ADVERTISEMENT

ಶಿಕ್ಷಕರ ಸಮಸ್ಯೆ: ಜುಲೈ 15ರವರೆಗೆ ಗಡುವು

ಹೊರಟ್ಟಿ ನೇತೃತ್ವದಲ್ಲಿ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಕೇಂದ್ರ ಸಮಿತಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 5:40 IST
Last Updated 27 ಜೂನ್ 2022, 5:40 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಹುಬ್ಬಳ್ಳಿ: ರಾಜ್ಯ ಸರ್ಕಾರ 1995–2000ದ ಅವಧಿಯಲ್ಲಿ ಆರಂಭಗೊಂಡ ಅನುದಾನರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು, ಕಾಲ್ಪನಿಕ ವೇತನ ಜಾರಿಗೊಳಿಸಬೇಕು ಹಾಗೂ ಅನುದಾನಿತ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಹಿಂದಿನ ಪದ್ಧತಿಯನ್ನೇ ಅನುಸರಿಸಬೇಕು. ಈ ಬೇಡಿಕೆಗಳನ್ನು ಜುಲೈ 15ರೊಳಗೆ ಈಡೇರಿಸಬೇಕು. ಇಲ್ಲದಿದ್ದರೆ, ಶಿಕ್ಷಕರ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು ಎಂಬ ನಿರ್ಣಯವನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಕೇಂದ್ರ ಸಮಿತಿ ಸಭೆಯಲ್ಲಿ ಭಾನುವಾರ ನಿರ್ಣಯ ಕೈಗೊಳ್ಳಲಾಯಿತು.

ಸಂಘದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ನಗರದಲ್ಲಿ ನಡೆದ ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್. ಭಟ್ ನಿರ್ಣಯ ಮಂಡಿಸಿದರು.

ಸಭೆಯಲ್ಲಿ ಮಾತನಾಡಿದ ಹೊರಟ್ಟಿ, ‘ಅನುದಾನರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದಾಗಿ ಹೇಳಿದ್ದ ಸರ್ಕಾರ ವಿಳಂಬ ಮಾಡುತ್ತಲೇ ಬಂದಿದೆ. ಈಗಲಾದರೂ ಬೇಡಿಕೆ ಈಡೇರಿಸಬೇಕು. ಅನುದಾನಿತ ಶಾಲೆಗಳ ಮಾನ್ಯತೆ ನವೀಕರಣದ ಹೆಸರಿನಲ್ಲಿ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಹಾಗಾಗಿ, ಹಳೇ ಪದ್ಧತಿ ಮುಂದುವರಿಸಬೇಕು. 2006ರಿಂದ ನೇಮಕವಾದ ಶಿಕ್ಷಕರಿಗೆ ಹಳೇ ಪಿಂಚಣಿ ಪದ್ಧತಿಯನ್ನೇ ಮುಂದುವರಿಸಬೇಕು. ಈ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಾಯಿಸಲಾಗುವುದು’ ಎಂದು ಹೇಳಿದರು.‌‌

ADVERTISEMENT

‘ಪಠ್ಯ ಪುಸ್ತಕ ಪೂರೈಕೆ ವಿಳಂಬವು ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀರುತ್ತಿದೆ. ಸರ್ಕಾರ ಈ ವಿಷಯವನ್ನು ಡಿಎಸ್‌ಇಆರ್‌ಟಿ ತಜ್ಞರಿಗೆ ವಹಿಸಬೇಕು. ಅದಕ್ಕಾಗಿ, ದೃಢ ನಿರ್ಧಾರ ಕೈಗೊಳ್ಳಬೇಕು’ ಎಂದರು.

ಮೂರ್ಖತನದ ಹೇಳಿಕೆ: ‘ಸಚಿವ ಉಮೇಶ ಕತ್ತಿ ಅವರು ನೀಡಿರುವ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೇಳಿಕೆ ಮೂರ್ಖತನದ್ದು. ಈ ಭಾಗ ಹಿಂದುಳಿದಿರುವುದಕ್ಕೆ ನನ್ನನ್ನೂ ಒಳಗೊಂಡಂತೆ ಈ ಭಾಗದ ಎಲ್ಲಾ ಜನಪ್ರತಿನಿಧಿಗಳು ಕಾರಣರಾಗಿದ್ದಾರೆ. ನಂಜುಂಡಪ್ಪ ವರದಿ ಅನುಷ್ಠಾನ ಸೇರಿದಂತೆ ಹಲವು ವಿಷಯಗಳಲ್ಲಿ ಅನ್ಯಾಯವಾಗಿರುವ ಬಗ್ಗೆ ಎಲ್ಲರೂ ಪಕ್ಷಾತೀತವಾಗಿ ಚರ್ಚಿಸಿ ಸರಿಪಡಿಸಬೇಕು’ ಎಂದರು.

ಪಠ್ಯ ಪುಸ್ತಕ ಪೂರೈಕೆ ವಿಳಂಬವು ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀರುತ್ತಿದೆ. ಸರ್ಕಾರ ಈ ವಿಷಯವನ್ನು ಡಿಎಸ್‌ಇಆರ್‌ಟಿ ತಜ್ಞರಿಗೆ ವಹಿಸಬೇಕು. ಅದಕ್ಕಾಗಿ, ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಪ್ರಶ್ನೆಯೊಂದಕ್ಕೆ ಹೊರಟ್ಟಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.