ADVERTISEMENT

ಚುನಾವಣೆ ತಡವಾಗಿದ್ದರೆ ಸಮಸ್ಯೆಗಳೇ ಇರುತ್ತಿರಲಿಲ್ಲ: ಜಗದೀಶ ಶೆಟ್ಟರ್

ವಾರ್ಡ್ 55ರ ಅಭ್ಯರ್ಥಿ ಡಾ. ಪಾಂಡುರಂಗ ಪಾಟೀಲ ಪರ ಪ್ರಚಾರ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 7:52 IST
Last Updated 30 ಆಗಸ್ಟ್ 2021, 7:52 IST
ಹುಬ್ಬಳ್ಳಿಯ ವಾರ್ಡ್ 55ರ ಅಭ್ಯರ್ಥಿ ಡಾ. ಪಾಂಡುರಂಗ ಪಾಟೀಲ ಪರವಾಗಿ ಶಾಸಕ ಜಗದೀಶ ಶೆಟ್ಟರ್ ಅವರು  ದಾಳಿಂಬರಪೇಟೆಯಲ್ಲಿ ಸೋಮವಾರ ಪ್ರಚಾರ ನಡೆಸಿದರು
ಹುಬ್ಬಳ್ಳಿಯ ವಾರ್ಡ್ 55ರ ಅಭ್ಯರ್ಥಿ ಡಾ. ಪಾಂಡುರಂಗ ಪಾಟೀಲ ಪರವಾಗಿ ಶಾಸಕ ಜಗದೀಶ ಶೆಟ್ಟರ್ ಅವರು  ದಾಳಿಂಬರಪೇಟೆಯಲ್ಲಿ ಸೋಮವಾರ ಪ್ರಚಾರ ನಡೆಸಿದರು   

ಹುಬ್ಬಳ್ಳಿ: ‘ಮಹಾನಗರ ಪಾಲಿಕೆಯ ಚುನಾವಣೆ ನಾಲ್ಕು ತಿಂಗಳು ತಡವಾಗಿ ಆರಂಭವಾಗಿದ್ದರೆ, ನಗರದಲ್ಲಿ ಮೂಲಸೌಕರ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಇರುತ್ತಿರಲಿಲ್ಲ’ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

ವಾರ್ಡ್ 55ರ ಅಭ್ಯರ್ಥಿ ಡಾ. ಪಾಂಡುರಂಗ ಪಾಟೀಲ ಪರವಾಗಿ ದಾಳಿಂಬರಪೇಟೆಯಲ್ಲಿ ಸೋಮವಾರ ಪ್ರಚಾರ ನಡೆಸಿದ ಅವರು, ‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ಹೊಸ ರಸ್ತೆ ನಿರ್ಮಾಣಕ್ಕೆ ಟೆಂಡರ್ ಆಗಿರುವುದರಿಂದ ಹಳೇ ರಸ್ತೆಗಳ ದುರಸ್ತಿಯಾಗಿಲ್ಲ’ ಎಂದರು.

‘ಪಕ್ಷದ ಅಭ್ಯರ್ಥಿಗಳಿಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ವಿರೋಧ ಪಕ್ಷಗಳಿಗೆ ಸ್ಥಳೀಯ ಅಭ್ಯರ್ಥಿಗಳು ಸಿಗದೆ, ಬೇರೆ ವಾರ್ಡ್‌ಗಳ ಜನರನ್ನು ತಂದು ನಿಲ್ಲಿಸಿದ್ದಾರೆ‌. ಹಾಗಾಗಿ, ಚುನಾವಣೆಯಲ್ಲಿ ಪಕ್ಷವು ಮೂರನೇ ಸಲವೂ ಅಧಿಕಾರ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಸ್ಥಳೀಯ ಅಭ್ಯರ್ಥಿ ಪಾಂಡುರಂಗ ಪಾಟೀಲ ಅವರು ಸಜ್ಜನರು. ಹಿರಿಯರಾದ ಅವರು ಆರಂಭದಿಂದಲೂ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಪಾಲಿಕೆಯಲ್ಲಿ ಅವರಂತಹರು ಇರಬೇಕಾದ ಅಗತ್ಯವಿದೆ. ಹಾಗಾಗಿ, ಎಲ್ಲರೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು’ ಎಂದು ಸಲಹೆ ನೀಡಿದರು.

ಅಭ್ಯರ್ಥಿ ಡಾ. ಪಾಂಡುರಂಗ ಪಾಟೀಲ ಮಾತನಾಡಿ, ‘ಜಗದೀಶ ಶೆಟ್ಟರ್ ಮತ್ತು ಪ್ರಲ್ಹಾದ ಜೋಶಿ ಅವರು ಅವಳಿನಗರದಲ್ಲಿ ಅಭಿವೃದ್ಧಿ ಪರ್ವ ಆರಂಭಿಸಿದ್ದಾರೆ. 24x7 ನೀರು, ಹೊಸ‌ ರಸ್ತೆಗಳು ಸೇರಿದಂತೆ ಹಲವು ಕಾಮಗಾರಿಗಳಿಂದಾಗಿ ನಗರದ ಚಹರೆ ಬದಲಾಗಿದೆ. ವಾರ್ಡ್‌ನಲ್ಲೂ ಹಲವು ಕೆಲಸಗಳಾಗಿವೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅದೇ ರೀತಿ, ಪಾಲಿಕೆಯಲ್ಲೂ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಹಾಗಾಗಿ, ಮತ ವಿಭಜನೆಗೆ ಅವಕಾಶ ನೀಡದೆ ಎಲ್ಲರೂ ಬಿಜೆಪಿ ಅಭ್ಯರ್ಥಿಗೆ ಮತ ನೀಡಬೇಕು’ ಎಂದು ಮನವಿ ಮಾಡಿದರು.

ಸ್ಥಳೀಯ ಮುಖಂಡರಾದ ತೋಟಪ್ಪ ನಿಡಗುಂದಿ, ಮಹೇಶ ತಿಪ್ಪಣ್ಣ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.