ADVERTISEMENT

ಕರಾವಳಿಯಲ್ಲಿ ದೇಶದ್ರೋಹಿಗಳಿದ್ದಾರೆ: ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 1 ಮೇ 2025, 15:44 IST
Last Updated 1 ಮೇ 2025, 15:44 IST
   

ಹುಬ್ಬಳ್ಳಿ: ‘ಸಮುದ್ರ ಮಾರ್ಗದಿಂದ ಬಂದು ದೇಶದ್ರೋಹ ಚಟುವಟಿಕೆ ಮಾಡುವ ಒಂದು ವರ್ಗವೇ ಕರಾವಳಿಯಲ್ಲಿ ಬೀಡುಬಿಟ್ಟಿದ್ದು, ಅಲ್ಲಿಯ ಜನರು ಜಾಗೃತರಾಗಿರಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್ ಮತ್ತು ಇನ್ನರ್‌ವೀಲ್ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್‌ ನಗರದ ಹೊಸೂರಿನ ಕೊಲ್ಲೂರ ಬಡಾವಣೆ ಮೈದಾನದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಕರಾವಳಿ ಉತ್ಸವಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ದೇಶದ್ರೋಹ ಚಟುವಟಿಕೆ ನಡೆಸಲು ಸಮುದ್ರ ಮಾರ್ಗವನ್ನು ಬಳಸಿಕೊಳ್ಳುತ್ತಿದ್ದಾರೆ. ಎಲ್ಲಿಂದಲೋ ಬಂದು ಸ್ಥಳೀಯರನ್ನು ಮದುವೆಯಾಗಿ ದೇಶವಾಸಿಗಳ ಹಾಗೆ ಇರುತ್ತಾರೆ. ನಮ್ಮದೇ ಅನ್ನ ಉಂಡು, ಗಾಳಿ ಸೇವಿಸಿ ನಮಗೇ ದ್ರೋಹ ಎಸಗುತ್ತಾರೆ. ಅಂಥವರ ಬಗ್ಗೆ ಮಾಹಿತಿಯಿದ್ದರೆ ಸರ್ಕಾರಕ್ಕೆ ತಿಳಿಸಬೇಕು’ ಎಂದು ವಿನಂತಿಸಿದರು.

ADVERTISEMENT

‘ಕಾಶ್ಮೀರದಲ್ಲಿ ಅಮಾಯಕರನ್ನು ಕೊಂದವರಿಗೆ ಕೇಂದ್ರ ಸರ್ಕಾರ ಸುಮ್ಮನೆ ಬಿಡುವುದಿಲ್ಲ. ಕಠಿಣ ಕ್ರಮ ಕೈಗೊಳ್ಳಲಿದೆ’ ಎಂದರು.

ಸಚಿವ ಸಂತೋಷ ಲಾಡ್‌ ಮಾತನಾಡಿ, ‘ಭಾರತ ಯಾವ ರಾಜಕೀಯ ಪಕ್ಷಕ್ಕೂ ಸೇರಿಲ್ಲ. ಇದು ನೂರಮೂವತ್ತು ಕೋಟಿ ಜನರ ದೇಶವಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಯಾವ ಪಕ್ಷವೂ ಹಣ ತಂದು ಕೊಡುವುದಿಲ್ಲ. ತೆರಿಗೆ ರೂಪದಲ್ಲಿ ನಾವು ನೀಡಿರುವ ಹಣವನ್ನೇ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ. ಸರ್ಕಾರ ಜಾರಿಗೆ ತರುವ ಯೋಜನೆಗಳನ್ನು ಜನರು ಪ್ರಶ್ನೆ ಮಾಡಬೇಕು. ಹಾಗಾದಾಗ ಮಾತ್ರ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅರ್ಥ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.