ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡದಲ್ಲಿ ಬಾದಾಮಿ ಚಾಲುಕ್ಯರು, ಮರಾಠರು, ರಾಷ್ಟ್ರಕೂಟರು ಸೇರಿ ಬ್ರಿಟಿಷರು ಆಯಾ ಕಾಲಘಟ್ಟದಲ್ಲಿ ಆಳ್ವಿಕೆ ನಡೆಸಿದ್ದರು. ಅದರ ಕುರುಹುಗಳು ಅಲ್ಲಲ್ಲಿ ಕಾಣಸಿಗುತ್ತವೆ. ಆಸಕ್ತಿಕರ ಸಂಗತಿಯೆಂದರೆ ಧಾರವಾಡ ಈಗಷ್ಟೇ ಅಲ್ಲ, ಬ್ರಿಟಿಷರ ಆಳ್ವಿಕೆ ಕಾಲದಲ್ಲೂ ಶೈಕ್ಷಣಿಕ ಆಡಳಿತ ವಿಭಾಗೀಯ ಕಚೇರಿ ಆಗಿತ್ತು.
1818 ಇಸವಿಯಲ್ಲಿ ಧಾರವಾಡ ವಶ ಪಡಿಸಿಕೊಂಡ ಬ್ರಿಟಿಷರಿಗೆ ಕಣ್ಣಿಗೆ ಬಿದ್ದಿದ್ದು ಬಲಿಷ್ಟವಾದ ಕಿತ್ತೂರು ಸಂಸ್ಥಾನ. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ ಜಾರಿಗೆ ತಂದರು. 1824ರಲ್ಲಿ ದೇಸಾಯಿ ವಾಡೆಯ ಖಜಾನೆಗೆ ಬೀಗ ಮುದ್ರೆ ಹಾಕಲು ಅಂದಿನ ಕಲೆಕ್ಟರ್ ಸೇಂಟ್ ಜಾನ್ ಥ್ಯಾಕರೆ ಮುಂದಾದ. ಈ ನೀತಿಯನ್ನು ವಿರೋಧಿಸಿದ ಕಿತ್ತೂರು ರಾಣಿ ಚನ್ನಮ್ಮ, ತೀವ್ರ ಸ್ವರೂಪದ ಹೋರಾಟದ ಎಚ್ಚರಿಕೆ ನೀಡಿದರು. ಸೇನೆಯೂ ಸಿದ್ಧತೆ ನಡೆಸಿತು.
ರಾಣಿ ಚನ್ನಮ್ಮ ಮಾತಿಗೆ ಥ್ಯಾಕರೆ ಬೆಲೆ ಕೊಡದಿರುವುದು ಮತ್ತು ಒರಟಾಗಿ ನಡೆದುಕೊಂಡಿರುವುದು ಕಿತ್ತೂರು ಸಂಸ್ಥಾನದ ಸೈನಿಕ ಅಮಟೂರ ಬಾಳಪ್ಪ ಮತ್ತು ಸಂಗಡಿಗರಿಗೆ ಗೊತ್ತಾಗಿ, ಸಿಟ್ಟಿಗೇಳುತ್ತಾರೆ. 1824ರ ಅಕ್ಟೋಬರ್ 23ರಂದು ಥ್ಯಾಕರೆಗೆ ಅಮಟೂರ ಬಾಳಪ್ಪ ಗುಂಡಿಟ್ಟು ಕೊಲ್ಲುತ್ತಾರೆ. ಥ್ಯಾಕರೆ ಜೊತೆಗೆ ಬ್ಲ್ಯಾಕ್, ಸ್ಯುಯೆಲ್, ಡೈಟನ್ ಸೇರಿದಂತೆ ಏಳು ಬ್ರಿಟಿಷ್ ಅಧಿಕಾರಿಗಳು ಹತರಾಗುತ್ತಾರೆ ಎಂಬುದು ಇತಿಹಾಸ.
ಆ ಏಳು ಬ್ರಿಟಿಷ್ ಅಧಿಕಾರಿಗಳನ್ನು ಧಾರವಾಡದಲ್ಲೇ ಮಣ್ಣು ಮಾಡಿ, ಸಮಾಧಿ ಕಟ್ಟಲಾಗುತ್ತದೆ. ಆಗ ದಕ್ಷಿಣ ವಿಭಾಗದ ಕಮಿಷನರ್ ಚ್ಯಾಪ್ಲಿನ್ ಎಲ್ಲವನ್ನೂ ನಿಭಾಯಿಸುತ್ತಾರೆ. ಸದ್ಯಕ್ಕೆ ಆ ಸ್ಥಳವು ಶಿವಾಜಿ ವೃತ್ತದ ಬಳಿಯಿರುವ ಕಸಾಯಿ ಖಾನೆಯಾಗಿ ಮಾರ್ಪಟ್ಟಿದೆ. ತ್ಯಾಜ್ಯ ರಾಶಿಯೂ ಇದೆ. ಸಮಾಧಿಗಳು ಪಳೆಯಳಿಕೆ ಆಗಿ ಉಳಿದಿವೆ.
‘ದಕ್ಷಿಣ ಮರಾಠಾ ದೊ ಅಬದ ಪ್ರಿನ್ಸಿಪಲ್ ಕಲೆಕ್ಟರ್ ಹಾಗೂ ಪೊಲಿಟಿಕಲ್ ಏಜಂಟರು ಆದ ಜಾನ್ ಥ್ಯಾಕರೆ ಇವರು 23 ಅಕ್ಟೊಬರ್ 1824 ರ ಕಿತ್ತೂರು ಕಾಳಗದಲ್ಲಿ ಮಡಿದ ನೆನಪಿಗಾಗಿ’ ಎಂಬ ಮಾಹಿತಿ ಸಮಾಧಿ ಮೇಲೆ ಇತ್ತು ಎಂದು ನ.ಹ. ಕಟಗೇರಿ ಅವರು ಬರೆದ ‘ಗತಕಾಲದ ಧಾರವಾಡ’ ಎಂಬ ಪುಸ್ತಕದಲ್ಲಿ ಉಲ್ಲೇಖ ಇದೆ.
‘ಸಮಾಧಿ ಇರುವ ಜಾಗವು ಇದೀಗ ಕಸಾಯಿ ಖಾನೆಯಾಗಿ ನಿರ್ಮಾಣಗೊಂಡಿದ್ದು, ಸಮಾಧಿ ಸುತ್ತ ದನ ಕರುಗಳನ್ನು ಕಟ್ಟಲಾಗುತ್ತದೆ. ಸ್ವಚ್ಛತೆ ಕೊರತೆಯಿಂದ ಸಮಾಧಿಗಳ ಮೇಲೆ ಕಸ ಗಡ್ಡೆಗಳಿವೆ. ಪಳೆಯುಳಿಕೆ ಸಹ ಇಲ್ಲದಂತೆ ನಾಶವಾಗುತ್ತಿವೆ’ ಎಂದು ಸ್ಥಳಿಯ ನಿವಾಸಿ ಪರಸಪ್ಪ ಬೆಟಗೇರಿ ತಿಳಿಸಿದರು.
‘ಪ್ರಥಮವಾಗಿ ಬ್ರಿಟಿಷ್ ಸರ್ಕಾರದ ವಿರುದ್ಧ ರಾಣಿ ಚನ್ನಮ್ಮ ಕಿತ್ತೂರು ಕಾಳಗದಲ್ಲಿ ಜಯ ಗಳಿಸಿದ ಇತಿಹಾಸ ಸಾರುವ ಕುರುಹುಗಳು ಅಳಿವಿನಂಚಿನಲ್ಲಿವೆ. ಕಾಳಗದ ನೆನಪಿನಲ್ಲಿ ಸಮಾಧಿಗಳನ್ನು ಸಂರಕ್ಷಿಸಬೇಕಿತ್ತು. ಆ ದಿನಗಳ ನೆನಪಿನಲ್ಲಿ ಅಲ್ಲೊಂದು ಸ್ಮಾರಕ ನಿರ್ಮಾಣ ಆಗಬೇಕಿತ್ತು. ಯಾವ ಕಾರ್ಯವೂ ನಡೆಯದೇ, ವರ್ಷಗಳು ಹೀಗೆ ಗತಿಸಿದರೆ, ಅವು ಯಾರ ಸಮಾಧಿಗಳು ಎಂಬುದು ನೆನಪಿನಲ್ಲಿ ಉಳಿಯುವುದಿಲ್ಲ. ಇತಿಹಾಸದ ಪುಟಗಳಲ್ಲೂ ಸ್ಪಷ್ಟವಾಗಿ ದಾಖಲಾಗುವುದಿಲ್ಲ’ ಎಂಬ ಬೇಸರ ಇತಿಹಾಸ ತಜ್ಞರದ್ದು.
ಥ್ಯಾಕರೆ ಸಮಾಧಿಗೆ 200 ವರ್ಷಗಳ ಇತಿಹಾಸವಿದೆ. ಇದೇ ರೀತಿ ಧಾರವಾಡದಲ್ಲಿ ಅನೇಕ ಇತಿಹಾಸದ ಕುರುಹಗಳಿವೆ. ಅವುಗಳ ಸಂರಕ್ಷಣೆ ಕಾರ್ಯ ಜಿಲ್ಲಾಡಳಿತದಿಂದ ನಡೆಯಬೇಕು.- ಪ್ರೊ. ಶಿವಾನಂದ ಶೆಟ್ಟರ್, ನಿವೃತ್ತ ಪ್ರಾಧ್ಯಾಪಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.