ADVERTISEMENT

ತಂಬಾಕು ಸೇವನೆ: ಪ್ರತಿ ನಿಮಿಷಕ್ಕೆ ಒಂದು ಸಾವು -ಎಂ.ಐ. ಕಲ್ಲಪ್ಪನವರ

ವಿಶ್ವ ತಂಬಾಕುರಹಿತ ದಿನ ಆಚರಣೆ: ಜನಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 15:42 IST
Last Updated 2 ಜೂನ್ 2021, 15:42 IST

ಹುಬ್ಬಳ್ಳಿ:‘ತಂಬಾಕು ಸೇವನೆಯಿಂದ ವಿಶ್ವದಲ್ಲಿ ಪ್ರತಿ ಸೆಕೆಂಡ್‌ಗೆ ಒಬ್ಬರಂತೆ, ವರ್ಷಕ್ಕೆ 60 ಲಕ್ಷ ಜನ ಸಾಯುತ್ತಿದ್ದಾರೆ. ಒಂದು ಸಿಗರೇಟ್ ಅಥವಾ ಬೀಡಿ ಸೇವನೆಯಿಂದ ಮನುಷ್ಯನ ಆಯಸ್ಸು 7 ನಿಮಿಷ ಕಡಿಮೆಯಾಗುತ್ತದೆ. ಸಾವಿನ ಸಂಖ್ಯೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ’ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಎಂ.ಐ. ಕಲ್ಲಪ್ಪನವರ ಹೇಳಿದರು.

‘ವಿಶ್ವ ತಂಬಾಕುರಹಿತ ದಿನ’ದ ಅಂಗವಾಗಿ ನಗರದ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್.ಕೆ ವಿಜ್ಞಾನ ಸಂಸ್ಥೆಯ ಯುವ ರೆಡ್ ಕ್ರಾಸ್ ಘಟಕವು, ತಂಬಾಕು ನಿಯಂತ್ರಣ ಕೋಶದ ಸಹಯೋಗದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ (ವೆಬಿನಾರ್) ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ತಂಬಾಕು ಉತ್ಪನ್ನಗಳ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಯುವಜನರು ತಂಬಾಕಿನಿಂದ ದೂರ ಇರಬೇಕು’ ಎಂದರು.

‘ಶ್ವಾಸಕೋಶದ ಕ್ಯಾನ್ಸರ್, ಬಾಯಿ ಕ್ಯಾನ್ಸರ್, ಮೆದುಳು ಪಾರ್ಶ್ವವಾಯು, ಹೃದಯ ಸಂಬಂಧಿ ಕಾಯಿಲೆಗಳು, ಗರ್ಭಪಾತ, ಗರ್ಭದ ಕ್ಯಾನ್ಸರ್, ಅಶಕ್ತ ಮಕ್ಕಳ ಜನನ, ಶಿಶು ಮರಣ, ಗ್ಯಾಂಗ್ರಿನ್‌ನಂತಹ ಕಾಯಿಲೆಗಳುತಂಬಾಕು ಮತ್ತು ಅದರ ಉತ್ಪನ್ನಗಳ ಸೇವನೆಯಿಂದ ಬರುತ್ತವೆ’ ಎಂದು ವಿವರಿಸಿದರು.

ADVERTISEMENT

‘ತಂಬಾಕಿನಲ್ಲಿ ಹೊಗೆಸಹಿತ ಮತ್ತು ಹೊಗೆರಹಿತ ಉತ್ಪನ್ನಗಳಿವೆ. ಬೀಡಿ, ಸಿಗರೇಟು, ಗುಟ್ಕಾ, ಬಂಗಿ ಮತ್ತು ಚಿಲಿಮೆ ಹೊಗೆಸಹಿತ ಉತ್ಪನ್ನಗಳು. ಜರ್ದಾ, ತಂಬಾಕು ಪುಡಿ, ಅಫೀಮು, ಗಾಂಜಾ, ಹೆರಾಯಿನ್ ಹೊಗೆರಹಿತ ಉತ್ಪನ್ನಗಳಾಗಿವೆ. 1498ರಲ್ಲಿ ಪೋರ್ಚುಗೀಸರು ತಂಬಾಕು ಸಸಿಗಳನ್ನು ಮೊದಲು ಗೋವಾಕ್ಕೆ ತಂದರು. ನಂತರ ಅದು ಭಾರತದಾದ್ಯಂತ ವ್ಯಾಪಿಸಿತು’ ಎಂದು ಹೇಳಿದರು.

‘ರಾಜ್ಯದಲ್ಲಿ ಶೇ 12ರಷ್ಟು ಜನ ಧೂಮಪಾನ ಹಾಗೂ ಶೇ 20ರಷ್ಟು ತಂಬಾಕು ಉತ್ಪನ್ನ ಬಳಸುತ್ತಿದ್ದಾರೆ.ಸರ್ಕಾರ ‘ತಂಬಾಕು ನಿಯಂತ್ರಣ ಕಾಯ್ದೆಯನ್ನು 2003ರಲ್ಲಿ ಜಾರಿಗೆ ತಂದಿದೆ. ಅದರಂತೆ ಶಾಲಾ- ಕಾಲೇಜುಗಳ ಸಮೀಪ ಮಾರಾಟ ನಿಷೇಧ, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧಿಸಲಾಗಿದೆ. ನಿಯಮ ಮೀರಿದರೆ ದಂಡ ಮತ್ತು ಶಿಕ್ಷೆ ವಿಧಿಸಲಾಗುತ್ತಿದೆ. ಕಾಲೇಜು ಸಮೀಪದಲ್ಲಿರುವ ಹುಕ್ಕಾ ಬಾರ್ ಮತ್ತು ತಂಬಾಕು ಉತ್ಪನ್ನಗಳ ಅಂಗಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ದುಶ್ಚಟಗಳಿಗೆ ಬಲಿಯಾದವರಿಗೆ ಇಲಾಖೆಯಿಂದ ಆಪ್ತ ಸಮಾಲೋಚನೆ ಘಟಕದಿಂದ ಮಾರ್ಗದರ್ಶನ ನೀಡಲಾಗುತ್ತಿದೆ’ ಎಂದರು.

ಕಾಲೇಜಿನ ಪ್ರಾಚಾರ್ಯೆ ಡಾ. ಉಮಾ ವಿ. ನೇರ್ಲೆಅಧ್ಯಕ್ಷತೆ ವಹಿಸಿದ್ದರು.ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ವಿಜಯಶ್ರೀ ಜಿ. ಹಿರೇಮಠ, ಗಣಿತ ಉಪನ್ಯಾಸಕಿ ಡಾ. ಅರ್ಚನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.