
ಧಾರವಾಡ ರೈಲು ನಿಲ್ದಾಣದಲ್ಲಿ 1989ರಲ್ಲಿ ಸ್ಥಾಪಿಸಲಾದ ರವೀಂದ್ರನಾಥ ಟ್ಯಾಗೋರ್ ಅವರ ‘ಗುರುದೇವ ಸ್ಮಾರಕ’
ಧಾರವಾಡ: ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ರವೀಂದ್ರನಾಥ ಟ್ಯಾಗೋರ್ ಅವರು ರಚಿಸಿದ ರಾಷ್ಟ್ರಗೀತೆಗೆ ಈಗ 105 ವರ್ಷಗಳ ಸಂಭ್ರಮ. ಸಾಂಸ್ಕೃತಿಕ ನಗರಿ, ವಿದ್ಯಾಕಾಶಿ, ಪೇಡಾ ನಗರಿ ಎಂದೇ ಕರೆಯಲ್ಪಡುವ ಧಾರವಾಡದ ರೈಲು ನಿಲ್ದಾಣಕ್ಕೆ ಟ್ಯಾಗೋರ್ ಅವರು ಭೇಟಿ ನೀಡಿದ್ದರು ಎಂಬುದು ವಿಶೇಷ.
1922ರಲ್ಲಿ ಶ್ರೀಲಂಕಾ ದೇಶಕ್ಕೆ ಪ್ರವಾಸ ಹೊರಟಿದ್ದ ರವೀಂದ್ರನಾಥ ಟ್ಯಾಗೋರ್ ಮತ್ತು ಸಿ.ಎಸ್. ಎಂಡ್ರೊ ಜದ್ರಾ ಎಂಬುವರು ಪುಣೆ ಮತ್ತು ಬೆಂಗಳೂರು ಮಾರ್ಗವಾಗಿ ರೈಲಿನಲ್ಲಿ ಸಂಚರಿಸುತ್ತಿದ್ದರು. ಆಗ ಧಾರವಾಡ ರೈಲು ನಿಲ್ದಾಣದಲ್ಲಿ ಅವರಿಬ್ಬರೂ 5 ನಿಮಿಷ ಇರುತ್ತಾರೆ ಎಂಬ ವಿಷಯ ವರಕವಿ ದ.ರಾ. ಬೇಂದ್ರೆ ಮತ್ತು ಇತರ ಗಣ್ಯರಿಗೆ ಗೊತ್ತಾಯಿತು. ಎಲ್ಲರೂ ತಕ್ಷಣವೇ ನಿಲ್ದಾಣಕ್ಕೆ ಬಂದರು.
ಸುಮಾರು ಐದು ಸಾವಿರ ಕವಿತೆ ರಚಿಸಿ ಹಲವು ಪ್ರಶಸ್ತಿಗಳಿಗೆ ಪಾತ್ರರಾದ ರವೀಂದ್ರನಾಥ್ ಟ್ಯಾಗೋರ್ ಅವರನ್ನು ದ.ರಾ. ಬೇಂದ್ರೆ ಹಾಗೂ ಸಂಗಡಿಗರು ಗೌರವಿಸಿ, ಒಂದಿಷ್ಟು ಸಮಯ ಅವರೊಡನೆ ಮಾತುಕತೆ ನಡೆಸಿದರು ಎಂದು ನ.ಹ. ಕಟಗೇರಿ ಅವರು ಬರೆದ ‘ಗತಕಾಲದ ಧಾರವಾಡ’ ಪುಸ್ತಕದಲ್ಲಿ ಉಲ್ಲೇಖವಿದೆ.
ರವೀಂದ್ರನಾಥ ಟ್ಯಾಗೋರ್ ಅವರು ಧಾರವಾಡ ಭೇಟಿಯ ಸವಿನೆನಪಿಗಾಗಿ 1989ರ ಆಗಸ್ಟ್ 8ರಂದು ರೈಲ್ವೆ ಇಲಾಖೆಯಿಂದ ರೈಲ್ವೆ ಪ್ಲಾಟ್‌ಪಾರ್ಮ್‌ನ ಒಂದು ಮೂಲೆಯಲ್ಲಿ ಟ್ಯಾಗೋರ್ ಅವರ ಪುತ್ಥಳಿ ಸ್ಥಾಪಿಸಿ, ಉದ್ಯಾನ ನಿರ್ಮಿಸಲಾಗಿದೆ. ಅದಕ್ಕೆ ‘ಗುರುದೇವ ಸ್ಮಾರಕ’ ಎಂದು ನಾಮಕರಣ ಮಾಡಲಾಗಿದೆ.
ರಾಷ್ಟ್ರಗೀತೆಗೆ ಶತಮಾನದ ಇತಿಹಾಸ
ರವೀಂದ್ರನಾಥ ಟ್ಯಾಗೋರ್ ಅವರು ಬರೆದ ರಾಷ್ಟ್ರಗೀತೆ ಮೂಲತಃ ಸಂಸ್ಕೃತ ಮತ್ತು ಬಂಗಾಳಿ ಭಾಷೆಯಿಂದ ಕೂಡಿದೆ. ದೇಶದಲ್ಲಿ ಈ ಗೀತೆಯನ್ನು 1911ರಂದು ಕೋಲ್ಕತ್ತ ನಗರದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮೊಟ್ಟಮೊದಲ ಬಾರಿಗೆ ಪ್ರಸ್ತುತ ಪಡಿಸಲಾಯಿತು. ಇದೀಗ ರಾಷ್ಟ್ರಗೀತೆ ರಚನೆಯಾಗಿ ಶತಮಾನವಾಗಿದೆ.
ಆಗ ಈ ಗೀತೆಯನ್ನು ರಾಷ್ಟ್ರಗೀತೆ ಎಂದು ಪರಿಗಣಿಸಲಾಗಿರಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಸಂಗೀತಗಾರ ರಾಮಸಿಂಗ್ ಠಾಕೂರ್ ಸಂಯೋಜನದಲ್ಲಿ 1950ರ ಜನವರಿ 24ರಂದು ಈ ಗೀತೆಯನ್ನು ರಾಷ್ಟ್ರಗೀತೆ ಎಂದು ದೇಶದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಘೋಷಿಸಿದರು.