
ಧಾರವಾಡ: ರಂಗಭೂಮಿಯು ಜೀವನ ಶಿಕ್ಷಣವನ್ನು ನೀಡುವ ಮಾಧ್ಯಮ. ನಾಟಕಗಳು ಮೌಲ್ಯಾಧಾರಿತ ವಿಷಯಗಳನ್ನು ಒಳಗೊಂಡಿರುತ್ತವೆ ಎಂದು ಶಾಲಾ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಹೇಳಿದರು.
ರಂಗಾಯಣ, ಡೆಪ್ಯುಟಿ ಚನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನ ಮತ್ತು ಎಚ್.ಎಫ್.ಕಟ್ಟೀಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ ವತಿಯಿಂದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯದ ಭವನದಲ್ಲಿ ನಡೆದ ‘ಪಠ್ಯಾಧಾರಿತ ಮಕ್ಕಳ ನಾಟಕೋತ್ಸವ’ ಹಾಗೂ ‘ರಂಗ ರಶ್ಮಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ನಾಟಕವು ಸರ್ವರಿಗೂ ಶಿಕ್ಷಣ ನೀಡುವ ಚಟುವಟಿಕೆ ಆಧಾರಿತ ಮಾಧ್ಯಮವಾಗಿದೆ. ಪ್ರತಿಷ್ಠಾನವು ಪಠ್ಯಾಧಾರಿತ ನಾಟಕೋತ್ಸವವನ್ನು 31ವರ್ಷ ನಡೆಸಿಕೊಂಡು ಬಂದಿದೆ. ಶಿಕ್ಷಕರು ವಿದ್ಯಾರ್ಥಿಗಳು ಪಾಲಕರೂ ಹಾಗೂ ಸಮುದಾಯ ಎಲ್ಲರೂ ಇದರಲ್ಲಿ ಪಾಲ್ಗೊಳ್ಳುವುದು ಶ್ಲಾಘನೀಯ. ಪಠ್ಯಾಧಾರಿತ ಚಟುವಟಿಕೆಗಳ ಮೂಲಕ ಕಲಿಕೆಯಿಂದ ಮಕ್ಕಳಿಗೆ ವಿಷಯಗಳ ಚೆನ್ನಾಗಿ ಮನದಟ್ಟಾಗುತ್ತವೆ’ ಎಂದು ಹೇಳಿದರು.
ಆಕಾಶವಾಣಿ ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ಶರಣಬಸವ ಚೋಳಿನ ಮಾತನಾಡಿ, ನಾಟಕವು ಎಲ್ಲರಿಗೂ ಪ್ರಿಯವಾದುದು. ನಾಟಕವನ್ನು ಶಿಕ್ಷಣಕ್ಕಾಗಿ ಬಳಸಿಕೊಂಡಿದ್ದು ಹೊಸತನ. ಮಕ್ಕಳ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದರಿಂದ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ರಂಗಭೂಮಿಯಲ್ಲಿ ತೊಡಗಿಕೊಂಡ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡುವುದರಿಂದ ಇನ್ನೂ ಕ್ರಿಯಾಶೀಲವಾಗಿ ಕೆಲಸ ಮಾಡಲು ಅವರಿಗೆ ಪ್ರೇರಣೆಯಾಗುತ್ತದೆ ಎಂದರು.
ನಾಟಕೋತ್ಸವ ಸಂಯೋಜಕ ಕೆ.ಎಚ್.ನಾಯಕ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, 31 ವರ್ಷದವರೆಗೆ ನಿರಂತರವಾಗಿ ಪಠ್ಯಾಧಾರಿತ ನಾಟಕೋತ್ಸವವನ್ನು ದತ್ತಿ ದಾನಿಗಳ ನೆರವಿನಿಂದ ನಡೆಸಿದ್ದೇವೆ. ಶಿಕ್ಷಕ ಸಮೂಹದ ಕೊಡುಗೆ ಅಪಾರ ಎಂದು ಹೇಳಿದರು. ಶಿಕ್ಷಕರಿಗೆ ರಂಗಭೂಮಿಯ ಮನ್ನಣೆ ಸಿಗಬೇಕೆಂದು ಈ ವರ್ಷದಿಂದ ‘ರಂಗರಶ್ಮಿ’ ಪ್ರಶಸ್ತಿಯನ್ನು ಪ್ರತಿಷ್ಠಾನ ನೀಡುತ್ತಿದೆ’ ಎಂದು ಹೇಳಿದರು.
ರಂಗಕರ್ಮಿ ವೀಣಾ ಮೋಡಕ ಅವರಿಗೆ ‘ರಂಗರಶ್ಮಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಯಟ್ ಪ್ರಾಚಾರ್ಯ ಬಸವರಾಜ ನಾಲತ್ವಾಡ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಎಂ.ಎಂ.ಚಿಕ್ಕಮಠ, ಪ್ರತಿಷ್ಠಾನದ ಗೌರವ ನಿರ್ದೇಶಕ ಗಿರೀಶ ಪದಕಿ, ಶಿವಶಂಕರ ಹಿರೇಮಠ, ಸಿದ್ಧರಾಮ ಮನಹಳ್ಳಿ, ರೋಹಿಣಿ ದಾನಿ, ಕುಮದ್ವತಿ ಭರಮಗೌಡ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.