ಹುಬ್ಬಳ್ಳಿ: ಬೇಸಿಗೆ ರಜೆ ಮುಗಿದು ಮೇ 29ರಿಂದ ಶಾಲೆಗಳು ಆರಂಭಗೊಂಡಿವೆ. ತಳಿರು ತೋರಣ, ಬಲೂನ್ ಹಾಗೂ ಇತರ ಪರಿಕರಗಳಿಂದ ಶಾಲೆಗಳನ್ನು ಅಲಂಕರಿಸಿ, ವಿದ್ಯಾರ್ಥಿಗಳಿಗೆ ಹೂವು, ಸಿಹಿ ನೀಡಿ ಸಂಭ್ರಮದಿಂದ ಬರಮಾಡಿಕೊಳ್ಳಲಾಗಿದೆ. ಪ್ರತಿ ವರ್ಷಕ್ಕಿಂತ ಈ ಬಾರಿ ಬಹುತೇಕ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶಾಲಾ ಆರಂಭದ ಮರುದಿನವೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಾಗಿದೆ.
ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಸೇರಿ ಒಟ್ಟು 1,526 ಶಾಲೆಗಳಿವೆ. ಇವುಗಳಲ್ಲಿ 735 ಸರ್ಕಾರಿ ಪ್ರಾಥಮಿಕ ಶಾಲೆಗಳು ಹಾಗೂ 112 ಸರ್ಕಾರಿ ಪ್ರೌಢಶಾಲೆಗಳು ಇವೆ. ಈವರೆಗೂ ಜಿಲ್ಲೆಗೆ ಶೇ 83ರಷ್ಟು ಪಠ್ಯಪುಸ್ತಕ ಪೂರೈಕೆ ಆಗಿದ್ದು, ಉಳಿದ ಶೇ 13ರಷ್ಟು ಪಠ್ಯಪುಸ್ತಕಗಳನ್ನು ವಾರದೊಳಗೆ ಬರಲಿವೆ. ಈಗಾಗಲೇ ಬಂದ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸಲಾಗಿದ್ದು, ಉಳಿದ ಪಠ್ಯಪುಸ್ತಕಗಳನ್ನು ಆದಷ್ಟು ಬೇಗ ವಿದ್ಯಾರ್ಥಿಗಳ ಕೈಗೆ ನೀಡಲು ಶಿಕ್ಷಣ ಇಲಾಖೆ ಯೋಜನೆ ಹಾಕಿಕೊಂಡಿದೆ.
ಶಿಕ್ಷಣ ಇಲಾಖೆಗೆ ಜಿಲ್ಲೆಯಿಂದ ಈ ಬಾರಿ 27.22 ಲಕ್ಷ (27,22,400) ಉಚಿತ ಹಾಗೂ 10.89ಲಕ್ಷ(10,89,073) ಮಾರಾಟದ ಪಠ್ಯಪುಸ್ತಕಗಳು ಸೇರಿ ಒಟ್ಟು 38,11ಲಕ್ಷ (38,11,473) ಪಠ್ಯಪುಸ್ತಕಗಳ ಬೇಡಿಕೆ ಸಲ್ಲಿಸಲಾಗಿತ್ತು. ಅವುಗಳಲ್ಲಿ 30,76 ಲಕ್ಷ (30,76,239) ಪಠ್ಯಪುಸ್ತಕಗಳು ಪೂರೈಕೆಯಾಗಿವೆ.
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಶಾಲಾ ಶಿಕ್ಷಣ ಇಲಾಖೆಯಿಂದ ಉಚಿತವಾಗಿ ಪಠ್ಯಪುಸ್ತಕ ಹಾಗೂ 2 ಜೊತೆ ಸಮವಸ್ತ್ರಗಳನ್ನು ಪೂರೈಸಲಾಗಿದೆ. ಖಾಸಗಿ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ನೀಡಲು ಶುಲ್ಕ ನಿಗದಿ ಮಾಡಲಾಗಿದೆ. ಖಾಸಗಿ ಶಾಲೆಗಳ ಶಿಕ್ಷಣ ಇಲಾಖೆಗೆ ಬ್ಯಾಂಕ್ ಮೂಲಕ ಪಠ್ಯಪುಸ್ತಕ ಶುಲ್ಕದ ಹಣ ಪಾವತಿಸಿದ ಚಲನ್ ಅನ್ನು ಬಿಇಒಗಳಿಗೆ ನೀಡಿ ಪಠ್ಯಪುಸ್ತಕಗಳನ್ನು ಪಡೆಯುತ್ತಿದ್ದಾರೆ. ಪುಸ್ತಕ ಮಳಿಗೆಗಳಿಂದ ಪಠ್ಯಪುಸ್ತಕಗಳ ಖರೀದಿಗೆ ಖಾಸಗಿ ಶಾಲೆ ಸೇರಿದಂತೆ ಯಾವುದೇ ಶಾಲೆಗಳಿಗೂ ಅವಕಾಶ ಇಲ್ಲ.
ಈ ಬಾರಿ ಶಾಲಾ ಆರಂಭಕ್ಕೂ 15 ದಿನ ಮುನ್ನವೇ ಜಿಲ್ಲೆಯ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳು ಬಂದಿದ್ದವು. ಮಳೆ ಹಿನ್ನೆಲೆ ಇವುಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಹೀಗಾಗಿ ಮಳೆ ನೀರು ಬಿದ್ದು ಪಠ್ಯಪುಸ್ತಕಗಳು ಹಾಳಾಗದಂತೆ ನೋಡಿಕೊಳ್ಳುವಂತೆ, ದಾಸ್ತಾನು ಇರುವ ಜಾಗದಲ್ಲಿ ಅಗ್ನಿನಂದಕ, ಸಿಸಿ ಟಿ.ವಿ ಕ್ಯಾಮೆರಾ, ಕಾವಲುಗಾರರು ಇರಬೇಕು ಎಂದು ಬಿಇಒಗಳಿಗೆ ಸೂಚಿಸಲಾಗಿತ್ತು. ಇದೀಗ ಅವುಗಳನ್ನು ಸುರಕ್ಷಿತವಾಗಿ ಶಾಲೆಗಳಿಗೆ ತಲುಪಿಸಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಎಸ್.ಎಸ್. ಕೆಳದಿಮಠ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಪೂರೈಸುವ ಜವಾಬ್ದಾರಿಯನ್ನು ಬಿಇಒಗಳಿಗೆ ನೀಡಲಾಗಿತ್ತು. ಇದಕ್ಕಾಗಿ ಸರ್ಕಾರ ಸಾರಿಗೆ ವೆಚ್ಚವನ್ನೂ ಭರಿಸಿತ್ತು. ಬಿಇಒಗಳು ‘ಡಿ’ ದರ್ಜೆ ನೌಕರರನ್ನು ಬಳಸಿಕೊಂಡು ಖಾಸಗಿ ವಾಹನಗಳಲ್ಲಿ ಪಠ್ಯಪುಸ್ತಕ ಹಾಗೂ ಸಮವಸ್ತ್ರವನ್ನು ಶಾಲೆಗಳಿಗೆ ಪೂರೈಸಿದ್ದಾರೆ. ಕೆಲವು ಕಡೆಗಳಲ್ಲಿ ಶಾಲಾ ಮುಖ್ಯಶಿಕ್ಷಕರೇ ಬಿಇಒ ಕಚೇರಿಗೆ ಖುದ್ದು ಬಂದು ಪಠ್ಯಪುಸ್ತಕಗಳನ್ನು ಶಾಲೆಗೆ ಕೊಂಡೊಯ್ದು ವಿದ್ಯಾರ್ಥಿಗಳಿಗೆ ವಿತರಿಸಿದ್ದಾರೆ’ ಎಂದು ಹೇಳಿದರು.
ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಜಿಲ್ಲೆಯ ಫಲಿತಾಂಶ ಹೆಚ್ಚಳಕ್ಕೆ ಜಿಲ್ಲಾಧಿಕಾರಿ ಸಲಹೆ ಮೇರೆಗೆ ಶಿಕ್ಷಣ ಇಲಾಖೆಯಿಂದ ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಶಾಲಾರಂಭದ ದಿನವೇ ಪಠ್ಯಪುಸ್ತಕ ವಿತರಿಸಿ ಶಿಕ್ಷಕರಿಂದ ಪಾಠ ಬೋಧನೆ ಆರಂಭಿಸಲಾಗಿದೆಎಸ್.ಎಸ್. ಕೆಳದಿಮಠ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ
1,30,873 ಸಮವಸ್ತ್ರ ಪೂರೈಕೆ
‘ಜಿಲ್ಲೆಯಲ್ಲಿ ಈ ಬಾರಿ ಶಿಕ್ಷಣ 131152 ಸಮವಸ್ತ್ರ ಪೂರೈಕೆಗೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ ಈವರೆಗೆ 130873 ಪೂರೈಕೆ ಆಗಿವೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಎಸ್.ಎಂ. ಹುಡೇದಮನಿ ತಿಳಿಸಿದರು. ‘ಸಮವಸ್ತ್ರಗಳನ್ನು ಬಿಇಒ ಕಚೇರಿ ಮೂಲಕ ಶಾಲೆಗಳಿಗೆ ತಲುಪಿಸಲಾಗಿದ್ದು ಶನಿವಾರದವರೆಗೂ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳೊಂದಿಗೆ ಸಮವಸ್ತ್ರವನ್ನೂ ವಿತರಿಸಲಾಗಿದೆ. ಉಳಿದ ವಿದ್ಯಾರ್ಥಿಗಳಿಗೆ ಸೋಮವಾರ (ಇಂದು) ವಿತರಣೆ ಮಾಡುವಂತೆ ಆಯಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.