
ಧಾರವಾಡ: ‘ಸಾರಿಗೆ ಇಲಾಖೆಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು (1991ರಿಂದ 2020 ರವರೆಗೆ) ದಂಡ ಮೊತ್ತದ ಶೇ 50 ಪಾವತಿಸಿ ಇತ್ಯರ್ಥಪಡಿಸಿಕೊಳ್ಳಲು ಡಿ.12ರವರೆಗೆ ಅವಕಾಶ ಇದೆ’ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಕೆ.ಟಿ.ಹಾಲಸ್ವಾಮಿ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬೆಳಗಾವಿ ವಿಭಾಗದಲ್ಲಿ 11,557, ಕಲಬುರಗಿ ವಿಭಾಗದಲ್ಲಿ 7,473 ಪ್ರಕರಣಗಳು ಇವೆ. ಹುಬ್ಬಳ್ಳಿ ಧಾರವಾಡ ವ್ಯಾಪ್ತಿಯಲ್ಲಿ 3,051 ಈ ಪ್ರಕರಣಗಳು ಇವೆ. ದಂಡ ರಿಯಾಯಿತಿ ಅವಕಾಶ ಬಳಸಿಕೊಂಡು ಪ್ರಕರಣ ಇತ್ಯರ್ಥಡಿಸಿಕೊಳ್ಳಬಹುದು’ ಎಂದು ಹೇಳಿದರು.
‘ಕೇಂದ್ರಾಡಳಿತ ಪ್ರದೇಶ ಪಾಂಡಿಚೇರಿಯಲ್ಲಿ ನೋಂದಣಿ ಶುಲ್ಕ ಕಡಿಮೆ ಎಂದು ರಾಜ್ಯದ ಕೆಲವರು ವಾಹನಗಳನ್ನು (ಕಾರು, ಜೀಪು...) ನೋಂದಣಿ ಮಾಡಿಸಿ ಇಲ್ಲಿ ಓಡಾಡಿಸುವುದು ಕೆಲವೆಡೆ ಕಂಡುಬಂದಿದೆ. ಹುಬ್ಬಳ್ಳಿ ಧಾರವಾಡ ವ್ಯಾಪ್ತಿಯಲ್ಲಿ ತಪಾಸಣೆ ವೇಳೆಯ ಪಾಂಡಿಚರಿ ನೋಂದಣಿಯ ಸುಮಾರು 15 ವಾಹನಗಳನ್ನು ಪತ್ತೆಹಚ್ಚಿ, ₹ 1.5 ಕೋಟಿ ದಂಡ ವಿಧಿಸಲಾಗಿದೆ’ ಎಂದರು.
‘ಆಟೊಗಳು, ಮ್ಯಾಕ್ಸಿ ಕ್ಯಾಬ್‌ಗಳಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಒಯ್ಯುವ ದೂರುಗಳು ಇವೆ. ವಾಹನಗಳಲ್ಲಿ ಮಿತಿಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ಒಯ್ಯುವುದು ಕಂಡುಬಂದಿದೆ. ಈಗಾಗಲೇ ಹುಬ್ಬಳ್ಳಿ–ಧಾರವಾಡ ವ್ಯಾಪ್ತಿಯಲ್ಲಿ 49 ಪ್ರಕರಣ ದಾಖಲಿಸಲಾಗಿದೆ. ಅವಳಿನಗರದಲ್ಲಿ ನಿರಂತರ ತಪಾಸಣೆ ನಡೆಸುತ್ತೇವೆ’ ಎಂದು ತಿಳಿಸಿದರು.
‘ಟ್ರ್ಯಾಕ್ಟರ್‌ನ ಟ್ರೈಲರ್ ಹಿಂಬದಿ ಪ್ರತಿಫಲನ (ರಿಫ್ಲೆಕ್ಷನ್) ಬ್ಯಾನರ್ ಅಳವಡಿಸಬೇಕು. ರಾತ್ರಿ ಹೊತ್ತಿನಲ್ಲಿ ಪ್ರತಿಫಲನ ನೋಡಿ ಹಿಂದಿನ ವಾಹನದವರಿಗೆ ಟ್ರ್ಯಾಕ್ಟರ್ ಸಾಗುತ್ತಿರುವುದು ತಿಳಿಯುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.