ADVERTISEMENT

ಕುಂದಗೋಳ: ಮಾಜಿ ಶಾಸಕರ ಪುತ್ರ, ಸೊಸೆ ಕಣದಲ್ಲಿ

ಅಶೋಕ ಘೋರ್ಪಡೆ
Published 25 ಡಿಸೆಂಬರ್ 2020, 19:30 IST
Last Updated 25 ಡಿಸೆಂಬರ್ 2020, 19:30 IST
ಕುಂದಗೋಳ ತಾಲ್ಲೂಕಿನ ಕಮಡೊಳ್ಳಿಯಲ್ಲಿ ಮಾಜಿ ಶಾಸಕ ಗೋವಿಂದಪ್ಪ ಜುಟ್ಟಲ್ ಅವರ ಪುತ್ರ ಚಂದ್ರಶೇಖರ ಜುಟ್ಟಲ್ ಪ್ರಚಾರದಲ್ಲಿ ತೊಡಗಿದ್ದರು
ಕುಂದಗೋಳ ತಾಲ್ಲೂಕಿನ ಕಮಡೊಳ್ಳಿಯಲ್ಲಿ ಮಾಜಿ ಶಾಸಕ ಗೋವಿಂದಪ್ಪ ಜುಟ್ಟಲ್ ಅವರ ಪುತ್ರ ಚಂದ್ರಶೇಖರ ಜುಟ್ಟಲ್ ಪ್ರಚಾರದಲ್ಲಿ ತೊಡಗಿದ್ದರು   

ಕುಂದಗೋಳ: ತಾಲ್ಲೂಕಿನ 23 ಗ್ರಾಮ ಪಂಚಾಯ್ತಿಗಳ ಮತದಾನಕ್ಕೆ ಒಂದು ದಿನ ಬಾಕಿ ಇರುವಂತೆ ಪ್ರಚಾರ ರಂಗೇರುತ್ತಿದೆ. ಮಾಜಿ ಶಾಸಕ ಗೋವಿಂದಪ್ಪ ಜುಟ್ಟಲ್ ಅವರ ಪುತ್ರ ಹಾಗೂ ಸೊಸೆ ಕಣದಲ್ಲಿದ್ದಾರೆ.

ಕಮಡೊಳ್ಳಿ ಗ್ರಾಮ ಪಂಚಾಯ್ತಿಯ ವಾರ್ಡ್ ಸಂಖ್ಯೆ 3ರಲ್ಲಿ ಪರಿಶಿಷ್ಟ ಪಂಗಡದ ಮಹಿಳೆ ಮೀಸಲು ಕ್ಷೇತ್ರದಿಂದ ಗೋವಿಂದಪ್ಪ ಅವರ ಹಿರಿಯ ಸೊಸೆ ಲಕ್ಷ್ಮಿ ಚಂದ್ರಶೇಖರ ಜುಟ್ಟಲ್ ಹಾಗೂ ವಾರ್ಡ್‌ ಸಂಖ್ಯೆ 7ರ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಕ್ಕೆ ಶಾಸಕರ ಪುತ್ರ ವಿಶ್ವನಾಥ ಜುಟ್ಟಲ್ ಸ್ಪರ್ಧೆಗೆ ಇಳಿದಿದ್ದಾರೆ. ಹಿರೇನರ್ತಿ ಗ್ರಾಮ ಪಂಚಾಯ್ತಿಯ ವಾರ್ಡ್ ಸಂಖ್ಯೆ 3ರಿಂದ ತಾಲ್ಲೂಕು ಪಂಚಾಯ್ತಿ ಸದಸ್ಯ ಗುರುಸಿದ್ದಗೌಡ ಮೇಲ್ಮಾಳಗಿ ಉಮೇದುವಾರರಾಗಿದ್ದಾರೆ. ಹೀಗಾಗಿ ಕಣ ರಂಗೇರಿದೆ.

ಒಟ್ಟು 26 ಗಾಮ ಪಂಚಾಯ್ತಿಗಳಲ್ಲಿ ಅವಧಿ ಇರುವ ಚಾಕಲಬ್ಬಿ, ಮಳಲಿ, ಹಾಗೂ ಪಶುಪತಿಹಾಳ ಗ್ರಾಮಗಳಲ್ಲಿ ಚುನಾವಣೆ ನಡೆಯುತ್ತಿಲ್ಲ. ಉಳಿದೆಡೆ ಅಭ್ಯರ್ಥಿಗಳು ಹಗಲಿರುಳು ಎನ್ನದೆ ಮನೆಮನೆಗೆ ಹೋಗಿ ಕೈ ಮುಗಿಯುವದು, ಕಾಲಿಗೆ ಬೀಳುವ ಮೂಲಕ ಪ್ರಚಾರ ನಡೆಸುತ್ತಿದ್ದಾರೆ.

ADVERTISEMENT

ತಾಲ್ಲೂಕಿನಲ್ಲಿ ದೊಡ್ಡ ಗ್ರಾಮ ಪಂಚಾಯ್ತಿಯಾಗಿರುವ ಸಂಶಿ, ಗುಡಗೇರಿ, ಕಮಡೊಳ್ಳಿ, ಯಲಿವಾಳ, ಹಿರೇನರ್ತಿ, ಯರಗುಪ್ಪಿ, ಇಂಗಳಗಿ, ಕುಬಿಹಾಳ, ಗೌಡಗೇರಿ, ಹರ್ಲಾಪೂರ ಮತ್ತು ಕಳಸ ಗ್ರಾಮಗಳ ಪಂಚಾಯ್ತಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳು ಎಂದು ಬಿಂಬಿಸಿಯೇ ಕಣಕ್ಕಿಳಿಸಿವೆ. ಹೀಗೆಯೇ ಪ್ರಚಾರವನ್ನೂ ಮಾಡುತ್ತಿವೆ.

ಚಳಿ ಲೆಕ್ಕಕ್ಕಿಲ್ಲ: ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಅಭ್ಯರ್ಥಿಗಳು ಪ್ರಚಾರ ಮಾಡುತ್ತಿದ್ದು, ಮತದಾರರು ಬಾಡೂಟದ ವ್ಯವಸ್ಥೆ ಮಾಡಿಸುವಂತೆ ದುಂಬಾಲು ಬೀಳುತ್ತಿದ್ದಾರೆ. ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಗುಂಪುಗುಂಪಾಗಿ ಪ್ರಚಾರ ಮಾಡುತ್ತಿರುವ ಚಿತ್ರಣಗಳು ನಿತ್ಯ ಸಾಮಾನ್ಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.