ADVERTISEMENT

PV Web Exclusive | ಸ್ವಚ್ಛ ಸರ್ವೇಕ್ಷಣೆ: ನಿರೀಕ್ಷೆಗೂ ಮೀರಿ ಸ್ಪಂದಿಸಿದ ಜನತೆ

ಹುಬ್ಬಳ್ಳಿ–ಧಾರವಾಡ

ಶ್ರೀಕಾಂತ ಕಲ್ಲಮ್ಮನವರ
Published 23 ಫೆಬ್ರುವರಿ 2021, 15:35 IST
Last Updated 23 ಫೆಬ್ರುವರಿ 2021, 15:35 IST
ಸ್ವಚ್ಛ ಸರ್ವೇಕ್ಷಣೆ– 2021
ಸ್ವಚ್ಛ ಸರ್ವೇಕ್ಷಣೆ– 2021   

ಹುಬ್ಬಳ್ಳಿ: ನಗರಗಳ ಸ್ವಚ್ಛತೆಗೆ ಆದ್ಯತೆ ನೀಡಲು ಕೇಂದ್ರ ಸರ್ಕಾರ ಆರಂಭಿಸಿರುವ ಸ್ವಚ್ಛ ಸರ್ವೇಕ್ಷಣೆ ಅಭಿಯಾನಕ್ಕೆ ಪ್ರಸಕ್ತ ವರ್ಷ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಜನರಿಂದ ಸ್ಪಂದನೆ ದೊರೆತಿದ್ದು, ಒಂದೂವರೆ ತಿಂಗಳಲ್ಲಿ 40,690 ಜನರು ಪ್ರತಿಕ್ರಿಯಿಸಿದ್ದಾರೆ. ನಾಲ್ಕು ವರ್ಷಗಳಲ್ಲಿಯೇ ಇದು ಗರಿಷ್ಠ ಪ್ರಮಾಣವಾಗಿದ್ದು, ಕೊನೆಯ ದಿನ ಮಾರ್ಚ್‌ 31ರವರೆಗೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು 2016ರಲ್ಲಿ ಕೇಂದ್ರ ಸರ್ಕಾರ ಸ್ವಚ್ಛ ಭಾರತ್‌ ಸರ್ವೇಕ್ಷಣೆ ಅಭಿಯಾನ ಆರಂಭಿಸಿತ್ತು. ಪ್ರಮುಖ ನಗರಗಳ ಸ್ವಚ್ಛತೆ ಹೇಗಿದೆ ಎನ್ನುವುದನ್ನು ರಾಷ್ಟ್ರ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಅಳೆಯಲು ನಿರ್ಧರಿಸಿತು. ಅದಕ್ಕಾಗಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ (MoHUA) ಮೂಲಕ ಅಭಿಯಾನ ಕೈಗೊಂಡಿತು.

ವಿವಿಧ ವಿಭಾಗಗಳ ಪ್ರಗತಿಯನ್ನು ಆಧರಿಸಿ, ಅಂಕಗಳನ್ನು ನೀಡುವ ಮೂಲಕ ರ‍್ಯಾಂಕ್‌ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಸ್ಥಳೀಯ ಸಂಸ್ಥೆಯು ಜನರಿಗೆ ನೀಡುವ ಸೇವೆಗಳಿಗೆ 2,400 ಅಂಕಗಳು, ರಾಷ್ಟ್ರಮಟ್ಟದಲ್ಲಿ ಹಾಗೂ ವಿವಿಧ ವೇದಿಕೆಗಳಲ್ಲಿ ಸಿಕ್ಕ ಗೌರವ, ಪ್ರಶಸ್ತಿಗಳಿಗೆ 1,800 ಅಂಕಗಳು ಹಾಗೂ ಸಿಟಿಜನ್‌ ವಾಯಿಸ್‌ 1,800 ಅಂಕಗಳು ಸೇರಿದಂತೆ ಒಟ್ಟು 6,000 ಅಂಕಗಳನ್ನು ನಿಗದಿಪಡಿಸಲಾಗಿದೆ.

ADVERTISEMENT

ಇದರಲ್ಲಿ ಜನರ ಅಭಿಪ್ರಾಯಕ್ಕೆ (ಸಿಟಿಜನ್‌ ಫೀಡ್‌ಬ್ಯಾಂಕ್‌) ಹೆಚ್ಚಿನ ಮಹತ್ವ ನೀಡಲಾಗಿದೆ. 600 ಅಂಕಗಳನ್ನು ನೀಡಲಾಗಿದೆ. ಕೆಲವೊಂದು ಬಾರಿ ಅಧಿಕಾರಿಗಳ ವರದಿ ವಾಸ್ತವದಿಂದ ಕೂಡಿರುವುದಿಲ್ಲ. ಅದಕ್ಕಾಗಿ ಸ್ಥಳೀಯ ಜನರ ಮೂಲಕ ವಾಸ್ತವ ಅರಿಯಲು ಸರ್ಕಾರ ಬಯಸಿದೆ. ಪ್ರಸಕ್ತ ವರ್ಷದ ಅಭಿಯಾನವು ಜನವರಿ 1ರಿಂದ ಆರಂಭವಾಗಿದ್ದು, ಮಾರ್ಚ್‌ 31ರವರೆಗೆ ನಡೆಯಲಿದೆ.

ರಾಜ್ಯದ ಮಹಾನಗರಗಳೂ ಸೇರಿದಂತೆ ಎಲ್ಲ 280 ಸ್ಥಳೀಯ ಸಂಸ್ಥೆಗಳಲ್ಲಿ ಸರ್ವೇಕ್ಷಣ ನಡೆದಿದೆ. ಈ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಾಸವಾಗಿರುವ ಎಲ್ಲ ಜನರು ತಮ್ಮ ಅಭಿಪ್ರಾಯ ಸಲ್ಲಿಸಬಹುದಾಗಿದೆ. ಹೆಚ್ಚೆಚ್ಚು ಜನರು ಭಾಗವಹಿಸಲಿ ಮುಖ್ಯವಾಗಿ ಗ್ರಾಮೀಣ ಭಾಗದ ಜನರು ಭಾಗವಹಿಸಲಿ ಎನ್ನುವ ಉದ್ದೇಶದಿಂದ ಸ್ವಚ್ಛ ಸರ್ವೇಕ್ಷಣೆ ವೆಬ್‌ಸೈಟ್‌ನಲ್ಲಿ ಪ್ರಾದೇಶಿಕ ಭಾಷೆಗಳಲ್ಲಿಯೂ ಮಾಹಿತಿ ನೀಡಲಾಗಿದೆ. ಇಂಗ್ಲಿಷ್‌, ಹಿಂದಿ ಸೇರಿದಂತೆ ಒಟ್ಟು 12 ಭಾಷೆಗಳಲ್ಲಿ ಮಾಹಿತಿ ಇದೆ.

ಸಾಮಾಜಿಕ ಜಾಲತಾಣ

ಜನರ ಅಭಿಪ್ರಾಯಗಳನ್ನು ವೆಬ್‌ಸೈಟ್‌, ಮೊಬೈಲ್‌ ಆ್ಯಪ್‌ ಹಾಗೂ ಧ್ವನಿ ಮುದ್ರಣದ (ಐವಿಆರ್‌) ಮೂಲಕ ಸಂಗ್ರಹಿಸಲಾಗುತ್ತಿದೆ. https://swachhsurvekshan2021.org/CitizenFeedback, ವೋಟ್‌ ಫಾರ್‌ ಯೂವರ್‌ ಸಿಟಿ ಆ್ಯಪ್‌ ಅಥವಾ 1969 (ಐವಿಆರ್‌) ಸಂಖ್ಯೆಗೆ ದೂರವಾಣಿ ಕರೆ ಮಾಡುವ ಮೂಲಕ ಜನರು ತಮ್ಮ ಅಭಿಪ್ರಾಯ ತಿಳಿಸಬಹುದು.

ಏನಿದರ ಲಾಭ?

ರಾಷ್ಟ್ರ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ರ‍್ಯಾಂಕ್‌ ನೀಡುವುದರಿಂದ ಅತ್ಯುತ್ತಮ ಸಾಧನೆ ತೋರುವ ಸ್ಥಳೀಯ ನಗರಗಳಿಗೆ ಹೆಮ್ಮೆಯ ಗರಿ ಮೂಡಲಿದೆ. ಇದರ ಜೊತೆಗೆ ಕೇಂದ್ರ ಸರ್ಕಾರದಿಂದ ಹೆಚ್ಚೆಚ್ಚು ಅನುದಾನ ಪಡೆಯಲು ಸಹಕಾರಿಯಾಗಲಿದೆ. ಸ್ವಚ್ಛತೆಗೆ ಸಂಬಂಧಿಸಿದಂತೆ ಹೊಸ ಹೊಸ ಯೋಜನೆಗಳು ಅನುಷ್ಠಾನಗೊಳ್ಳಲು ಹಾಗೂ ಜನಜೀವನ ಸುಧಾರಿಸುವಲ್ಲಿ ಇದು ಮಹತ್ವದ್ದಾಗಿದೆ.

ಕೈಜೋಡಿಸಲು ಮನವಿ:

‘ಅವಳಿ ನಗರವನ್ನು ಸ್ವಚ್ಛವಾಗಿಡಲು ಮಹಾನಗರ ಪಾಲಿಕೆ ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಬೀದಿ ಬೀದಿಗಳ ಕಸಗೂಡಿಸುವುದು, ಮನೆ ಮನೆಯಿಂದ ಕಸ ಸಂಗ್ರಹಿಸುವುದು, ಹಸಿ– ಒಣ ತ್ಯಾಜ್ಯ ವಿಂಗಡಿಸುವುದು, ತ್ಯಾಜ್ಯ ನೀರು ಸಂಸ್ಕರಿಸುವುದು ಸೇರಿದಂತೆ ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುತ್ತಿದೆ. ನಾವು ಕೈಗೊಂಡಿರುವ ಕ್ರಮಗಳು ಹಾಗೂ ನಗರದಲ್ಲಿರುವ ಸ್ವಚ್ಛತೆ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ವೆಬ್‌ಸೈಟ್‌ನಲ್ಲಿ ತಿಳಿಸುವ ಮೂಲಕ ಈ ಅಭಿಯಾನಕ್ಕೆ ಕೈಜೋಡಿಸಬೇಕು. ಹೆಚ್ಚೆಚ್ಚು ಜನರು ಪ್ರತಿಕ್ರಿಯಿಸಿದರೆ ಈ ವರ್ಷ ಟಾಪ್‌ ಮೂರರಲ್ಲಿ ಸ್ಥಾನ ಪಡೆಯಬಹುದು’ ಎಂದು ಮಹಾನಗರ ಪಾಲಿಕೆಯ ಎಕ್ಸಿಕ್ಯುಟಿವ್‌ ಎಂಜಿನಿಯರ್‌ ಸಂತೋಷ ಯರಂಗಲಿ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.