ADVERTISEMENT

ಸಂಚಾರ ಸಮಸ್ಯೆ: ವಾಹನಗಳ ದಟ್ಟಣೆ

ಮುಗಿಯದ ಕಾಮಗಾರಿ, ಟ್ರಾಫಿಕ್‌ ಜಾಮ್‌ನಲ್ಲಿ ಹೈರಾಣಾಗುತ್ತಿರುವ ವಾಹನ ಸವಾರರು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 4:47 IST
Last Updated 7 ಫೆಬ್ರುವರಿ 2026, 4:47 IST
ಹುಬ್ಬಳ್ಳಿಯ ಗಬ್ಬೂರು ವೃತ್ತದಲ್ಲಿ ನಡೆಯುತ್ತಿರುವ ಅಷ್ಟಪಥ ಹುಬ್ಬಳ್ಳಿ–ಧಾರವಾಡ ಬೈಪಾಸ್‌ ಕಾಮಗಾರಿಯ ದೃಶ್ಯ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಗಬ್ಬೂರು ವೃತ್ತದಲ್ಲಿ ನಡೆಯುತ್ತಿರುವ ಅಷ್ಟಪಥ ಹುಬ್ಬಳ್ಳಿ–ಧಾರವಾಡ ಬೈಪಾಸ್‌ ಕಾಮಗಾರಿಯ ದೃಶ್ಯ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ಹುಬ್ಬಳ್ಳಿ ನಗರದ ಒಳಗೆ ಹಾಗೂ ಹೊರಗೆ ನಡೆಯುತ್ತಿರುವ ಮೇಲ್ಸೇತುವೆ ಹಾಗೂ ಬೈಪಾಸ್‌ ರಸ್ತೆ ಕಾಮಗಾರಿಯಿಂದಾಗಿ ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ವಾಹನ ಸವಾರರು ಸಹ ಎಲ್ಲೆಂದರಲ್ಲಿ ನುಗ್ಗುತ್ತ ಸುಗಮ ಸಂಚಾರಕ್ಕೆ ತೊಡಕಾಗುತ್ತಿದ್ದಾರೆ.

ನಗರದ ಮಧ್ಯಭಾಗದಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಏಳು ಪ್ರಮುಖ ರಸ್ತೆಯ ಕೂಡು ಸ್ಥಳವಾದ ಇಲ್ಲಿಯ ಯಾವ ರಸ್ತೆಯಲ್ಲಿ ಸಂಚರಿಸಿದರೆ, ಎಲ್ಲಿಗೆ ತಲುಪುತ್ತೇವೆ ಎನ್ನುವ ಗೊಂದಲ ಹೆಚ್ಚಾಗುತ್ತಿದೆ.

ವೃತ್ತದ ಸುತ್ತ ಮೇಲ್ಸೇತುವೆಯ ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ, ಅಲ್ಲಲ್ಲಿಯೇ ಸಾಮಗ್ರಿಗಳನ್ನು ಸಂಗ್ರಹಿಸಿಡಲಾಗಿದೆ. ಕೆಲವು ಕಡೆ ಆಳವಾಗಿ ತೆಗ್ಗು ತೋಡಿ ಕಾಮಗಾರಿ ನಡೆಸಲಾಗುತ್ತಿದೆ. ಮುನ್ನೆಚ್ಚರಿಕೆಯಾಗಿ ಬ್ಯಾರಿಕೇಡ್‌ ಅಳವಡಿಸಿ, ಸಂಚಾರ ನಿಷೇಧಿಸಲಾಗಿದೆ. ಮೊದಲಿದ್ದ ರಸ್ತೆಗಳಲ್ಲಿ ಬೃಹತ್‌ ಫಿಲ್ಲರ್‌ಗಳು ನಿರ್ಮಾಣವಾಗಿರುವುದರಿಂದ, ವಾಹನಗಳ ಸಂಚಾರಕ್ಕೆ ರಸ್ತೆಯೇ ಇಲ್ಲದಂತಾಗಿದೆ. ಪರಿಣಾಮ ವಾಹನಗಳ ಸಂಚಾರ ದಟ್ಟಣೆ ಮಿತಿಮೀರುತ್ತಿದೆ.

ADVERTISEMENT

‘ಸಂಜೆ 5ರ ನಂತರ ಹೊಸೂರು ವೃತ್ತ, ಭಗತ್‌ ಸಿಂಗ್‌ ವೃತ್ತ, ಬಸವವನ, ನ್ಯೂಕಾಟನ್‌ ಮಾರ್ಕೆಟ್‌, ಚನ್ನಮ್ಮ ವೃತ್ತ, ರಾಯಣ್ಣ ವೃತ್ತ, ಹಳೇ ಕೋರ್ಟ್‌ ವೃತ್ತ, ಮಿರ್ಜಾನಕರ್‌ ಪೆಟ್ರೋಲ್‌ ಬಂಕ್‌, ಇಂದಿರಾಗಾಜಿನ ಮನೆ ಮುಂಭಾಗ, ದೇಶಪಾಂಡೆನಗರ, ಪಿಂಟೋ ರಸ್ತೆ, ಸಿದ್ದಪ್ಪ ಕಂಬಳಿ ಮಾರ್ಗದ ಬಳಿ ವಿಪರೀತ ಎನ್ನುವಷ್ಟು ವಾಹನಗಳ ದಟ್ಟಣೆ ಉಂಟಾಗುತ್ತಿದೆ. ಒಮ್ಮೊಮ್ಮೆ ವಾಹನಗಳು ಅರ್ಧಗಂಟೆ ನಿಂತಲ್ಲಿಯೇ ನಿಲ್ಲುತ್ತವೆ. ದಟ್ಟಣೆ ತಪ್ಪಿಸಿಕೊಂಡು ಹೊರಬರುವಷ್ಟರಲ್ಲಿ ಸವಾರರು ಹೈರಾಣಾಗುತ್ತಾರೆ. ಸಂಚಾರ ಪೊಲೀಸರು ನೋಡಿಯೂ ನೋಡದಂತೆ ಇರುತ್ತಾರೆ’ ಎಂದು ಬೈಕ್‌ ಸವಾರ ದೇವೇಂದ್ರ ಕುರುಹಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಹೊರವಲಯದ ಗಬ್ಬೂರು ವೃತ್ತದ ಬಳಿಯಂತೂ ಮುಖ್ಯರಸ್ತೆ ಎಲ್ಲಿದೆ ಎಂದು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ. ಹುಬ್ಬಳ್ಳಿ–ಧಾರವಾಡ ಬೈಪಾಸ್‌ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭಾಗವಾಗಿ ವೃತ್ತದ ಮಧ್ಯಭಾಗದಲ್ಲಿ ಮೇಲ್ಸೇತುವೆ ನಿರ್ಮಿಸಿದ್ದು, ಅಲ್ಲಿಯೂ ಕಾಮಗಾರಿ ಪ್ರಗತಿಯಲ್ಲಿದೆ. ಟ್ಯಾಂಕರ್‌, ಲಾರಿ ಓಡಾಡುವ ಸ್ಥಳದಲ್ಲಿಯೇ ಪ್ರಯಾಣಿಕರು ಅಪಾಯ ಎದುರಿಸುತ್ತ ಬಸ್‌ಗೆ ಕಾಯುತ್ತ ನಿಲ್ಲುತ್ತಾರೆ.

‘ತಾತ್ಕಾಲಿಕವಾಗಿ ಪರ್ಯಾಯ ರಸ್ತೆ ನಿರ್ಮಿಸಿದ್ದರೂ, ಅದರ ಅಕ್ಕಪಕ್ಕ ಸಾಲಾಗಿ ಲಾರಿಗಳು ನಿಲ್ಲುವುದರಿಂದ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ಬೆಂಗಳೂರಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿ ಪಕ್ಕ ಸಂಜೆ ವೇಳೆ ಸಾಲಾಗಿ ಡಬ್ಬ ಅಂಗಡಿಗಳು ಕಾರ್ಯ ನಿರ್ವಹಿಸುತ್ತವೆ. ಇದರಿಂದಲೂ ಸಮಸ್ಯೆಯಾಗುತ್ತಿದೆ. ಬೈಪಾಸ್‌ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು’ ಎಂದು ಬೆಳಗಾವಿಯ ಕಾರು ಚಾಲಕ ಇಬ್ರಾಹಿಂ ಐನಾಪುರ ವಿನಂತಿಸಿದರು.

ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಬಳಿ ಮಂಗಳವಾರ ಉಂಟಾಗಿದ್ದ ಟ್ರಾಫಿಕ್‌ ಜಾಮ್‌.
ನಗರದಲ್ಲಿ ನಡೆಯುತ್ತಿರುವ ಬೃಹತ್‌ ಕಾಮಗಾರಿಯಿಂದಾಗಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಸುಗಮ ಸಂಚಾರಕ್ಕೆ ಪ್ರಯತ್ನಿಸಲಾಗುವುದು
–ರವೀಶ್‌ ಸಿ.ಆರ್‌. ಡಿಸಿಪಿ ಹು–ಧಾ ಮಹಾನಗರ

ಏಕಮುಖ ರಸ್ತೆಯಲ್ಲಿ ದ್ವಿಮುಖ ಸಂಚಾರ

‘ಹುಬ್ಬಳ್ಳಿಯ ಅಯೋಧ್ಯಾ ಹೋಟೆಲ್‌ ಎದುರಿನ ರಸ್ತೆ ಹಾಗೂ ಮಿರ್ಜಾನಕರ್‌ ಪೆಟ್ರೋಲ್‌ ಬಂಕ್‌ನಿಂದ ಹಳೇ ಬಸ್‌ ನಿಲ್ದಾಣಕ್ಕೆ ಬರುವ ರಸ್ತೆಯನ್ನು ಏಕಮುಖ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಆದರೆ ಇಕ್ಕಟ್ಟಾದ ಈ ರಸ್ತೆಗಳಲ್ಲಿ ದ್ವಿಮುಖವಾಗಿ ವಾಹನಗಳು ಸಂಚರಿಸುವುದರಿಂದ ಅಲ್ಲಲ್ಲಿಯೇ ವಾಹನಗಳು ಸಿಲುಕುತ್ತಿವೆ. ಸಂಚಾರ ನಿಯಮ ಉಲ್ಲಂಘಿಸುವ ಬೈಕ್‌ ಸವಾರರನ್ನು ತಡೆದು ದಂಡ ಹಾಕುವ ಕರ್ತವ್ಯದಲ್ಲಿರುವ ಸಂಚಾರ ಪೊಲೀಸರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎನ್ನುವುದು ತಿಳಿಯುತ್ತಿಲ್ಲ’ ಎನ್ನುವುದು ಸವಾರರ ಸಾಮಾನ್ಯ ಆರೋಪವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.