ADVERTISEMENT

ಫೆ. 28ರ ಒಳಗೆ ಮುಗಿಸಲು ತಾಕೀತು

ಪೂರ್ಣಗೊಳ್ಳದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ: ಸಂಸದ ಜೋಶಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 13:07 IST
Last Updated 7 ಫೆಬ್ರುವರಿ 2019, 13:07 IST
ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ನಿರ್ಮಾಣವಾಗುತ್ತಿರುವ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ವೀಕ್ಷಿಸಲು ಬಂದಿದ್ದ ಸಂಸದ ಪ್ರಹ್ಲಾದ ಜೋಶಿ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು
ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ನಿರ್ಮಾಣವಾಗುತ್ತಿರುವ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ವೀಕ್ಷಿಸಲು ಬಂದಿದ್ದ ಸಂಸದ ಪ್ರಹ್ಲಾದ ಜೋಶಿ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು   

ಹುಬ್ಬಳ್ಳಿ: ಕಿಮ್ಸ್‌ನಲ್ಲಿ ನಿರ್ಮಿಸಲಾಗುತ್ತಿರುವ 200 ಹಾಸಿಗೆಗಳ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ನಿಗದಿತ ಅವಧಿಯಲ್ಲಿ ಮುಗಿಸದ ಗುತ್ತಿಗೆದಾರರ ವಿರುದ್ಧ ಸಂಸದ ಪ್ರಹ್ಲಾದ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.

ಕಾಮಗಾರಿಗೆ ಕೇಂದ್ರ ಸರ್ಕಾರ ಸಾಕಷ್ಟು ಹಣ ಕೊಟ್ಟಿದೆ, ಎಲ್ಲ ಅನುಕೂಲ ಮಾಡಿಕೊಟ್ಟ ಮೇಲೂ ಕೆಲಸ ಮುಗಿಸಿಲ್ಲ. ಒಪ್ಪಂದದ ಪ್ರಕಾರ 2018ರ ಫೆಬ್ರುವರಿಯಲ್ಲಿಯೇ ಕಾಮಗಾರಿ ಮುಗಿಯಬೇಕಿತ್ತು. ಕೊಟ್ಟ ಅವಧಿ ಮುಗಿದು ಒಂದು ವರ್ಷವಾದರೂ ಕಾಮಗಾರಿ ಪೂರ್ಣಗೊಳಿಸಿಲ್ಲವೆಂದರೆ ನೀವು ಹೇಗೆ ಕೆಲಸ ಮಾಡುತ್ತೀರಿ ಎಂಬುದು ಗೊತ್ತಾಗುತ್ತದೆ ಎಂದು ಪ್ರಹ್ಲಾದ ಜೋಶಿ ಕಾಮಗಾರಿಯ ಯೋಜನಾ ಅಧಿಕಾರಿ ಅನಿಲ ಸಂಪಗಾವ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ಹೈಟ್‌ ಕಂಪನಿ ಕಾಮಗಾರಿ ನಿರ್ಮಾಣದ ಹೊಣೆ ಹೊತ್ತಿದೆ.

ಒಟ್ಟು ₹ 150 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಕೇಂದ್ರ ಸರ್ಕಾರ ₹ 120 ಕೋಟಿ ಹಾಗೂ ರಾಜ್ಯ ಸರ್ಕಾರ ₹ 30 ಕೋಟಿ ಅನುದಾನ ನೀಡಿದೆ. ಕಾಮಗಾರಿ ಪೂರ್ಣಗೊಂಡಿದ್ದರೆ ಫೆ. 10ರಂದು ನಗರಕ್ಕೆ ಬರಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದ ಆಸ್ಪತ್ರೆ ಉದ್ಘಾಟನೆ ಮಾಡಿಸುವ ಯೋಜನೆ ಜೋಶಿ ಅವರದ್ದಾಗಿತ್ತು.

ADVERTISEMENT

ಕಿಮ್ಸ್‌ಗೆ ಬರುವ ಮೊದಲು ಗಬ್ಬೂರು ಕ್ರಾಸ್‌ನಲ್ಲಿ ‘ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡಿದ್ದರೆ ಅದನ್ನು ಮೋದಿ ಉದ್ಘಾಟಿಸಲಿದ್ದಾರೆ’ ಎಂದಿದ್ದರು. ಆದರೆ, ಕಾಮಗಾರಿ ನೋಡಿ ಅಸಮಾಧಾನಗೊಂಡರು.

ಆಸ್ಪತ್ರೆಯ ಕೆಳಮಹಡಿಯ ಹಾಲ್‌ನಲ್ಲಿಯೇ ನಿಂತು ‘ಹಿಂದಿನ ಯಾವ ಸರ್ಕಾರಗಳೂ ನೀಡದಷ್ಟು ಅನುದಾನ ನಮ್ಮ ಸರ್ಕಾರ ನೀಡಿದೆ. ಹಣವಿದ್ದರೂ ಕೆಲಸ ಏಕೆ ಮಾಡಲ್ಲ’ ಎಂದು ಪ್ರಶ್ನಿಸಿದರು. ವಿಳಂಬ ಮಾಡಿರುವ ಹೈಟ್ ಕಂಪನಿಯಲ್ಲಿ ದಾಖಲೆಗಳ ಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಸಿದರು.

ಗುತ್ತಿಗೆದಾರರು ತಾಂತ್ರಿಕ ಕಾರಣಗಳಿಂದ ಕಾಮಗಾರಿ ತಡವಾಗಿದೆ ಎಂದು ನೀಡಿದ ಸಮಜಾಯಷಿಗೆ ‘ಇದು ಸರಿಯಾದ ಉತ್ತರವಲ್ಲ.‌ ಫೆ. 28ರ ಒಳಗೆ ಕಾಮಗಾರಿ ಮುಗಿಯಬೇಕು. ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಆಸ್ಪತ್ರೆ ಉದ್ಘಾಟನೆಯಾಗಬೇಕು. ಮಾರ್ಚ್‌ ಮೊದಲ ವಾರದಲ್ಲಿ ಉದ್ಘಾಟನೆ ಮಾಡಲಾಗುವುದು’ ಎಂದರು. ಆಸ್ಪತ್ರೆ ಮುಂಭಾಗದಲ್ಲಿ ಕಾಮಗಾರಿಯ ಮಾಹಿತಿ ಪಡೆದು ಕಟ್ಟಡವನ್ನು ಪೂರ್ಣ ಪರಿಶೀಲಿಸದೇ ವಾಪಸ್ ತೆರಳಿದರು.

ಶಾಸಕ ಜಗದೀಶ ಶೆಟ್ಟರ್‌, ಕಿಮ್ಸ್‌ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.