು ಲಕ್ಷ ಜನಸಂಖ್ಯೆ ಇರುವ 382 ನಗರಗಳು ಭಾಗವಹಿಸಿದ್ದವು. ಒಟ್ಟಾರೆ ಸಮೀಕ್ಷೆಯಲ್ಲಿ ದೇಶದ 4,354 ನಗರಗಳು ಭಾಗವಹಿಸಿದ್ದವು.

ರ‍್ಯಾಂಕಿಂಗ್‌ನಲ್ಲಿ ಬದಲಾವಣೆ: ಹುಬ್ಬಳ್ಳಿ– ಧಾರವಾಡ ಪಾಲಿಕೆಯು ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ 2021ನೇ ಸಾಲಿಗಿಂತ ಉತ್ತಮ ರ್‍ಯಾಂಕಿಂಗ್‌ ಗಳಿಸಿದೆ. ಕಳೆದ ವರ್ಷ ಪಾಲಿಕೆಯು ಹತ್ತು ಲಕ್ಷದ ಒಳಗಿನ ಜನಸಂಖ್ಯೆಯ ನಗರಗಳ ಸಾಲಿನಲ್ಲಿ 85ನೇ ಸ್ಥಾನ ಗಳಿಸಿತ್ತು.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ. ಗೋಪಾಲಕೃಷ್ಣ ಬಿ., ಅವರು, ‘ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಹುಬ್ಬಳ್ಳಿ– ಧಾರವಾಡ ಪಾಲಿಕೆ ಉತ್ತಮ ರ್‍ಯಾಂಕ್‌ ಗಳಿಸಿದೆ. ಆದರೆ, ಸುಧಾರಣೆಗೆ ಇನ್ನಷ್ಟು ಅವಕಾಶಗಳಿದ್ದು, ಇದಕ್ಕೆ ನಗರದ ಜನ ಸಹಕಾರ ನೀಡಬೇಕು. ಎಲ್ಲೆಂದರಲ್ಲಿ ಉಗುಳುವುದು, ಕಸ ಎಸೆಯುವುದು ಹಾಗೂ ಹಸಿ ಕಸ ಮತ್ತು ಒಣಕ ಕಸ ವಿಂಗಡಣೆ ಸಮರ್ಪಕವಾಗಿ ಆಗದ ಕಾರಣ ರ್‍ಯಾಂಕಿಂಗ್‌ ಮೇಲೆ ಪರಿಣಾಮ ಬೀರಿದೆ’ ಎಂದರು.

‘ಉತ್ತಮ ರ್‍ಯಾಂಕಿಂಗ್‌ ಗಳಿಸುವಲ್ಲಿ ಪಾಲಿಕೆಯ ಪೌರಕಾರ್ಮಿಕರು, ಘನತ್ಯಾಜ್ಯ ನಿರ್ವಹಣೆ ಸಿಬ್ಬಂದಿ ಸಾಕಷ್ಟು ಶ್ರಮಿಸಿದ್ದಾರೆ. ಜನ ಸಹ ಸಾಕಷ್ಟು ಸ್ಪಂದಿಸಿದ್ದಾರೆ. ಕಸ ನಿರ್ವಹಣೆಯಲ್ಲಿ ಮತ್ತಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ ಇನ್ನಷ್ಟು ಯೋಜನೆಗಳನ್ನು ರೂಪಿಸಲಾಗುವುದು’ ಎಂದು ಹೇಳಿದರು.

‘ಕಳೆದ ಬಾರಿಗಿಂತ ಈ ವರ್ಷ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಹು–ಧಾ ಮಹಾನಗರ ಪಾಲಿಕೆಗೆ ಉತ್ತಮ ರ‍್ಯಾಂಕಿಂಗ್ ಬಂದಿದ್ದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ರ‍್ಯಾಂಕಿಂಗ್‌ ಉತ್ತಮಪಡಿಸಲು ಶ್ರಮಿಸಲಾಗುವುದು’ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ಮೇಯರ್‌ ಈರೇಶ ಅಂಚಟಗೇರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.