ADVERTISEMENT

ರೈಲ್ವೆಯಲ್ಲಿ ಕನ್ನಡದ ದೀಪ ಹಚ್ಚಿದ ಸಂಘ

ನೈರುತ್ಯ ರೈಲ್ವೆಯ ಮಜ್ದೂರ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಡಿಕ್ರೂಜ್

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 5:44 IST
Last Updated 24 ನವೆಂಬರ್ 2022, 5:44 IST
ನೈರುತ್ಯ ರೈಲ್ವೆ ಕನ್ನಡ ಸಂಘವು ಹುಬ್ಬಳ್ಳಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಉದ್ಘಾಟಿಸಿದರು– ಪ್ರಜಾವಾಣಿ ಚಿತ್ರ
ನೈರುತ್ಯ ರೈಲ್ವೆ ಕನ್ನಡ ಸಂಘವು ಹುಬ್ಬಳ್ಳಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಉದ್ಘಾಟಿಸಿದರು– ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ನೈರುತ್ಯ ರೈಲ್ವೆ ಕನ್ನಡ ಸಂಘವು ಹತ್ತೊಂಬತ್ತು ವರ್ಷಗಳ ಹಿಂದೆ ರೈಲ್ವೆಯಲ್ಲಿ ಕನ್ನಡದ ದೀಪ ಹಚ್ಚಿತು. ಅಂದಿನಿಂದ ಆ ದೀಪ ನಿರಂತರವಾಗಿ ಪ್ರಜ್ವಲಿಸುತ್ತಿದೆ. ರೈಲ್ವೆಯಲ್ಲಿ ಕನ್ಮಡತನ ಬೆಳೆಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನುಸಂಘವು ಹಮ್ಮಿಕೊಂಡು ಬಂದಿದೆ’ ಎಂದು ನೈರುತ್ಯ ರೈಲ್ವೆಯ ಮಜ್ದೂರ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಡಾ. ಎ.ಎಂ. ಡಿಕ್ರೂಜ್ ಹೇಳಿದರು.

ನೈರುತ್ಯ ರೈಲ್ವೆ ಕನ್ನಡ ಸಂಘವು ನಗರದ ಗದಗ ರಸ್ತೆಯ ಚಾಲುಕ್ಯ ಇನ್‌ಸ್ಟಿಟ್ಯೂಟ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನೈರುತ್ಯ ರೈಲ್ವೆಯು ಹುಬ್ಬಳ್ಳಿಗೆ ಬರಬೇಕೆಂದು ನಡೆದ ಹೋರಾಟದಲ್ಲಿ ಪಾಟೀಲ‌ ಪುಟ್ಟಪ್ಪ ಅವರ ಕೊಡುಗೆ ದೊಡ್ಡದು’ ಎಂದರು.

‘ಸತತ ಹೋರಾಟದ ಫಲವಾಗಿ, ರೈಲ್ವೆಯ ಗ್ರೂಪ್ ಸಿ ಪರೀಕ್ಷೆಯನ್ನು ಇಂದು ಕನ್ನಡವಷ್ಟೇ ಅಲ್ಲದೆ, ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಬರೆಯುವಂತಾಗಿದೆ. ಇದರಿಂದಾಗಿ ರೈಲ್ವೆಯಲ್ಲಿ ಶೇ 25ರಷ್ಟು ಕನ್ನಡಿಗರಿಗೆ ಉದ್ಯೋಗ ಸಿಕ್ಕಿತು. ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗವನ್ನು ಸರ್ಕಾರ ಶೀಘ್ರ ಸಾಕಾರಗೊಳಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಸಂಘದ ಅಧ್ಯಕ್ಷ ಮಹಾಂತಪ್ಪ‌ ನಂದೂರ ಮಾತನಾಡಿ, ‘ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ಕೇವಲ ನಮ್ಮ ನಾಡಿಗಷ್ಟೇ ಸೀಮಿತವಾಗಿಲ್ಲ. ಜಗತ್ತಿನ ಹಲವೆಡೆ ಈ ದಿನದ ಸಂಭ್ರಮವನ್ನು ನವೆಂಬರ್ ತಿಂಗಳಿಡೀ ಆಚರಿಸಲಾಗುತ್ತದೆ. ಕನ್ನಡಕ್ಕಿರುವ ಶಕ್ತಿಯೇ ಅಂತಹದ್ದು’ ಎಂದರು.

‘ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಿಭಾಗ ಸ್ಥಾಪನೆಯಾದಾಗಲೇ ನಮ್ಮ ಸಂಘ ಕೂಡ ಆರಂಭವಾಯಿತು. ಕನ್ನಡದ ಹೋರಾಟಗಾರ ಪಾಟೀಲ‌ ಪುಟ್ಟಪ್ಪ ಅವರ ನೇತೃತ್ವದಲ್ಲಿ ಹತ್ತೊಂಬತ್ತು ವರ್ಷಗಳ‌‌‌ ಹಿಂದೆ ಮೊದಲ ಬಾರಿಗೆ ರೈಲ್ವೆಯಲ್ಲಿ ‌ರಾಜ್ಯೋತ್ಸವ ಆಚರಿಸಲಾಯಿತು’ ಎಂದು ಸ್ಮರಿಸಿದರು.

‘ಕನ್ನಡದ ಅಸ್ಮಿತೆ ಮತ್ತು ಅಭಿಮಾನವನ್ನು ನೈರುತ್ಯ‌ ರೈಲ್ವೆಯಲ್ಲಿ ನಮ್ಮ ಸಂಘ ಕಾಪಾಡಿಕೊಂಡು ಬಂದಿದೆ. ಇಲ್ಲಿನ ಹಲವು ಕಾರ್ಯಕ್ರಮಗಳಿಗೆ ಕನ್ನಡದ ಸ್ಪರ್ಶ ನೀಡುತ್ತಾ, ಕನ್ನಡತನ ಉಳಿಸಿಕೊಂಡು ಬಂದಿದೆ. ಅದರ ಫಲವಾಗಿಯೇ ಇಂದು ನೈರುತ್ಯ ರೈಲ್ವೆಯ ಹಲವು ಶಾಖೆಗಳಲ್ಲಿ ರಾಜ್ಯೋತ್ಸವ ಆಚರಿಸಲಾಗುತ್ತಿದೆ’ ಎಂದರು.

ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್, ರೈಲ್ವೆಯ ಮಹಿಳಾ ಕಲ್ಯಾಣ ಸಂಘದ ಅಧ್ಯಕ್ಷೆ ವಂದನಾ ಶ್ರೀವಾಸ್ತವ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಹರ್ಷ ಖರೆ, ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಡಾ. ಅನೂಪ್ ದಯಾನಂದ ಸಾಧು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಸ್. ಮಹೇಶ್ ಇದ್ದರು.

ರಾಜ್ಯೋತ್ಸವದ ಅಂಗವಾಗಿ ಸಂಘವು ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಗುರು ಹಾಗೂ ಸಂಗಡಿಗರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.