ADVERTISEMENT

ಫೆ.27 ರಿಂದ ವರ್ಚುವಲ್‌ ಮೂಲಕ ಟೈಕಾನ್‌ ಸಮಾವೇಶ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 7:17 IST
Last Updated 25 ಫೆಬ್ರುವರಿ 2021, 7:17 IST
ಟೈಕಾನ್ ಸಮಾವೇಶ
ಟೈಕಾನ್ ಸಮಾವೇಶ   

ಹುಬ್ಬಳ್ಳಿ: ಟೈಕಾನ್‌ ವತಿಯಿಂದ ಫೆ. 27 ಮತ್ತು 28 ರಂದು ಎರಡು ದಿನಗಳ ಕಾಲ ವರ್ಚುವಲ್‌ ಮೂಲಕ ಟೈಕಾನ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹುಬ್ಬಳ್ಳಿ ಶಾಖೆ ಅಧ್ಯಕ್ಷ ಅಜಯ್‌ ಹಂಡಾ, ಸಂಯೋಜಕ ವಿಜಯ ಮಾನೆ, ಕೋವಿಡ್‌–19 ಹಿನ್ನೆಲೆಯಲ್ಲಿ ಸಮ್ಮೇಳನವನ್ನು ವರ್ಚುವಲ್‌ ಆಗಿ ಆಯೋಜಿಸಲಾಗಿದೆ. ಈಗಾಗಲೇ ದೇಶ, ವಿದೇಶದಲ್ಲಿರುವ 8 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದರು.

ಫೆ.27 ರಂದು ಬೆಳಿಗ್ಗೆ 10ಕ್ಕೆ ನಡೆಯುವ ಮಹಿಳಾ ಸಮ್ಮೇಳನದಲ್ಲಿ ಮಹಿಳೆ ಮತ್ತು ಕನಸುಗಳು ಕುರಿತು ಫೆಮಿನಾ ಆ್ಯಂಡ್‌ ಹಲೊ ಮ್ಯಾಗಜಿನ್‌ ಸಂಪಾದಕಿ ರುಚಿಕಾ ಮೆಹ್ತಾ, ಉದ್ಯಮಶೀಲತೆಯಲ್ಲಿ ಸಾಧನೆ ಕುರಿತು ಪಾರ್ಕ್ ಹೋಟೆಲ್ಸ್‌ ಅಧ್ಯಕ್ಷೆ ಪ್ರಿಯಾ ಪಾಲ್‌, ಪ್ರತಿಕೂಲ ಪರಿಸ್ಥಿತಿ ಎದುರಿಸುವ ಕುರಿತು ಕ್ರೀಡಾ ಸಾಧಕಿ ಡಾ.ಕೋಮಲ ರಾವ್ ಹಾಗೂ ನವಭಾರತ ನಿರ್ಮಾಣದಲ್ಲಿ ಮೂಲಸೌಕರ್ಯಗಳ ಪಾತ್ರ ಕುರಿತು ಬ್ರಿಡ್ಜ್‌ ಗ್ರುಪ್‌ ವ್ಯವಸ್ಥಾಪಕ ನಿರ್ದೇಶಕಿ ನಿರುಪಾ ಶಂಕರ ಮಾತನಾಡಲಿದ್ದಾರೆ ಎಂದು ಹೇಳಿದರು.

ADVERTISEMENT

ಮಾರುಕಟ್ಟೆಯಲ್ಲಿ ವ್ಯಾಪಾರ ವೃದ್ಧಿ ಕುರಿತು ಪುಣೆಯ ಟೈ ವತಿಯಿಂದ ‘ಮಾಸ್ಟರ್‌ ಕ್ಲಾಸ್‌’ ಹಾಗೂ ಸ್ಟಾರ್ಟ್‌ ಅಪ್‌ ಆರಂಭಿಸುವ ಕುರಿತು ಯೋಜನೆಯಡಿ ಹೊಸ ಯೋಜನೆಗಳನ್ನು ಹೊಂದಿ 16 ಮಂದಿ ನವೋದ್ಯಮಿಗಳನ್ನು ಆಯ್ಕೆ ಮಾಡಲಾಗಿದ್ದು, ಅವರು ತಮ್ಮ ಯೋಜನೆಗಳ ಬಗೆಗೆ ‘ಪಿಚ್‌ ಹಬ್‌’ನಡಿ ವಿವರಿಸಲಿದ್ದಾರೆ ಎಂದರು.

ಫೆ.28 ರಂದು ನಡೆಯುವ ಉದ್ಯಮಿಗಳ ಸಮ್ಮೇಳನದಲ್ಲಿ ದೇಶಪಾಂಡೆ ಫೌಂಡೇಷನ್‌ ಸಂಸ್ಥಾಪಕ ಡಾ.ಗುರುರಾಜ ದೇಶಪಾಂಡೆ, ಶಾಸಕ ಕೃಷ್ಣ ಬೈರೇಗೌಡ, ಚಿತ್ರಕತೆಗಾರ ಪರವೇಜ್‌ ಶೇಖ್, ಡಾ.ಗೌತಮ ಬನ್ಸಾಲಿ, ಟೈ ಗ್ಲೋಬಲ್‌ ಅಧ್ಯಕ್ಷ ಮಹಾವೀರ ಶರ್ಮಾ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಕ್ರೀಡಾಪಟು ಮಿಲ್ಕಾ ಸಿಂಗ್‌, ಸೇಲ್ಸ್‌ ಫೈವ್‌ ಎಕ್ಸ್ ಸಂಸ್ಥಾಪಕ ಅನ್ಮೋಲ್‌ ಗರ್ಗ್, ಎಸ್‌ಟಿಪಿಐ ವ್ಯವಸ್ಥಾಪಕ ನಿರ್ದೇಶಕ ಡಾ.ಓಂಕಾರ ಪೈ ಮಾತನಾಡಲಿದ್ದಾರೆ.

‘ಇವನಿಂಗ್‌ ವಿತ್‌ ಲೆಜೆಂಡ್ಸ್‌ನಲ್ಲಿ ಜೆಎಸ್‌ಡಬ್ಲು ಗ್ರುಪ್‌ ಅಧ್ಯಕ್ಷ ಸಜ್ಜನ ಜಿಂದಾಲ್‌ ಹಾಗೂ ಸಂಶೋಧಕ ಸೋನಮ್‌ ವಾಂಗ್‌ಚುಕ್‌ ಮಾತನಾಡಲಿದ್ದಾರೆ. ಎಲ್ಲ ಅತಿಥಿಗಳ ಸಂದೇಶಗಳನ್ನು ಈಗಾಗಲೇ ರೆಕಾರ್ಡ್‌ ಮಾಡಲಾಗಿದ್ದು, ಆ ದಿನ ಪ್ರಸಾರ ಮಾಡಲಾಗುವುದು ಎಂದರು.

ಛಾಯಾಗ್ರಾಹಕ, ಸಂಗೀತ ಸಂಯೋಜಕ, ಗಾಯಕ, ವೈಸ್‌ ಓವರ್‌ ನೀಡುವ ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಸಿನಿಮಾ ಶೈಲಿಯಲ್ಲಿ ಅತಿಥಿಗಳ ಸಂದೇಶಗಳನ್ನು ಚಿತ್ರೀಕರಿಸಲಾಗಿದ್ದು, ಆನ್‌ಲೈನ್‌ನಲ್ಲಿ ಪ್ರಸಾರ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಟೈ ಬಿಸಿನೆಸ್‌ ಅವಾರ್ಡ್‌ ನೀಡಲಾಗುವುದು. ಉತ್ತರ ಕರ್ನಾಟಕದ 16 ಮಂದಿ ಸಾಧಕರ ವಿಡಿಯೊ ಮಾಡಲಾಗಿದ್ದು, ಕಾರ್ಯಕ್ರಮದ ಮಧ್ಯೆ ಅವುಗಳ ಪ್ರಸಾರ ಮಾಡಲಾಗುವುದು ಎಂದು ಹೇಳಿದರು.

ಉದ್ಯಮಿಗಳಾದ ವಿಜೇಶ್‌ ಸೈಗಲ್‌, ಗೌರವ ಶಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.